ಜಬಲ್ಪುರ: ಟ್ರಾಫಿಕ್ ಸಿಗ್ನಲ್ನಲ್ಲಿ ನಿಂತಿದ್ದ ದ್ವಿಚಕ್ರವಾಹನಗಳು, ಕಾರು, ಆಟೋಗಳಿಗೆ ಹಿಂದಿನಿಂದ ಬಂದ ಬಸ್ವೊಂದು ಡಿಕ್ಕಿ ಹೊಡೆದು, ಒಬ್ಬರು ಮೃತಪಟ್ಟಿದ್ದಾರೆ. ಈ ದುರಂತದಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ. ಇದು ಮೇಲ್ನೋಟಕ್ಕೆ ಬಸ್ ಚಾಲಕನ ಪ್ರಮಾದ ಎಂದೇ ಗೋಚರಿಸುತ್ತದೆ. ಆದರೆ ವಾಸ್ತವದಲ್ಲಿ ಆಗಿದ್ದೇ ಬೇರೆ. ಬಸ್ ಚಾಲಕನನ್ನೂ ದೂರುವಂತಿಲ್ಲ. ಬಸ್ ಚಲಾಯಿಸಿಕೊಂಡು ಹೋಗುತ್ತಿದ್ದ ಚಾಲಕ, ಅಲ್ಲೇ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾನೆ. ಆತನ ಜೀವ ಹೋಗುತ್ತಿದ್ದಂತೆ ಬಸ್ ನಿಯಂತ್ರಣ ಕಳೆದುಕೊಂಡು, ಉಳಿದ ವಾಹನಗಳಿಗೆ ಡಿಕ್ಕಿ ಹೊಡೆದಿದೆ.
ಅಂದಹಾಗೇ, ದುರಂತ ನಡೆದಿದ್ದು ಮಧ್ಯಪ್ರದೇಶ ಜಬಲ್ಪುರದಲ್ಲಿ. ಇದು ನಗರದೊಳಗೇ ಸಂಚರಿಸುವ ಬಸ್ ಆಗಿದ್ದು, ರಾಣಿತಲ್ಗೆ ಹೋಗುತ್ತಿತ್ತು. ಚಾಲಕ ಹರ್ದೇವ್ ಪಾಲ್ (60) ಎಂದಿನಂತೆ ಬಸ್ ಡ್ರೈವ್ ಮಾಡಿಕೊಂಡು ಹೋಗುತ್ತಿದ್ದರು. ಆದರೆ ಮಾರ್ಗ ಮಧ್ಯೆಯೇ ಅವರಿಗೆ ಹೃದಯಾಘಾತ ಆಗಿ, ಸ್ಟೀರಿಂಗ್ ವೀಲ್ ಮೇಲೆ ಬಿದ್ದಿದ್ದಾರೆ. ಆಗ ಬಸ್ ನಿಯಂತ್ರಣ ಕಳೆದು ಹೋಗಿ, ಟ್ರಾಫಿಕ್ ಸಿಗ್ನಲ್ನಲ್ಲಿ ನಿಂತಿದ್ದವರ ಮೇಲೆ ಹರಿದಿದೆ.
ಬಸ್ ಡಿಕ್ಕಿ ಹೊಡೆದ ರಭಸಕ್ಕೆ ದ್ವಿಚಕ್ರ ವಾಹನ ಸವಾರರೊಬ್ಬರು ಮೃತಪಟ್ಟಿದ್ದಾರೆ. ಬಸ್ ಚಕ್ರದ ಅಡಿಗಾಗಿ ಮಾರುದೂರ ಎಳೆದುಕೊಂಡು ಹೋಗಿ ದಾರುಣವಾಗಿ ಮೃತಪಟ್ಟಿದ್ದಾಗಿ ವರದಿಯಾಗಿದೆ. ಇನ್ನು ಆಟೋದಲ್ಲಿ ಇದ್ದ ಮಕ್ಕಳೂ ಸೇರಿ ಆರು ಮಂದಿ ಗಾಯಗೊಂಡಿದ್ದು, ಎಲ್ಲರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬಸ್ ಚಾಲಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ತಪಾಸಣೆ ಮಾಡಿದ ವೈದ್ಯರು, ಜೀವ ಅದಾಗಲೇ ಹೋಗಿದೆ. ಹಠಾತ್ ಹೃದಯಾಘಾತವೇ ಚಾಲಕನ ಸಾವಿಗೆ ಕಾರಣ ಎಂದು ಹೇಳಿದ್ದಾರೆ.
ಇದನ್ನೂ ಓದಿ: Viral Video| ಪ್ರೀ ವೆಡ್ಡಿಂಗ್ ಫೋಟೋಶೂಟ್ ವೇಳೆ ಕೆರಳಿದ ಗಜ; ಸ್ವಲ್ಪದರಲ್ಲೇ ಪಾರಾದ ಮದುಮಕ್ಕಳು