ಕಾಫಿ ಅಥವಾ ಚಹಾ ಎಂಬ ಪೇಯಗಳು ನಮಗೆ ಮಾನಸಿಕವಾಗಿ ಹತ್ತಿರ. ಇವು ಪೇಯ ಮಾತ್ರ ಅಲ್ಲ, ಭಾವನೆಯೂ ಕೂಡಾ ಎಂಬುದು ಅನೇಕರ ಅಭಿಮತ. ಹಾಗಾಗಿಯೋ ಏನೋ, ಏನೇ ಬಿಟ್ಟರೂ, ಕಾಫಿ, ಚಹಾ ಬಿಡುವಲಿ ನಾವು ಭಾರತೀಯರು ಸೋಲುತ್ತೇವೆ. ಕಾಫಿ, ಚಹಾವನ್ನೇ ಇಟ್ಟುಕೊಂಡು ಬಹಳಷ್ಟು ಪ್ರಯೋಗಗಳು ನಡೆದಿವೆ. ಥರಹೇವಾರಿ ಕಾಫಿಗಳು, ಚಹಾಗಳು ಬಂದಿವೆ. ಬಗೆಬಗೆಯ ಮಾದರಿಯಲ್ಲಿ ಕಾಫಿ ಚಹಾ ಮಾಡಿಕೊಂಡು ರುಚಿ ನೋಡಿದ್ದೇವೆ. ಹೀಗೆಯೇ ಈಗೊಂದು ಕಾಫಿ ಎಲ್ಲೆಡೆ ವೈರಲ್ (Viral trend) ಆಗುತ್ತಿದೆ. ಬ್ಲ್ಯಾಕ್ ಕಾಫಿ ಕುಡಿದು ತೂಕ ಇಳಿಸಿಕೊಳ್ಳಿ ಎಂದವರು ಈಗ ಈ ಹೊಸ ಕಾಫಿ (bulletproof coffee) ಕುಡಿದು ಇನ್ನೊಂದಿಷ್ಟು ಕೆಜಿ ತೂಕ ಇಳಿಸಿಕೊಳ್ಳಿ ಎನ್ನುತ್ತಿದ್ದಾರೆ!
ಹೌದು. ಇದೊಂದು ತೂಕ ಇಳಿಸಿಕೊಳ್ಳುವ ಗುಣಗಳಿರುವ ಕಾಫಿಯಂತೆ. ಹೆಸರು ಬುಲೆಟ್ ಪ್ರೂಫ್ ಕಾಫಿ! ಈ ಬಗೆಯ ಕಾಫಿ ಮಾಡಿ ಕುಡಿಯುವುದರಿಂದ ತೂಕ ಇಳಿಯುತ್ತದಂತೆ. ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಶನ್ ಈ ಬಗ್ಗೆ ವರದಿಯೊಂದನ್ನು ಪ್ರಕಟಿಸಿದ್ದು, ಅದರ ಪ್ರಕಾರ, ಕಾಫಿಯಲ್ಲಿರುವ ಕೆಫಿನ್ ಅಂಶವು ಹಸಿವನ್ನು ಕಡಿಮೆ ಮಾಡುವುದರಿಂದ ತೂಕ ಇಳಿಯುವಂತೆ ಮಾಡುತ್ತದೆ ಎಂದಿದೆ. ಅಷ್ಟೇ ಅಲ್ಲ, ಕಾಫಿ, ನೈಸರ್ಗಿಕವಾದ ಉಷ್ಣಪ್ರೇರಕವಾಗಿರುವುದರಿಂದ ದೇಹದಲ್ಲಿ ಉಷ್ಣತೆ ಹೆಚ್ಚಿ, ತೂಕ ಇಳಿಯುತ್ತದೆ. ಕಾಫಿಗೆ ಸಕ್ಕರೆ ಹಾಕದೆ ಇದ್ದರೆ ಹಾಗೂ ಹಿತಮಿತವಾಗಿ ಕುಡಿದರೆ ಕಾಫಿಯ ಮೂಲಕವೂ ತೂಕ ಇಳಿಸಿಕೊಳ್ಳಬಹುದು ಎನ್ನುತ್ತದೆ ಈ ವರದಿ.
ಹಾಗಾದರೆ, ಈ ಬುಲೆಟ್‌ಪ್ರೂಫ್ ಕಾಫಿ ಎಂದರೇನು ಎಂಬ ಕುತೂಹಲವೇ? ಈ ಬುಲೆಟ್ ಪ್ರೂಫ್ ಕಾಫಿ ಎಂಬ ಹೊಸ ವೈರಲ್ ಅವತಾರವೆತ್ತಿ ಬಂದ ಕಾಫಿ ಡೇವ್ ಆಸ್ಪ್ರೇ ಎಂಬ ಉದ್ಯಮಿಯೊಬ್ಬರ ಕೈಚಳಕದ ಮಹಾತ್ಮೆ. ಅವರು ಮೂರು ವಸ್ತುಗಳನ್ನು ಬೆರೆಸಿ ಈ ಕಾಫಿ ಮಾಡಿದ್ದಾರೆ. ಕಾಫಿ, ಬೆಣ್ಣೆ ಹಾಗೂ ಎಣ್ಣೆ! ಹೌಹಾರಬೇಡಿ. ಹೌದು. ಕಾಫಿ ಪುಡಿಯ ಜೊತೆಗೆ ಬೆಣ್ಣೆ ಹಾಗೂ ಎಂಸಿಟಿ ಅಂದರೆ ಮೀಡಿಯ ಚೈನ್ ಟ್ರೈಗ್ಲಿಸರೈಡ್ ಎಣ್ಣೆಯನ್ನು ಬೆರೆಸಿ ಮಾಡಿದ್ದಾರೆ. ಇಲಿ ಬೆಣ್ಣೆ ಹಾಗೂ ಈ ಎಣ್ಣೆಯ ಬದಲಾಗಿ ಕೆಲವರು ಇನ್ನಷ್ಟು ಆರೋಗ್ಯಕರವಾದ ತೆಂಗಿನೆಣ್ಣೆ ಹಾಗೂ ದೇಸೀ ತುಪ್ಪವನ್ನು ಬಳಸಿಯೂ ಬುಲೆಟ್‌ಪ್ರೂಫ್ ಕಾಫಿ ಮಾಡಿಕೊಂಡಿದ್ದಾರೆ!
ಬೆಳಗ್ಗೆ ಎದ್ದ ಕೂಡಲೇ ಈ ಬುಲೆಟ್ ಪ್ರೂಫ್ ಕಾಫಿಯನ್ನು ಕುಡಿಯುವುದರಿಂದ ಖಂಡಿತವಾಗಿಯೂ ತೂಕ ಇಳಿಕೆ ಮಾಡಬಹುದು ಎನ್ನುತ್ತಾರೆ ಅವರು. ಈಗಾಗಲೇ ಹಲವರು ಈ ಟ್ರೆಂಡ್ ಫಾಲೋ ಮಾಡುತ್ತಿದ್ದಾರೆ ಕೂಡಾ. ಹಾಗಾದರೆ ಇದು ಆರೋಗ್ಯಕರ ಎಂಬ ಪ್ರಶ್ನೆಯೂ ಕೆಲವರನ್ನು ಹಿಂಬಾಲಿಸುತ್ತಿದೆ. ಕಾಫಿಯನ್ನು ಹಿತಮಿತವಾಗಿ ಬಳಸಿದರೆ, ಖಂಡಿತವಾಗಿಯೂ ಅದು ಆರೋಗ್ಯಕ್ಕೆ ಒಳ್ಳೆಯದನ್ನೇ ಮಾಡುತ್ತದೆ ಎಂಬ ಅಧ್ಯಯನಗಳು ನಮ್ಮ ಮುಂದಿವೆ. ಜೊತೆಗೆ ಇದು ಶಕ್ತಿವರ್ಧಕ ಕೂಡಾ. ಆದರೆ, ಕಾಫಿಗೆ ಬೆಣ್ಣೆ ಹಾಗೂ ಎಂಸಿಟಿ ಹಾಕುವುದರಿಂದ ಕೊಬ್ಬು ಜಾಸ್ತಿಯೇ ಆಗುತ್ತದಲ್ಲವೇ ಎಂಬ ಪ್ರಶ್ನೆ ಎಲ್ಲರಲ್ಲೂ ಬರಬಹುದು. ದ್ರವಾಹಾರದ ಮೂಲಕ ಸೀದಾ ನೇರವಾಗಿ ರಕ್ತಕ್ಕೇ ಬಹುಬೇಗನೆ ಸೇರುವುದರಿಂದ ಪಿತ್ತಕೋಶದ ಮೂಲಕ ಚಯಾಪಚಯ ಕ್ರಿಯೆಗೆ ಒಳಪಡುತ್ತದೆ. ಜೊತೆಗೆ ಆಗಾಗ ತಿನ್ನಬೇಕೆನಿಸುವ ಚಪಲ ಕಡಿಮೆಯಾಗುತ್ತದೆ. ಇದರಿಂದ ತೂಕ ಹಿಡಿತಕ್ಕೆ ಬರುತ್ತದೆ ಎಂಬ ವಾದ ಬುಲೆಟ್ ಪ್ರೂಫ್ ಕಾಫಿ ಪರವಾಗಿರುವ ಮಂದಿಯದ್ದು. ಹಾಗಾಗಿ ಇದು ಒಳ್ಳೆಯ ಪ್ರಿ ವರ್ಕೌಟ್ ಡ್ರಿಂಕ್ ಎಂದೂ ಅವರು ಹೇಳುತ್ತಾರೆ. ಆದರೆ, ದೇಹಕ್ಕೆ ಬೇಕಾದ ಪೋಷಕಾಂಶಗಳನ್ನೇ ನೀಡದೆ, ಹೀಗೆ ತೂಕ ಇಳಿಸುವ ಪ್ರಕ್ರಿಯೆ ಒಳ್ಳೆಯದಲ್ಲ. ಕೇವಲ ದೇಹದ ಹಸಿವನ್ನು ಕಂಟ್ರೋಲ್ ಮಾಡುವ ಮೂಲಕ ಈ ರೀತಿಯ ಡಯಟ್ ಮಾಡಿದರೆ ಖಂಡಿತವಾಗಿಯೂ ಆರೋಗ್ಯಕ್ಕೆ ಹಾನಿ. ಮೊದಲೇ, ಕೊಬ್ಬು ಕಡಿಮೆ ಮಾಡುವ ಡಯಟ್ ಮಾಡಿ, ಕೊಬ್ಬಿನ ಆಹಾರಗಳನ್ನೇ ಈ ಕಾಫಿಯ ಮೂಲಕ ಸೇವಿಸುವುದರಿಂದ ತೂಕ ಹೆಚ್ಚುವ ಅಪಾಯವೂ ಇದೆ ಎಂಬ ವಾದ ಇನ್ನೊಂದು ವರ್ಗದ್ದು.
ಅಷ್ಟಕ್ಕೂ, ಬುಲೆಟ್ ಪ್ರೂಫ್ ಕಾಫಿ ಮಾಡುವುದು ಹೇಗೆ ಅಂತೀರಾ? ತುಂಬಾ ಸಿಂಪಲ್. ಒಂದರಿಂದ ಎರಡು ಟೀಚಮಚ ಉಪ್ಪುರಹಿತ ಬೆಣ್ಣೆ ಅಥವಾ ತುಪ್ಪ, ಜೊತೆಗೆ ಒಂದೆರಡು ಚಮಚ ತೆಂಗಿನೆಣ್ಣೆಯನ್ನು ನಿಮ್ಮ ಕಾಫಿ ಡಿಕಾಕ್ಷನ್‌ಗೆ ಸೇರಿಸಿ. ಬೇಕಾದಷ್ಟು ನೀರೂ ಆಕಿ. ಇಲ್ಲಿ ಹಾಲಾಗಲೀ, ಸಕ್ಕರೆಯಾಗಲೀ ಹಾಕುವುದಿಲ್ಲ. ಕೇವಲ ಮೂರೇ ವಸ್ತುಗಳಿಂದ ಹೀಗೆ ಕಾಫಿ ಮಾಡಿಕೊಂಡು ಬಿಸಿ ಮಾಡಿ ಕುಡಿಯಿರಿ. ಸಿಹಿ ಬೇಕಿದ್ದರೆ ಜೇನುತುಪ್ಪ ಹಾಕಬಹುದು.
ಆದರೆ ಹೀಗೆಲ್ಲ ಟ್ರೆಂಡ್ ಫಾಲೋ ಮಾಡಿ ಎಡವಟ್ಟನ್ನೂ ಮಾಡಿಕೊಳ್ಳಬೇಡಿ, ಎಚ್ಚರ. ಎಲ್ಲದಕ್ಕೂ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ!
ಇದನ್ನೂ ಓದಿ: Viral News: ಖಾತೆಯಲ್ಲಿ ಇದ್ದಿದ್ದೇ 17 ರೂ. ಆದ್ರೆ ಹುಂಡಿಗೆ 100 ಕೋಟಿ ರೂ. ಚೆಕ್ ಹಾಕಿದ್ದ ಭಕ್ತ!