ಲಕ್ನೋ: ವಾಹನಗಳಲ್ಲಿ ರಸ್ತೆ ಮೇಲೆ ಚಲಿಸುವಾಗ ಎಚ್ಚರಿಕೆಯಿಂದ ಇರಬೇಕು, ಅನುಚಿತವಾಗಿ ವರ್ತಿಸಬಾರದು ಎಂದು ಪೊಲೀಸ್ ಇಲಾಖೆ ಸಾರ್ವಜನಿಕರನ್ನು ಎಚ್ಚರಿಸುತ್ತಲೇ ಇರುತ್ತದೆ. ಆದರೂ ಕೆಲವರು ಎಲ್ಲ ಎಚ್ಚರಿಕೆಗಳನ್ನು ಮೀರಿ ವಾಹನಗಳಲ್ಲಿ ಸ್ಟಂಟ್ ಮಾಡಲು ಹೋಗುತ್ತಾರೆ. ಕೊನೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದು, ಭಾರೀ ಮೊತ್ತವನ್ನು ದಂಡವಾಗಿ ಪಾವತಿಸುವ ಸ್ಥಿತಿಯೂ ಬರುತ್ತದೆ. ಅದೇ ರೀತಿಯಲ್ಲಿ ಉತ್ತರ ಪ್ರದೇಶದ ನೋಯ್ಡಾದಲ್ಲಿ ವ್ಯಕ್ತಿಯೊಬ್ಬ ಕಾರಿನ ರೂಫ್ ಮೇಲೆ ನಿಂತು ಸ್ಟಂಟ್ ಮಾಡಿದ್ದು, ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ. ಆ ಕಾರಿನ ಮಾಲೀಕನಿಗೆ ದಂಡವೂ ಬಿದ್ದಿದೆ.
ನೋಯ್ಡಾದ ಮುಖ್ಯ ರಸ್ತೆಯೊಂದರಲ್ಲಿ ಮಂಗಳವಾರ ರಾತ್ರಿ ಮಾರುತಿ ಸುಜುಕಿ ಕಾರೊಂದು ಹೋಗುತ್ತಿತ್ತು. ದೆಹಲಿಯಲ್ಲಿ ನೋಂದಣಿ ಆಗಿರುವ ನಂಬರ್ ಅನ್ನು ಹೊಂದಿದ್ದ ಆ ಗಾಡಿನ ರೂಫ್ ಮೇಲೆ ವ್ಯಕ್ತಿಯೊಬ್ಬ ಕುಳಿತುಕೊಂಡಿರುವುದನ್ನು ಕಾಣಬಹುದಾಗಿದೆ. ಅದಲ್ಲದೆ ಕಾರನ್ನು ಓಡಿಸುತ್ತಿದ್ದ ಚಾಲಕ ಬೇಕೆಂದಲೇ ಕಾರನ್ನು ಜೋರಾಗಿ ಓಡಿಸುತ್ತಿದ್ದ. ತನ್ನ ಮುಂದಿದ್ದ ಕಾರುಗಳನ್ನು ಹೇಗೆಂದರೆ ಹಾಗೆ ಓವರ್‌ಟೇಕ್ ಮಾಡುತ್ತಿದ್ದ.
ಇದನ್ನೂ ಓದಿ: Viral Video: ಮಹಿಳೆಯನ್ನು ನದಿಗೆ ಎಳೆದೊಯ್ದು, ಸಜೀವವಾಗಿ ತಿಂದ ಮೊಸಳೆ!
ಈ ದೃಶ್ಯವನ್ನು ಕಾರಿನ ಹಿಂದೆ ಪ್ರಯಾಣಿಸುತ್ತಿದ್ದ ಬೇರೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದುಕೊಂಡಿದ್ದಾರೆ. ನಿತಿನ್ ಪರಾಶರ್ ಹೆಸರಿನವರು ಈ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಹಾಗೆಯೇ ಟ್ವೀಟ್‌ಗೆ ನೋಯ್ಡಾ ಟ್ರಾಫಿಕ್ ಪೊಲೀಸರು ಮತ್ತು ಪೊಲೀಸ್ ಇಲಾಖೆಯನ್ನು ಟ್ಯಾಗ್ ಮಾಡಿದ್ದಾರೆ.
ಈ ವಿಡಿಯೊ ಪೊಲೀಸರ ಗಮನಕ್ಕೆ ಬರುತ್ತಿದ್ದಂತೆಯೇ ಪೊಲೀಸರು ಕಾರ್ಯಪ್ರವರ್ತರಾಗಿದ್ದಾರೆ. ಕಾರಿನ ನಂಬರ್ ಆಧಾರದ ಮೇಲೆ ಕಾರಿನ ಮಾಲೀಕನಿಗೆ 26 ಸಾವಿರ ರೂ. ದಂಡ ಹಾಕಲಾಗಿದೆ. ಅದರ ಇ-ಚಲನ್ ಅನ್ನು ಪೊಲೀಸರು ನಿತಿನ್ ಅವರ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ಟ್ವೀಟ್ ಮಾಡಿದ್ದಾರೆ.
नोएडा में मौत को दावत @noidatraffic @Uppolice #Noida pic.twitter.com/RlGVLWsIjK
— Nitin Parashar (@Nitinparashar__) August 16, 2023
ಈ ಹಿಂದೆ ಕೂಡ ಇಂತದ್ದೇ ಒಂದು ಘಟನೆ ನಡೆದಿತ್ತು. ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರಿನೊಳಗಿದ್ದ ಇಬ್ಬರು ವ್ಯಕ್ತಿಗಳು ಕಾರಿನ ರೂಫ್ ಹತ್ತಲು ಯತ್ನಿಸುತ್ತಿದ್ದ ದೃಶ್ಯ ಕ್ಯಾಮೆರಾದಲ್ಲಿ ಸೆರೆಗೊಂಡಿತ್ತು. ಆ ವಿಡಿಯೊ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ಭಾರೀ ವೈರಲ್ ಆಗಿತ್ತು. ವಿಡಿಯೊ ಆಧಾರದ ಮೇಲೆ ಪೊಲೀಸರು ಆ ಕಾರಿನ ಮಾಲೀಕನಿಗೆ 23,500 ರೂ. ದಂಡವನ್ನು ವಿಧಿಸಿದ್ದರು.
ಇದನ್ನೂ ಓದಿ: Viral Video : ಮೆಟ್ರೋದಲ್ಲಿ ಸೀಟಿಗಲ್ಲ, ನಿಲ್ಲುವ ಜಾಗಕ್ಕಾಗಿಯೇ ಮಹಿಳೆಯರ ಮಾರಾಮಾರಿ!
ಈ ಎರಡೂ ಘಟನೆ ವಿಚಾರವಾಗಿ ಮಾತನಾಡಿರುವ ಟ್ರಾಫಿಕ್ ಇಲಾಖೆಯ ಪೊಲೀಸ್ ಉಪ ಆಯುಕ್ತರಾದ ಅನಿಲ್ ಕುಮಾರ್ ಅವರು, “ಇತ್ತೀಚೆಗೆ ನೋಯ್ಡಾದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆಯ ಹಲವಾರು ಪ್ರಕರಣಗಳು ಕಂಡುಬರುತ್ತಿವೆ. ಅದರಲ್ಲಿ ಇದೂ ಒಂದಾಗಿದೆ. ಜನರು ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ ಪಡೆಯುವುದಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ. ಆ ರೀತಿ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಈ ಪ್ರಕರಣದಲ್ಲೂ ಕಾರಿನ ಮಾಲೀಕನಿಗೆ ದಂಡ ಹಾಕಲಾಗಿದೆ” ಎಂದು ತಿಳಿಸಿದ್ದಾರೆ.