Site icon Vistara News

Viral News : ರೈಲಿನಲ್ಲಿ ಮಲಗಿದ ವ್ಯಕ್ತಿಯ ಮೈ ಮೇಲೆಲ್ಲ ಜಿರಲೆಗಳು! ರೈಲ್ವೆ ಇಲಾಖೆ ಹೇಳಿದ್ದೇನು?

cockroaches in train

ನವದೆಹಲಿ: ದೇಶದ ಅತಿ ದೊಡ್ಡ ಸಾರಿಗೆ ಸಂಪರ್ಕವೆಂದರೆ ಅದು ಭಾರತೀಯ ರೈಲ್ವೆ. ಆದರೆ ಈ ರೈಲು ಪ್ರಯಾಣ ಕೆಲವರಿಗೆ ಇಷ್ಟವಾಗುವುದಿಲ್ಲ. ರೈಲಿನಲ್ಲಿ ಶಿಸ್ತು, ಸ್ವಚ್ಛತೆ ಇರುವುದಿಲ್ಲ ಎನ್ನುವುದು ಹಲವರ ದೂರು. ಅದಕ್ಕೆಂದೇ ಅವರು ರೈಲು ಪ್ರಯಾಣದ ಬದಲು ಬಸ್ಸಿನಲ್ಲಿನ ಪ್ರಯಾಣಕ್ಕೇ ಆದ್ಯತೆ ನೀಡುತ್ತಾರೆ. ಆದರೆ ರೈಲ್ವೆ ಇಲಾಖೆ ಮಾತ್ರ ತನ್ನ ರೈಲುಗಳಲ್ಲಿನ ಸ್ವಚ್ಛತೆ ಕಾಪಾಡಿಕೊಳ್ಳುವುದಕ್ಕೆಂದು ಅನೇಕ ರೀತಿಯ ಪ್ರಯತ್ನಗಳನ್ನು ಮಾಡುತ್ತಲೇ ಇದೆ. ಆದರೂ ಅಲ್ಲಲ್ಲಿ ದೂರುಗಳು ಕೇಳಿಬರುವುದು ನಿಂತಿಲ್ಲ. ಅದೇ ರೀತಿ ಇತ್ತೀಚೆಗೆ ರೈಲು ಪ್ರಯಾಣ ಮಾಡಿದ ವ್ಯಕ್ತಿಯೊಬ್ಬರು ತಮಗಾದ ಸಮಸ್ಯೆಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಆ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು (Viral News) ಮಾಡುತ್ತಿದೆ.

ಆತಿಫ್‌ ಅಲಿ ಎಂಬುವರು ಆಗಸ್ಟ್‌ 7ರಂದು ರಾಷ್ಟ್ರ ರಾಜಧಾನಿ ನವದೆಹಲಿಯಿಂದ ತಿರುಪತಿಗೆ ಪ್ರಯಾಣ ಮಾಡಿದ್ದರು. ರೈಲು ಸಂಖ್ಯೆ 12708ರ ಎಸಿ ಕೋಚ್‌ನಲ್ಲಿ ಅವರು ಪ್ರಯಾಣಿಸಿದ್ದರು. ಆದರೆ ರೈಲಿನಲ್ಲಿ ಮಲಗಿರುವಾಗ ಅವರ ಸೀಟಿನ ಮೇಲೆ ಹತ್ತಾರು ಜಿರಲೆಗಳು ಓಡಾಡಿವೆಯಂತೆ. ಅದಕ್ಕೆ ಸಾಕ್ಷಿಯೆನ್ನುವಂತೆ ದಿಂಬಿನ ಮೇಲೆ ಮತ್ತು ರೈಲಿನ ಗೋಡೆಗಳ ಮೇಲೆ ಜಿರಲೆಗಳು ಹರಿದಾಡುತ್ತಿರುವ ಫೋಟೋವನ್ನೂ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Viral News : ಸೊಸೆಗೆ ತನ್ನ ಕಿಡ್ನಿಯನ್ನೇ ಕೊಟ್ಟ 70 ವರ್ಷದ ಅತ್ತೆ!
“12708 ರೈಲಿನ ಎಸಿ ಕೋಚ್‌ನಲ್ಲಿ ಪ್ರಯಾಣಿಸುವಾಗ ಜಿರಲೆಗಳು ನಮ್ಮ ಮೇಲೆ ಓಡಾಡುತ್ತಿದ್ದವು. ರೈಲ್ವೆ ಇಲಾಖೆ ಸ್ವಚ್ಛತೆ ಬಗ್ಗೆ ಮಾಡುವ ಪ್ರಮಾಣ ಎಲ್ಲಿ ಹೋಯಿತು?” ಎಂದು ಆತಿಫ್‌ ಅವರು ಟ್ವಿಟರ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ. ತಮ್ಮ ಟ್ವೀಟ್‌ನಲ್ಲಿ ರೈಲ್ವೆ ಇಲಾಖೆಯ ಹಲವಾರು ಟ್ವಿಟರ್‌ ಖಾತೆಗಳನ್ನು ಟ್ಯಾಗ್‌ ಮಾಡಿದ್ದಾರೆ ಕೂಡ.

ಈ ವಿಚಾರಕ್ಕೆ ರೈಲ್ವೆ ಇಲಾಖೆ ತಕ್ಷಣವೇ ಪ್ರತಿಕ್ರಿಯೆ ನೀಡಿದೆ. “ದಯವಿಟ್ಟು ನಿಮ್ಮ ಪ್ರಯಾಣದ ವಿವರವನ್ನು ನಮ್ಮೊಂದಿಗೆ ವೈಯಕ್ತಿಕ ಸಂದೇಶದಲ್ಲಿ ಹಂಚಿಕೊಳ್ಳಿ. ಅಥವಾ http://railmadad.indianrailways.gov.in ಅಲ್ಲಿ ನೇರವಾಗಿ ದೂರು ದಾಖಲಿಸಿ ಅಥವಾ ತ್ವರಿತ ಸಹಾಯಕ್ಕೆಂದು 139ಗೆ ಕರೆ ಮಾಡಿ” ಎಂದು ಪ್ರತಿಕ್ರಿಯೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Viral Video: ರಕ್ಕಸ ಗಾತ್ರದ ಅಲೆಗಳ ಮಧ್ಯೆ ಈಜಿ ದಡ ಸೇರಿದ ಮಹಿಳೆ; ದೂರ ತಿಳಿದರೆ ಅಚ್ಚರಿ ಖಚಿತ!
ಆತಿಫ್‌ ಅವರ ಟ್ವೀಟ್‌ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಲಕ್ಷಕ್ಕೂ ಅಧಿಕ ಮಂದಿ ಈ ಟ್ವೀಟ್‌ ಅನ್ನು ವೀಕ್ಷಿಸಿದ್ದಾರೆ. ಹಲವಾರು ಮಂದಿ ಭಾರತೀಯ ರೈಲ್ವೆಯಲ್ಲಿ ತಮಗಾದ ಕೆಟ್ಟ ಅನುಭವಗಳನ್ನೂ ಹಂಚಿಕೊಂಡಿದ್ದಾರೆ. “ನಿಮ್ಮ ಪುಣ್ಯ. ನಿಮಗೆ ಜಿರಲೆಗಳು ಮಾತ್ರ ಜೊತೆಯಾದವು. ನನಗೆ ಒಮ್ಮೆ ರೈಲಿನಲ್ಲಿ ಇಲಿಯೇ ಜತೆಗಾರನಾಗಿಬಿಟ್ಟಿತ್ತು”, “ಇದನ್ನು ನೋಡಿದ ಮೇಲೆ ಇನ್ನುಮುಂದೆ ಈ ರೈಲಿನ ಎಸಿ ಕೋಚ್‌ನಲ್ಲಿ ಪ್ರಯಾಣಿಸುವುದಕ್ಕೆ ಧೈರ್ಯ ಮಾಡುವುದು ಕಷ್ಟ”, “ಇದು ರೈಲ್ವೆಯ ಅತ್ಯಂತ ಕೆಟ್ಟ ಸ್ಥಿತಿ. ಈ ರೀತಿ ಯಾವತ್ತೂ ನೋಡಿರಲಿಲ್ಲ”, “ಇದು ನೋಡುವುದಕ್ಕೇ ಒಂದು ಕೆಟ್ಟ ಕನಸಿನಂತಿದೆ” ಎಂದು ಜನರು ಕಮೆಂಟ್‌ಗಳನ್ನು ಮಾಡಲಾರಂಭಿಸಿದ್ದಾರೆ.

ಇನ್ನೂ ಅನೇಕರು ರೈಲ್ವೆ ಇಲಾಖೆ ತ್ವರಿತವಾಗಿ ಪ್ರತಿಕ್ರಿಯಿಸಿರುವ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮಗೆ ರೈಲಿನಲ್ಲಿ ಸಮಸ್ಯೆಯಾದಾಗ ರೈಲ್ವೆ ಇಲಾಖೆ ಅದನ್ನು ಬಹಳ ಬೇಗನೇ ಸರಿಪಡಿಸಿಕೊಟ್ಟಿತು ಎನ್ನುವ ವಿಚಾರಗಳನ್ನೂ ತಿಳಿಸಿದ್ದಾರೆ.

Exit mobile version