ಬೆಂಗಳೂರು: ಮನೆಯಲ್ಲಿ ಸಾಕಿದ ನಾಯಿಗಳು ಮತ್ತು ಬೆಕ್ಕುಗಳು ಆಟವಾಡುವುದನ್ನು ನೋಡುವುದೇ ಚಂದ. ಅಂತಹ ಸಾಕಷ್ಟು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ವೈರಲ್ ಆಗುತ್ತಿರುತ್ತವೆ. ಇದೀಗ ಅಪಾರ್ಟ್‌ಮೆಂಟ್ ಒಂದಕ್ಕೆ ಬಂದು ಸೇರಿಕೊಂಡ ಬೆಕ್ಕು ಆ ಅಪಾರ್ಟ್‌ಮೆಂಟ್‌ನ ಎಲ್ಲರ ಪ್ರೀತಿಗೂ ಪಾತ್ರವಾಗಿರುವ ವಿಶೇಷವಾದ ವಿಡಿಯೊವೊಂದು ಟ್ವಿಟರ್‌ನಲ್ಲಿ ಹರಿದಾಡುತ್ತಿದ್ದು, ವೈರಲ್ (Viral Video) ಆಗಿದೆ.
ನಿರ್ದೇಶಕರಾಗಿರುವ ಮನೀಶ್ ಹರಿಪ್ರಸಾದ್ ಅವರು ಇಂಥದ್ದೊಂದು ವಿಡಿಯೊವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಾಗೆಯೇ ಆ ವಿಶೇಷ ಬೆಕ್ಕಿನ ಬಗ್ಗೆ ಕ್ಯಾಪ್ಶನ್‌ನಲ್ಲಿ ಮಾಹಿತಿಯನ್ನೂ ಕೊಟ್ಟಿದ್ದಾರೆ. “ಜಿಂಜರ್ ಹೆಸರಿನ ಈ ವೃದ್ಧ ಬೆಕ್ಕು ನಮ್ಮ ಅಪಾರ್ಟ್‌ಮೆಂಟ್‌ಗೆ ಬಂದು ಸೇರಿಕೊಂಡಿದೆ. ಕಣ್ಣು ಸರಿಯಾಗಿ ಕಾಣದ ಈ ಬೆಕ್ಕು ಇದೀಗ ಇಡೀ ಅಪಾರ್ಟ್‌ಮೆಂಟ್ ಅನ್ನೇ ತನ್ನದಾಗಿ ಮಾಡಿಕೊಂಡಿದೆ. ಈ ಬೆಕ್ಕಿಗೆ ಮೆಟ್ಟಿಲುಗಳನ್ನು ಹತ್ತಿಳಿಯುವುದೆಂದರೆ ಆಗುವುದೇ ಇಲ್ಲ. ಅದು ಹೋಗಲಿಚ್ಛಿಸುವ ಫ್ಲೋರ್‌ಗೆ ಹೋಗಲು ಲಿಫ್ಟ್ ಬಳಿ ಕರೆದುಕೊಂಡು ಹೋಗುವವರೆಗೂ ನಮ್ಮ ಸುತ್ತಲೇ ಮಿಯಾವ್ ಎನ್ನುತ್ತಾ ಸುತ್ತುತ್ತಿರುತ್ತದೆ. ಲಿಫ್ಟ್ ಹತ್ತಿದ ಜಿಂಜರ್ ಒಮ್ಮೆ ಮಿಯಾವ್ ಎಂದು ಕೂಗಿದರೆ ಅದಕ್ಕೆ ಮೂರನೇ ಮಹಡಿಗೆ ಹೋಗಬೇಕು ಎಂದರ್ಥ. ಕೂಗದೇ ಇದ್ದರೆ ನಾವು ಯಾವ ಮಹಡಿಗೆ ಹೋಗುತ್ತೇವೋ ಆ ಮಹಡಿಗೆ ತಾನೂ ಹೋಗುತ್ತೇನೆ ಎಂದರ್ಥ” ಎಂದು ಬರೆದಿದ್ದಾರೆ.
ಇದನ್ನೂ ಓದಿ: Viral Video: ಮೆಟ್ರೊ ರೈಲಲ್ಲಿ ಎ.ಸಿ ಚಳಿ ತಾಳದೆ ಗೆಳತಿಗೆ ಬಿಸಿ ಮುತ್ತು ನೀಡಿದ ಯುವಕ; ಕಣ್ಣಲ್ಲೇ ಕೊಂದಳು ಯುವತಿ
ವಿಡಿಯೊದಲ್ಲಿ ಬೆಕ್ಕು ಮೊದಲಿಗೆ ಲಿಫ್ಟ್ ಬಾಗಿಲ ಬಳಿ ಕುಳಿತಿರುತ್ತದೆ. ಲಿಫ್ಟ್ ಬಾಗಿಲು ತೆರೆದ ತಕ್ಷಣ ಅದರೊಳಗೆ ಜಿಂಜರ್ ಹೋಗುತ್ತದೆ. ವಿಡಿಯೊ ಮಾಡುತ್ತಿದ್ದವರೂ ಲಿಫ್ಟ್‌ನೊಳಗೆ ಹೋಗಿ ಲಿಫ್ಟ್ ಬಾಗಿಲು ಮುಚ್ಚಿದ ನಂತರ ಜಿಂಜರ್ ಬಾಗಿಲ ಬಳಿ ಬಂದು ಕೂರುತ್ತದೆ. ನಂತರ ಒಂದು ಬಾರಿ ಮಿಯಾವ್ ಎಂದು ಕೂಗುತ್ತದೆ. ಅದರ ಅರ್ಥ ತಾನು ಮೂರನೇ ಮಹಡಿಗೆ ಹೋಗಬೇಕೆನ್ನುವುದು. ಅದಕ್ಕೆ ವಿಡಿಯೊ ಮಾಡುತ್ತಿದ್ದವರು, “ಆಯ್ತು, ಮೂರನೇ ಮಹಡಿಗೇ ಹೋಗುವಂತೆ” ಎಂದು ಹೇಳುತ್ತಾರೆ. ಮೂರನೇ ಮಹಡಿಯಲ್ಲಿ ಲಿಫ್ಟ್‌ನ ಬಾಗಿಲು ತೆರೆದ ತಕ್ಷಣ ಬೆಕ್ಕು ಹೊರಗೆ ನಡೆಯುತ್ತದೆ.
Meet Ginger.
— Manish Hariprasad (@manishariprasad) July 21, 2023
He came to our building as an old, partially blind fellow. Now he owns the building, all the homes in it and us.
He hates taking the stairs, so he meows us around till we take him to the desired floor. 1 Meow means 3rd floor, No Meow means 'wherever you're going'. pic.twitter.com/yq0g1QDDPR
ಈ ವಿಡಿಯೊವನ್ನು ಜುಲೈ 21ರಂದು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ. ಅಂದಿನಿಂದ ಇಂದಿನವರೆಗೆ ಈ ವಿಡಿಯೊ ಸಾವಿರಾರು ಜನರಿಂದ ವೀಕ್ಷಣೆಗೊಂಡಿದ್ದು, ಜನರಿಂದ ಮೆಚ್ಚುಗೆ ಪಡೆದುಕೊಂಡಿದೆ. ಅನೇಕರು ಈ ಬೆಕ್ಕಿನ ಜಾಣತನದ ಬಗ್ಗೆ ಪ್ರಶಂಸೆ ಹೊರಹಾಕುತ್ತಿದ್ದಾರೆ. ಹಾಗೆಯೇ ಅಪಾರ್ಟ್‌ಮೆಂಟ್‌ನ ನಿವಾಸಿಗಳು ಬೆಕ್ಕನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿರುವ ಬಗ್ಗೆಯೂ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.