ಬೆಕ್ಕುಗಳು ಮುದ್ದಾದ ಸಾಕುಪ್ರಾಣಿಗಳಾಗಿದ್ದರೂ, ಅವುಗಳಿಗೆ ಕುಚೇಷ್ಟೆ, ಕಿಲಾಡಿತನ ಜಾಸ್ತಿ. ಇದೇ ಕಾರಣಕ್ಕೆ ಕಳ್ಳ ಬೆಕ್ಕು ಎಂಬ ಹೆಸರನ್ನೂ ಪಡೆದಿವೆ. ಮನೆಯಲ್ಲಿ ಎಲ್ಲ ಕಡೆ ಓಡಾಡುವ ಸ್ವಾತಂತ್ರ್ಯವನ್ನೂ ತೆಗೆದುಕೊಂಡು, ಸಿಕ್ಕಸಿಕ್ಕ ಪಾತ್ರೆ, ಕಿಂಡಿಗಳಿಗೆ ಮುಖ ತೂರಿಸುತ್ತ, ಅವಾಂತರ ಸೃಷ್ಟಿಸುತ್ತಿರುತ್ತವೆ. ಅಷ್ಟಾದರೂ ಅವುಗಳ ಆಟ-ಪಾಟ ನೋಡಲು ಸಖತ್ ಖುಷಿಯಾಗಿಯೇ ಇರುತ್ತದೆ.
ಹೀಗೆ ಒಂದು ಬೆಕ್ಕಿನ ವಿಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಮಸೀದಿ ಒಳಗೆ ರಂಜಾನ್ ಪ್ರಾರ್ಥನೆ ಮಾಡುತ್ತಿದ್ದ ಇಮಾಮ್ ಅವರ ಮೈಮೇಲೆ ಬೆಕ್ಕು ಹಾರಿ, ಅವರ ಕೆನ್ನೆ, ಬಾಯಿಯ ಬಳಿ ತನ್ನ ಮುಖವನ್ನು ತೆಗೆದುಕೊಂಡು ಹೋಗಿ, ನಂತರ ಕೆಳಗೆ ಹಾರುವುದನ್ನು ವಿಡಿಯೊದಲ್ಲಿ ನೋಡಬಹುದು. ಇದು ಎಲ್ಲಿ ಚಿತ್ರೀಕರಿಸಲಾದ ವಿಡಿಯೊ ಎಂಬುದು ಸ್ಪಷ್ಟವಾಗಿಲ್ಲ. ರಂಜಾನ್ ಪ್ರಾರ್ಥನೆ ನಡೆಯುತ್ತಿರುತ್ತದೆ. ಇಮಾಮ್ ಅವರು ಮೈಕ್ನಲ್ಲಿ ಹೇಳುತ್ತಿದ್ದರೆ, ಒಂದಷ್ಟು ಜನರು ಅವರ ಹಿಂದೆ ನಿಂತು ಅದನ್ನೇ ಉಚ್ಚರಿಸುತ್ತಿದ್ದರು. ಬೆಕ್ಕೊಂದು ಅಲ್ಲೇ ಸುಳಿದಾಡುತ್ತಿತ್ತು. ಮೊದಲು ಒಂದು ಸಲ ಬೆಕ್ಕು ಇಮಾಮ್ ಕಾಲಿಗೆ ತನ್ನ ಕಾಲು ಕೊಟ್ಟು ನಿಲ್ಲುತ್ತದೆ. ಹಾಗೇ ಸುತ್ತಾಡಿ, ಸುಳಿದಾಡಿ ಅಂತಿಮವಾಗಿ ಅವರ ಹೊಟ್ಟೆಯ ಮೇಲೆ ಜಿಗಿದು, ಹೆಗಲಿಗೆ ಏರಿ ಕುಳಿತುಕೊಳ್ಳುತ್ತದೆ. ಇಮಾಮ್ ಅವರೂ ಕೂಡ ಇದರಿಂದ ಸ್ವಲ್ಪವೂ ಗೊಂದಲಕ್ಕೀಡಾಗುವುದಿಲ್ಲ. ಬೆಕ್ಕು ಅವರ ಭುಜದ ಮೇಲೆ ಕುಳಿತುಕೊಂಡು ಮೊದಲು ಕೆನ್ನೆಯ ಮೇಲೆ ತನ್ನ ಮುಖ ಇಟ್ಟು ಮುತ್ತಿಕ್ಕಿದಂತೆ ಮಾಡುತ್ತದೆ..ಅವರ ಬಾಯಿಯನ್ನೂ ಹತ್ತಿರದಿಂದ ನೋಡಿ, ‘ಇವರೀಗ ಬ್ಯೂಸಿ ಇದ್ದಾರೆ’ ಎಂಬ ಭಾವಹೊತ್ತು ಅಲ್ಲಿಂದ ಕೆಳಗೆ ಹಾರಿ, ಹೋಗುತ್ತದೆ. Alateeqi ಎಂಬ ಟ್ವಿಟರ್ ಬಳಕೆದಾರರು ವಿಡಿಯೊವನ್ನು ಶೇರ್ ಮಾಡಿಕೊಂಡಿದ್ದಾರೆ.
ಈ ವಿಡಿಯೊಕ್ಕೆ 2 ಮಿಲಿಯನ್ಸ್ ವೀಕ್ಷಣೆ ಬಂದಿದೆ. ಅನೇಕಾನೇಕರು ಅದನ್ನು ಶೇರ್ ಮಾಡಿಕೊಂಡಿದ್ದಾರೆ. ‘ಇದು ನಿಜಕ್ಕೂ ಹೃದಯಸ್ಪರ್ಶಿ ವಿಡಿಯೊ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ‘ಆ ಬೆಕ್ಕು ಅಷ್ಟೆಲ್ಲ ಮಾಡಿದರೂ ಇಮಾಮ್ ಸ್ವಲ್ಪವೂ ಏಕಾಗ್ರತೆ ಕಳೆದುಕೊಳ್ಳದೆ ಇರುವುದು ಅಚ್ಚರಿ’ ಎಂದು ಇನ್ನೊಬ್ಬರು ಹೇಳಿದ್ದಾರೆ. ‘ಆ ಬೆಕ್ಕು ಮತ್ತು ಇಮಾಮ್ ಇಬ್ಬರೂ ದಯಾಗುಣದವರು’ ಎಂದು ಮತ್ತೊಂದು ಕಮೆಂಟ್ ಬಂದಿದೆ.