ಚಳಿಗಾಲವೆಂದರೆ ಸೂರ್ಯ ಮೇಲೆ ಬಂದರೂ ಹಾಸಿಗೆ ಬಿಟ್ಟೇಳಲಾಗದ ಆಲಸ್ಯ, ಚಳಿಗಾಲವೆಂದರೆ ಬಿಸಿಬಿಸಿ ಬಜ್ಜಿ ಪಕೋಡಾ ಜಿಲೇಬಿಗಳನ್ನು ಎಣ್ಣೆಯಿಂದ ತೆಗೆಯುತ್ತಿದ್ದ ಹಾಗೇ ಬಾಯಿಗಿಡುವ ಕಾಲ, ಚಳಿಗಾಲವೆಂದರೆ ಬಿಸಿಬಿಸಿ ಹಬೆಯಾಡುವ ಚಹಾ, ಕಾಫಿಯನ್ನು ಮೆಲ್ಲಗೆ ಹೀರುತ್ತಾ, ಎರಡೂ ಕೈಗಳನ್ನು ಬೆಚ್ಚನೆಯ ಲೋಟವನ್ನು ಬಳಸಿ ಹಿಡಿದು ಸಂಭ್ರಮಿಸುವ ಕಾಲ ಹೀಗೆ ಉದ್ದಕ್ಕೆ ಹೇಳುತ್ತಾ ಹೋಗಬಹುದು. ಆದರೆ, ಚಳಿಗಾಲವೆಂದರೆ ಗಡಗಡ ನಡುಗುತ್ತಾ ಹಿಮದಲ್ಲಿ ಡ್ಯಾನ್ಸ್ ಮಾಡಬಹುದು ಎಂಬ ಕಲ್ಪನೆಯನ್ನೇನಾದರೂ ಮಾಡಿದ್ದೀರಾ? ಅದೂ ಮೈನಸ್ ೪೦ ಡಿಗ್ರಿ ಚಳಿಯಲ್ಲಿ?
ಹೌದು, ಮೂಗಿನಿಂದ ಸಿಂಬಳವೂ ಸುರಿಯಲಿಕ್ಕೆ ಸಾಧ್ಯವಿಲ್ಲದ ಮೈನಸ್ ೪೦ ಡಿಗ್ರಿ ಚಳಿಯಲ್ಲಿ ಕೆನಡಾದ ಸಾಮಾಜಿಕ ಜಾಲತಾಣದ ಇನ್‌ಫ್ಲುಯೆಂಜರ್ ಒಬ್ಬರು ಮೈನಸ್ ನಲವತ್ತು ಡಿಗ್ರಿಯ ಚಳಿಯಲ್ಲಿ ಮನೆಯಿಂದ ಹೊರಗೆ ಬಂದು ಹಿಮದಲ್ಲಿ ಬಾಂಗ್ಡಾ ನೃತ್ಯ ಮಾಡಿದ್ದಾರೆ. ಆ ಮೂಲಕ ಚಳಿಯಲ್ಲಿ ಬೆಚ್ಚನೆಯ ಹಾಸಿಗೆ ಬಿಟ್ಟೇಳಲಾಗದ ಎಲ್ಲರಿಗೂ ನೃತ್ಯ ಮಾಡಲು ಪ್ರೇರಣೆ ನೀಡಿದ್ದಾರೆ.
ಪಂಜಾಬ್ ಮೂಲದ ಪಂಧೇರ್ ಎಂಬವರು ಟ್ವಿಟರ್‌ನಲ್ಲಿ ತನ್ನದೊಂದು ವಿಡಿಯೋ ಶೇರ್ ಮಾಡಿದ್ದು, ಅದರಲ್ಲಿ ಹೀಗೆ ಬರೆದುಕೊಂಡಿದ್ದಾರೆ. ʻಮೈನಸ್ ನಲುವತ್ತು ಡಿಗ್ರಿ. ನನ್ನ ಈ ಯುಕೂನ್‌ನ ಮನೆಯ ಹೊರಗಡೆ ಎಂಥಾ ಚಳಿಯಿದೆಯೆಂದರೆ ಪ್ರಕೃತಿಯಿಡೀ ಸ್ತಬ್ಧವಾಗಿದೆ. ಬೀಸುವ ಗಾಳಿಯೂ ಮರಗಟ್ಟಿಸುವಂತಿದ್ದರೂ ಶ್ವಾಸಕೋಶಗಳಿಗೆ ತಾಜಾವಾಗಿಯೇ ಅನಿಸುತ್ತಿದೆ. ಇಂತಹ ಸಹಜ ಪ್ರಾಕೃತಿಕ ಸೌಂದರ್ಯವಿರುವ ಈ ಜಾಗದಲ್ಲಿ ನನಗೊಂದು ಡ್ಯಾನ್ಸ್ ಮಾಡಿ ನನ್ನನ್ನೂ, ಜೊತೆಗೆ ಎಲ್ಲರನ್ನೂ ಬೆಚ್ಚಗಾಗಿಸುವ ಬಯಕೆ ಆಗುತ್ತಿದೆ. ಹಾಗಾಗಿ ಈ ಡ್ಯಾನ್ಸ್. ಆ ಮೂಲಕ ಇಂತಹ ಹವೆಯಲ್ಲಿ ಉತ್ಸಾಹ, ಖುಷಿ ಹಾಗೂ ಸ್ವಲ್ಪ ಪಾಸಿಟಿವಿಟಿಯನ್ನು ಎಲ್ಲರಿಗೂ ಕಳುಹಿಸುತ್ತಿದ್ದೇನೆʼ ಎಂದು ಬರೆದು ೫೬ ಸೆಕೆಂಡುಗಳ ತನ್ನದೊಂದು ವಿಡಿಯೋ ಶೇರ್ ಮಾಡಿದ್ದಾರೆ.
ಇದನ್ನೂ ಓದಿ | Viral video | ಹಗ್ಗದ ಸಹಾಯವಿಲ್ಲದೆ 122 ಮೀಟರ್ ಎತ್ತರದ ಕಟ್ಟಡವೇರಿದ ಸಾಹಸಿ!
ಈ ವಿಡಿಯೋ ನೋಡಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮಂದಿ ಮೆಚ್ಚಿಕೊಂಡಿದ್ದು, ಇಂತಹ ಚಳಿಯಲ್ಲೂ ಹೀಗೆ ಕುಣಿದ ಅವರ ಪಾಸಿಟಿವ್ ಮನೋಭಾವಕ್ಕೆ ಭೇಷ್ ಎಂದಿದ್ದಾರೆ. ಕೆಲವರು, ನೀವು ಡ್ಯಾನ್ಸ್ ಮಾಡಿದ್ದು ನೋಡಿಯೇ ಇರಲಿಲ್ಲ ಎಂದರೆ ಇನ್ನೂ ಹಲವರು, ನಿಮ್ಮ ಮಾತಿನಂತೆಯೇ ಇದು ಈ ಚಳಿಗಾಲದಲ್ಲಿ ಬೆಚ್ಚಗಿನ ಖುಷಿಯನ್ನುಎಲ್ಲೆಡೆ ಹಂಚುತ್ತಿದೆ ಎಂದಿದ್ದಾರೆ.
ಮೈನಸ್ ನಲುವತ್ತು! ದೇವ್ರೇ… ಇಷ್ಟೊಂದು ಚಳಿಯಲ್ಲೂ ಡ್ಯಾನ್ಸ್ ಮಾಡಿ ಪಾಸಿಟಿವ್ ಮನೋಭಾವ ತೋರಿಸುತ್ತಿರುವ ನಿಮಗೆ ಒಳ್ಳೆಯದಾಗಲಿ. ಹೀಗೆಯೇ ಖುಷಿಯಾಗಿರಿ ಎಂದು ಶುಭ ಹಾರೈಸಿದ್ದಾರೆ. ಮೈನಸ್ ನಲವತ್ತರಲ್ಲಿ ಮನೆಯಿಂದ ಹೊರಗೆ ಕಾಲಿಟ್ಟರೆ, ಹೀಗೆ ಡ್ಯಾನ್ಸ್ ಮಾಡಿದರಷ್ಟೇ ಬೆಚ್ಚಗಾದೀತು. ನಿಮ್ಮ ಐಡಿಯಾ ಚೆನ್ನಾಗಿದೆ ಎಂದು ಕೆಲವರು ಕಾಲೆಳೆದಿದ್ದಾರೆ.
ಇದನ್ನೂ ಓದಿ | Viral Video | ನೀರಿನಲ್ಲಿ ಈಜುತ್ತಿದ್ದ ಮೊಸಳೆ ಜಂಪ್ ಮಾಡಿ ಡ್ರೋನ್ಗೇ ಬಾಯಿ ಹಾಕಿದ ಥ್ರಿಲ್ಲಿಂಗ್ ವಿಡಿಯೊ ಇದು!