Site icon Vistara News

Viral Video | ಏರ್​ಪೋರ್ಟ್​​ನಲ್ಲಿ ಪ್ರಯಾಣಿಕನಿಗೆ ಹೃದಯಾಘಾತ; ಮತ್ತೆ ಉಸಿರುಕೊಟ್ಟು ಅಪಾಯದಿಂದ ಪಾರು ಮಾಡಿದ ಸೈನಿಕ

Ahmedabad airport

ಅಹ್ಮದಾಬಾದ್​ ಏರ್​ಪೋರ್ಟ್​​ನಲ್ಲಿ ಸೆಕ್ಯೂರಿಟಿ ಚೆಕ್​ ವೇಳೆ ಹೃದಯಾಘಾತಕ್ಕೆ ಒಳಗಾದ ಪ್ರಯಾಣಿಕರೊಬ್ಬರಿಗೆ ಸಿಐಎಸ್​ಎಫ್​ (CISF-ಕೇಂದ್ರ ಕೈಗಾರಿಕಾ ಭದ್ರತಾ ಪಡೆ) ಸಿಬ್ಬಂದಿಯೊಬ್ಬರು ಮರುಜೀವ ಕೊಟ್ಟಿದ್ದಾರೆ.

ಮಧ್ಯ ವಯಸ್ಸಿನ ಈ ಪ್ರಯಾಣಿಕ ವಿಮಾನ ನಿಲ್ದಾಣಕ್ಕೆ ಬಂದು, ಸೆಕ್ಯೂರಿಟಿ ಚೆಕ್​ ವೇಳೆಯೇ ಕೆಳಗೆ ಬಿದ್ದಿದ್ದಾರೆ. ಅವರು ಎಚ್ಚರ ತಪ್ಪಿದ್ದರು ಮತ್ತು ಉಸಿರಾಟ ಕ್ಷೀಣವಾಗಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಸಿಐಎಸ್ಎಫ್​ ಸಬ್​ ಇನ್ಸ್​ಪೆಕ್ಟರ್​ ಕಪಿಲ್​ ರಾಘವ್​ ಅವರು ಆ ಪ್ರಯಾಣಿಕನಿಗೆ ಸಿಪಿಆರ್​ (ಕಾರ್ಡಿಯೋ ಪಲ್ಮನರಿ ರೆಸಸಿಟೇಶನ್​​) ಚಿಕಿತ್ಸೆ ನೀಡಿದರು. ಅವರ ಎದೆಯ ಮೇಲೆ ತಮ್ಮ ಕೈಗಳನ್ನು ಊರಿ ಹೃದಯ ಮತ್ತು ಶ್ವಾಸಕೋಶಕ್ಕೆ ಪ್ರಚೋದನೆ ನೀಡಿದರು. ಹಾಗೇ ಇನ್ನೊಬ್ಬರು ಸಿಬ್ಬಂದಿ ಪ್ರಯಾಣಿಕನ ಕೈಗಳನ್ನು ಉಜ್ಜುತ್ತಿದ್ದರು. ಅಂತಿಮವಾಗಿ ಆ ಪ್ರಯಾಣಿಕ ಮತ್ತೆ ಸರಿಯಾಗಿ ಉಸಿರಾಡಲು ಪ್ರಾರಂಭ ಮಾಡಿದ್ದಲ್ಲದೆ, ಕಣ್ಣುಬಿಟ್ಟಿದ್ದಾರೆ. ಇವರು ಮುಂಬಯಿ ಮೂಲದ ವ್ಯಕ್ತಿಯಾಗಿದ್ದು, ಸದ್ಯ ಅಹ್ಮದಾಬಾದ್​​ನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ವಿಡಿಯೊವನ್ನು ಸಿಐಎಸ್​​ಎಫ್​​ನ​ ಅಧಿಕೃತ ಟ್ವಿಟರ್​ ಅಕೌಂಟ್​​ನಲ್ಲಿ ಶೇರ್​ ಮಾಡಿಕೊಳ್ಳಲಾಗಿದೆ. ಹಾಗೇ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸುನೀಲ್​ ದೇವಧರ್​​ ಅವರೂ ವಿಡಿಯೊ ಶೇರ್​ ಮಾಡಿಕೊಂಡಿದ್ದಾರೆ. ಅಹ್ಮದಾಬಾದ್​ ಏರ್​ಪೋರ್ಟ್​​ನಲ್ಲಿ ಸಿಐಎಸ್​ಎಫ್​ ಯೋಧನ ಈ ಸಮಯಪ್ರಜ್ಞೆ ಪ್ರಯಾಣಿಕನ ಜೀವ ಉಳಿಸಿತು. ಅವರಿಗೊಂದು ಸೆಲ್ಯೂಟ್​ ಎಂದು ಕ್ಯಾಪ್ಷನ್​ ಬರೆದುಕೊಂಡಿದ್ದಾರೆ. ಈ ವಿಡಿಯೊಕ್ಕೆ 1 ಮಿಲಿಯನ್​ (10 ಲಕ್ಷ) ವೀವ್ಸ್​ ಬಂದಿದೆ. ನೆಟ್ಟಿಗರಂತೂ ಸಿಐಎಸ್​ಎಫ್​ ಯೋಧ ​ ಕಪಿಲ್​ ರಾಘವ್​ ಅವರನ್ನು ಸಿಕ್ಕಾಪಟೆ ಶ್ಲಾಘಿಸುತ್ತಿದ್ದಾರೆ.

ಸಿಪಿಆರ್‌ ಅಥವಾ cardiopulmonary resuscitation -ಹೀಗೆಂದರೆ ಹೃದಯ ಸ್ತಂಭನಕ್ಕೆ ಒಳಗಾದ ವ್ಯಕ್ತಿಗೆ ನೀಡುವ ಪ್ರಾಥಮಿಕ ಚಿಕಿತ್ಸೆ.. ಹೃದಯ ಸ್ತಂಭನವಾದಾಗ ಆ ವ್ಯಕ್ತಿಯ ದೇಹದೊಳಗೆ ರಕ್ತ ಸಂಚಾರ ಸಂಪೂರ್ಣ ನಿಂತು ಹೋಗುತ್ತದೆ. ಇದರಿಂದಾಗಿ ಮೆದುಳಿಗೆ ಆಮ್ಲಜನಕ ಪೂರೈಕೆಯಾಗದೆ ಆತ ಕುಸಿದು ಬೀಳುತ್ತಾನೆ. ಹೀಗಾದಾಗ ಆತನ ಎದೆಯ ಮೇಲೆ ನಮ್ಮ ಎರಡೂ ಹಸ್ತಗಳನ್ನು ಇಟ್ಟು ಒತ್ತಬೇಕು. ರೋಗಿಯ ಸೆಟೆದುಕೊಂಡ ಎದೆ ಸ್ವಲ್ಪ ಒಳಭಾಗಕ್ಕೆ ಹೋಗುವಷ್ಟು ಗಟ್ಟಿಯಾಗಿ ಒತ್ತುತ್ತಾ ಹೋಗಬೇಕು. ಈ ಕ್ರಿಯೆ ತಕ್ಕಮಟ್ಟಿನ ವೇಗದಲ್ಲಿರಬೇಕು. ಆಗ ರಕ್ತಚಲನೆ ಮತ್ತೆ ಶುರುವಾಗಿ ಹೃದಯ ಪುನಶ್ಚೇತನಗೊಳ್ಳುತ್ತದೆ. ಇದನ್ನೇ ವೈದ್ಯಕೀಯ ಭಾಷೆಯಲ್ಲಿ ಸಿಪಿಆರ್‌ ಅಥವಾ ಕಾರ್ಡಿಯೋ ಪಲ್ಮನರಿ ರೆಸಸಿಟೇಶನ್‌ ಎನ್ನುತ್ತಾರೆ.

ಇದನ್ನೂ ಓದಿ: Viral Video | ‘ನನಗೂ ಹೆಂಡತಿ ಬೇಕು, ಯಾರಾದ್ರೂ ಹೆಣ್ಣು ಕೊಡ್ತೀರಾ?’; ಬಾಸಿಂಗ ತೊಟ್ಟು ಮೆರವಣಿಗೆ ಹೊರಟ 50 ಮಂದಿ ಅವಿವಾಹಿತರು!

Exit mobile version