ಚಾಟ್ಜಿಪಿಟಿ (ChatGpt) ಎಂಬ ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನ ಈಗ ಭರ್ಜರಿ ಸುದ್ದಿ ಮಾಡುತ್ತಿದೆ. ಮೈಕ್ರೋಸಾಫ್ಟ್ ಬೆಂಬಲಿತ ಈ ಚಾಟ್ಬಾಟ್ ಚಾಟ್ಜಿಪಿಟಿ (ಸರಳವಾಗಿ ಹೇಳುವುದೆಂದರೆ, ನೀವು ಕೇಳುವ ಪ್ರಶ್ನೆಗೆ ಉತ್ತರಿಸುವ ರೊಬೊಟ್) ಇತ್ತೀಚೆಗೆ ಜಿಪಿಟಿ-4 ಎಂಬ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈಗಾಗಲೇ ಲಕ್ಷಾಂತರ ಜನರು ಈ ಚಾಟ್ಜಿಪಿಟಿ ಬಳಕೆ ಮಾಡುತ್ತಿದ್ದಾರೆ. ಉದ್ಯೋಗ/ಉದ್ಯಮ ವಲಯವನ್ನು ಚಾಟ್ ಜಿಪಿಟಿ ಕಬಳಿಸುತ್ತಿದೆ, ಮನುಷ್ಯರು ಮಾಡುವ ಹಲವು ಸೃಜನಾತ್ಮಕ ಕೆಲಸಗಳನ್ನು ಇದು ಮಾಡುತ್ತಿರುವ ಕಾರಣ, ಅನೇಕರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂಬ ಆತಂಕವೂ ಮನೆಮಾಡಿದೆ. ಚಾಟ್ಜಿಪಿಟಿ ಬಳಕೆ ಮಾಡುತ್ತಿರುವ ಅನೇಕರು ಒಂದಲ್ಲ ಒಂದು ಕಾರಣಕ್ಕೆ ಇದನ್ನು ಹೊಗಳುತ್ತಿದ್ದಾರೆ.
ಅದರಂತೆ ಟ್ವಿಟರ್ ಬಳಕೆದಾರರೊಬ್ಬರು ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಚಾಟ್ಬಾಟ್ ಚಾಟ್‌ಜಿಪಿಟಿಯಿಂದ ತಮಗೆ ಆದ ಸಹಾಯವನ್ನು ಬರೆದುಕೊಂಡಿದ್ದಾರೆ. ‘ನನ್ನ ಪ್ರೀತಿಯ ನಾಯಿಯ ಜೀವನನ್ನು ಉಳಿಸಿದ್ದು ಚಾಟ್ಜಿಪಿಟಿ’ ಎಂದು ಬರೆದುಕೊಂಡಿದ್ದು, ಅದು ಹೇಗೆ ಎಂಬುದನ್ನೂ ವಿವರಿಸಿದ್ದಾರೆ. @peakcooper ಎಂಬ ಟ್ವಿಟರ್ ಅಕೌಂಟ್ನಲ್ಲಿ ಈ ಸ್ಟೋರಿ ಹಂಚಿಕೊಳ್ಳಲಾಗಿದೆ. ಅನಾರೋಗ್ಯಕ್ಕೀಡಾದ ನನ್ನ ನಾಯಿ ಸ್ಯಾಸಿಗೆ ಏನಾಗಿದೆ ಎಂದು ಕಂಡು ಹಿಡಿಯಲು ಪಶುವೈದ್ಯರಿಗೂ ಸಾಧ್ಯವಾಗಲಿಲ್ಲ. ಆದರೆ ಚಾಟ್ಬಾಟ್ ಚಾಟ್ಜಿಪಿಟಿ ನನ್ನ ನಾಯಿಯ ರೋಗ ಪತ್ತೆ ಮಾಡಿ, ಅದನ್ನು ಉಳಿಸಿಕೊಟ್ಟಿತು’ ಎಂದಿದ್ದಾರೆ.
‘ನನ್ನ ನಾಯಿ ಸ್ಯಾಸಿಗೆ ಆರೋಗ್ಯ ಹದಗೆಡಲು ಶುರುವಾಯಿತು. ಅದರ ಒಸಡುಗಳೆಲ್ಲ ತೀರ ಪೇಲವ ಅನ್ನಿಸಲು ಶುರುವಾಯಿತು. ವೈದ್ಯರ ಬಳಿ ಕರೆದುಕೊಂಡು ಹೋದೆ ಅವರು ಶ್ವಾನವನ್ನು ಪರಿಶೀಲನೆ ಮಾಡಿ, ಅದಕ್ಕೆ ಉಣ್ಣಿ ಹುಳ ಕಚ್ಚಿದ್ದರಿಂದ ಕಾಯಿಲೆ ಬಂದಿದೆ ಎಂದು ಹೇಳಿ ಚಿಕಿತ್ಸೆ ಕೊಡಲು ಶುರು ಮಾಡಿದರು. ಆದರೆ ಸ್ಯಾಸಿಯಲ್ಲಿ ರಕ್ತಹೀನತೆ ಮುಂದುವರಿದಿತ್ತು. ಆದರೂ ಅವಳು ಸುಧಾರಿಸಿಕೊಳ್ಳುತ್ತಿರುವಂತೆ ಅನ್ನಿಸಿತು. ಆದರೆ ದುರದೃಷ್ಟಕ್ಕೆ ಕೆಲವೇ ದಿನದಲ್ಲಿ ಶ್ವಾನದ ಆರೋಗ್ಯ ತೀವ್ರವಾಗಿ ಹದಗೆಟ್ಟಿತು. ಮತ್ತೆ ಪಶುವೈದ್ಯರ ಬಳಿ ಕರೆದುಕೊಂಡು ಹೋದೆ. ಅವರು ಮತ್ತಷ್ಟು ಟೆಸ್ಟ್ ಮಾಡಿದರು. ಇನ್ನಿತರ ಕೆಲವು ಸೋಂಕುಗಳು ತಗುಲಿರಬಹುದು ಎಂದು ಅಂದಾಜಿಸಿ, ಅದರ ತಪಾಸಣೆಯನ್ನೂ ಮಾಡಿದರು. ಆದರೆ ಎಲ್ಲವೂ ನೆಗೆಟಿವ್ ಬಂದಿತ್ತು. ಹಳೇ ಚಿಕಿತ್ಸೆ ಮುಂದುವರಿಸಿದರು ಮತ್ತು ಕಾಯಲು ಹೇಳಿದರು. ಸ್ಯಾಸಿ ಆರೋಗ್ಯ ಸ್ಥಿತಿ ನಿಧಾನಕ್ಕೆ ಸುಧಾರಿಸುತ್ತದೆ ಎಂದು ಹೇಳಿದರು. ಇದ್ಯಾಕೋ ನನಗೆ ಸೂಕ್ತ ಎನ್ನಿಸಲಿಲ್ಲ. ಹೀಗಾಗಿ ಮತ್ತೆ ಇನ್ನೊಬ್ಬ ಪಶುವೈದ್ಯರ ಬಳಿ ಸ್ಯಾಸಿಯನ್ನು ಕರೆದುಕೊಂಡು ಹೋದೆ. ಅಲ್ಲಿಯೂ ಏನೂ ಉಪಯೋಗ ಆಗಿರಲಿಲ್ಲ.
ಇದನ್ನೂ ಓದಿ: ChatGpt: ಚಾಟ್‌ಜಿಪಿಟಿಯಿಂದ ಈ ಎಲ್ಲ ಜಾಬ್‌ಗಳು ಸೇಫ್, ಲಿಸ್ಟ್‌ನಲ್ಲಿ ನಿಮ್ಮ ಜಾಬ್ ಇದೆಯಾ? ಪಟ್ಟಿ ನೋಡಿ
ಈ ಮಧ್ಯೆ ಚಾಟ್ಜಿಪಿಟಿ ಬಗ್ಗೆ ಕೇಳಿದ್ದ ನಾನು, ಅಲ್ಲಿಯೂ ಒಂದು ಅಭಿಪ್ರಾಯ ತೆಗೆದುಕೊಳ್ಳುವ ಪ್ರಯತ್ನ ಮಾಡಿದೆ ಮತ್ತು ಅದೇ ನನ್ನ ಶ್ವಾನದ ಜೀವ ಕಾಪಾಡಿತು. ಅಷ್ಟೂ ದಿನಗಳ ಕಾಲ ನನ್ನ ಸ್ಯಾಸಿಗೆ ಏನೆನೆಲ್ಲ ತಪಾಸಣೆಗಳನ್ನು ಮಾಡಿ, ರಿಪೋರ್ಟ್ ಪಡೆಯಲಾಗಿತ್ತೋ ಅದನ್ನೆಲ್ಲವನ್ನೂ ಚಾಟ್ಜಿಪಿಟಿ ಜಿಪಿಟಿ-4 ಗೆ ವಿವರಿಸಿದೆ. ಅದಕ್ಕೆ ಉತ್ತರಿಸಿದ ಚಾಟ್ಬಾಟ್, ‘ನೀವು ಹೇಳುತ್ತಿರುವ ಲಕ್ಷಣಗಳನ್ನೆಲ್ಲ ಗಮನಿಸಿದರೆ ಶ್ವಾನವು ಇಮ್ಯೂನ್ ಮೀಡಿಯೇಟೆಡ್ ಹೆಮೋಲಿಟಿಕ್ ಅನೀಮಿಯಾ (IMHA)ದಿಂದ ಬಳಲುತ್ತಿರುವಂತೆ ಗೋಚರಿಸುತ್ತಿದೆ’ ಎಂದು ಉತ್ತರ ನೀಡಿತು. ನಾನು ಇನ್ನೊಬ್ಬ ಪಶುವೈದ್ಯರ ಬಳಿ ಶ್ವಾನವನ್ನು ಕರೆದುಕೊಂಡು ಹೋಗಿ, ಚಾಟ್ಜಿಪಿಟಿ ನನಗೆ ಹೇಳಿದ ಕಾಯಿಲೆ ಹೆಸರನ್ನು ಅವರಿಗೆ ಹೇಳಿ, ಟೆಸ್ಟ್ ಮಾಡುವಂತೆ ಕೇಳಿದೆ. ಅವರು ಅದಕ್ಕೆ ಒಪ್ಪಿ ತಪಾಸಣೆ ಮಾಡಿದರು. ನಿಜಕ್ಕೂ ಆ ರೋಗ ದೃಢಪಟ್ಟಿತ್ತು ಮತ್ತು ಅದಕ್ಕೆ ಅಗತ್ಯವಾದ ಚಿಕಿತ್ಸೆಯನ್ನು ಕೊಡಲು ಅವರು ಶುರು ಮಾಡಿದರು. ಈಗ ನನ್ನ ಸ್ಯಾಸಿ ಚೇತರಿಸಿಕೊಳ್ಳುತ್ತಿದೆ’ ಥ್ಯಾಂಕ್ಸ್ ಟು ಚಾಟ್ಜಿಪಿಟಿ ಎಂದಿದ್ದಾರೆ.