ಮಕ್ಕಳಿಗೆ ಅಜ್ಜಿಯ ಮಡಿಲೆಂದರೆ ಒಂದು ಸುರಕ್ಷಿತವಾದ ಸ್ಥಳ. ಅವರಿಗೂ ಅಷ್ಟೇ, ತಮ್ಮ ಮಕ್ಕಳಿಗಿಂತಲೂ ಮೊಮ್ಮಕ್ಕಳ ಮೇಲೇ ಅಪಾರವಾದ ಪ್ರೀತಿ-ಅಕ್ಕರೆ ಇರುತ್ತದೆ. ಅಜ್ಜ-ಅಜ್ಜಿಯರು ಎಂಥ ಸಂದರ್ಭದಲ್ಲೂ ತಮ್ಮ ಮೊಮ್ಮಕ್ಕಳನ್ನು ಬಿಟ್ಟುಕೊಡುವುದಿಲ್ಲ. ಅವರು ತಂದೆಯ ಅಪ್ಪ-ಅಮ್ಮನೇ ಆಗಿರಲಿ, ಅಮ್ಮನ ಪಾಲಕರೇ ಆಗಿರಲಿ. ಮಕ್ಕಳನ್ನಾದರೂ ಬೈದಾರು, ಮೊಮ್ಮಕ್ಕಳ ಬಗ್ಗೆ ಸ್ವಲ್ಪವೂ ಕಠಿಣ ವರ್ತನೆ ತೋರಿಸುವುದಿಲ್ಲ. ಹೀಗಾಗಿ ಪುಟ್ಟ ಮಕ್ಕಳು ತಾವೇನಾದರೂ ತಪ್ಪು ಮಾಡಿ ಅಪ್ಪ-ಅಮ್ಮನ ಬಳಿ ಬೈಸಿಕೊಂಡಾಗ ದೂರು ಹೇಳಲು, ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸೀದಾ ಅಜ್ಜ-ಅಜ್ಜಿಯ ಬಳಿ ಹೋಗುತ್ತಾರೆ.
ಚೀನಾದಲ್ಲೂ ಹೀಗೆ ಒಂದು ಘಟನೆ ನಡೆದಿದೆ. 11ವರ್ಷದ ಬಾಲಕನೊಬ್ಬ ತನ್ನ ಅಮ್ಮನ ಮೇಲೆ ಕೋಪಗೊಂಡು, ಅಮ್ಮನ ಬಗ್ಗೆ ಅವರ ಅಮ್ಮನ ಬಳಿ ಅಂದರೆ ತನ್ನ ಅಜ್ಜಿಯ ಬಳಿ ದೂರ ಹೇಳಲು 130 ಕಿಮೀ ದೂರ ಸೈಕ್ಲಿಂಗ್ ಮಾಡಿಕೊಂಡು ಅವರ ಮನೆಗೆ ಹೋಗಿದ್ದಾನೆ. ಇದಕ್ಕಾಗಿ ಅವನು ತೆಗೆದುಕೊಂಡ ಸಮಯ 22 ತಾಸು. ಬಾಲಕನ ಮನೆ ಇರುವುದು ಪೂರ್ವ ಚೀನಾದ ಝೆಜಿಯಾಂಗ್ ಎಂಬ ಪ್ರಾಂತ್ಯದಲ್ಲಿ. ಅವನ ಮನೆಯಿಂದ ಅಜ್ಜಿ ಮನೆ ಇರುವುದು ಸುಮಾರು 140 ಕಿಮೀ ದೂರದಲ್ಲಿರುವ ಮೀಜಿಯಾಂಗ್ ಎಂಬಲ್ಲಿ. ಸೈಕಲ್ ತೆಗೆದುಕೊಂಡು ಹೊರಟ ಹುಡುಗ ಸಿಕ್ಕಿದ್ದು, ಅಜ್ಜಿ ಮನೆಯಿಂದ ಸುಮಾರು 9-10 ಕಿಮೀ ದೂರದಲ್ಲಿ. ಆತನಿಗೆ ಸೈಕಲ್ನಲ್ಲಿ ಇನ್ನು ಒಂದು ತಾಸು ಹೋಗಿದ್ದರೆ, ಅಜ್ಜಿಮನೆ ಬರುತ್ತಿತ್ತು. ಅಷ್ಟು ಹತ್ತಿರ ಅವನು ಹೋಗಿದ್ದ.
ಏಪ್ರಿಲ್ 2ರಂದು ಬಾಲಕ ಎಕ್ಸ್ಪ್ರೆಸ್ವೇ ಒಂದರ ಸುರಂಗ ಮಾರ್ಗದಲ್ಲಿ ಸೈಕಲ್ನೊಂದಿಗೆ ನಿಂತಿದ್ದ. ಆತ ಸುಸ್ತಿನಿಂದ ಬಸವಳಿದು ಹೋಗಿದ್ದ. ಇದೇ ವೇಳೆ ಪೊಲೀಸ್ ಅವನನ್ನು ಮಾತನಾಡಿಸಿದ್ದಾರೆ. ಆಗ ತನ್ನ ಕತೆಯನ್ನು ಹೇಳಿಕೊಂಡಿದ್ದಾನೆ. ಅಮ್ಮನೊಂದಿಗೆ ಜಗಳ ಮಾಡಿಕೊಂಡು, ಅಜ್ಜಿ ಬಳಿ ದೂರು ಕೊಡಲು ಹೊರಟಿದ್ದೆ. ನಾನು ರಾತ್ರಿಯೆಲ್ಲ ಸೈಕಲ್ ಹೊಡೆದೆ. ರಸ್ತೆಬದಿಯಲ್ಲಿ ಇರುವ ಬೋರ್ಡ್, ಮತ್ತು ಮಾರ್ಗ ಸೂಚಕಗಳನ್ನು ನೋಡಿಕೊಂಡೇ ಸಾಗಿದೆ. ಆದರೂ ಕೆಲವೊಮ್ಮೆ ತಪ್ಪಾಗಿ, ಬೇರೆ ದಾರಿಯಲ್ಲಿ ಹೋಗುವಂತಾಯ್ತು. ಮತ್ತೆ ವಾಪಸ್ ಬಂದು ಸರಿದಾರಿಯಲ್ಲಿ ಹೋದೆ. ಮಧ್ಯೆ ಹಸಿವಾದಾಗ ಮನೆಯಿಂದ ತಂದಿದ್ದ ಬ್ರೆಡ್ ತಿಂದು, ನೀರು ಕುಡಿದೆ ಎಂದು ಹೇಳಿದ್ದಾನೆ.
ಇದನ್ನೂ ಓದಿ: Viral News : ಏರ್ ಇಂಡಿಯಾ ವಿಮಾನದಲ್ಲಿ ತೆಂಗಿನ ಕಾಯಿ ಬ್ಯಾನ್! ವೈರಲ್ ಆಯ್ತು ಸುದ್ದಿ
ಬಳಿಕ ಪೊಲೀಸರು ಅವನ ಪಾಲಕರ ಬಗ್ಗೆ ಎಲ್ಲ ಮಾಹಿತಿ ಪಡೆದು, ಅವರಿಗೆ ವಿಷಯ ತಿಳಿಸಿದ್ದಾರೆ. ಅಪ್ಪ-ಅಮ್ಮನೇ ಬಂದು ಬಾಲಕನನ್ನು ಕರೆದುಕೊಂಡು ಹೋಗಿದ್ದಾರೆ. ಅವನಿಗೆ ನನ್ನ ಜತೆ ಜಗಳವಾಯಿತು. ಆತ ನನಗೆ ಹೇಳಿದ್ದ, ಅಜ್ಜಿಯ ಮನೆಗೆ ಹೋಗಿ, ನಿನ್ನ ಬಗ್ಗೆ ಕಂಪ್ಲೇಂಟ್ ಮಾಡುತ್ತೇನೆ ಎಂದಿದ್ದ. ಆದರೆ ನಾನದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ನಿಜಕ್ಕೂ ಅವನು ಹೊರಟೇಬಿಟ್ಟಿದ್ದಾನೆ. ಅದು ಗೊತ್ತಾಗಲಿಲ್ಲ ಎಂದು ಹುಡುಗನ ಅಮ್ಮ ಪೊಲೀಸರಿಗೆ ತಿಳಿಸಿದ್ದಾರೆ. ಈ ಸ್ಟೋರಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಅನೇಕರು ಬಾಲಕನ ಧೈರ್ಯವನ್ನು ಹೊಗಳಿದ್ದಾರೆ. ‘ಹೀಗೆ ಹುಡುಗ ಒಬ್ಬೊಬ್ಬನೇ ಹೊರಟ ಅಂದಮೇಲೆ ಅವನಿಗೆ ಅಮ್ಮನ ಮೇಲೆ ಅದೆಷ್ಟು ಬೇಸರ ಆಗಿರಬಹುದು’ ಎಂದು ಅಭಿಪ್ರಾಯಪಟ್ಟಿದ್ದಾರೆ.