Site icon Vistara News

Video: ಯಾವ ಉದ್ಯೋಗಿಯೂ ಹೊರಗೆ ಹೋಗಬಾರದು; ಕಂಪನಿ ಬಾಗಿಲಿಗೆ ಸರಪಳಿ ಬೀಗ ಹಾಕಿದ ವಾಚ್​ಮ್ಯಾನ್

Security Locked Door OF Office

#image_title

ಕಂಪನಿಗಳಲ್ಲಿ ಅವಧಿಗೂ ಮೀರಿ ಕೆಲಸ ಮಾಡಿಸಿಕೊಳ್ಳುವುದು ಸಾಮಾನ್ಯ. ಎಲ್ಲ ಕಂಪನಿಗಳಲ್ಲೂ ಅಲ್ಲವೆಂದರೂ ಸಾಮಾನ್ಯವಾಗಿ ಬಹುತೇಕ ಕಚೇರಿ/ಸಂಸ್ಥೆಗಳಲ್ಲಿ ಲಾಗಿನ್​ ಆಗುವ ಸಮಯ ಮಾತ್ರ ಸರಿಯಾಗಿರಬೇಕು ಎಂಬ ನಿಯಮ ಮಾಡಿರುತ್ತಾರೆ ಹೊರತು, ಉದ್ಯೋಗಿಗಳು ಲಾಗೌಟ್ ಆಗುವ ಅಂದರೆ ಕೆಲಸ ಮುಗಿಸಿ ಹೊರಡುವ ಸಮಯಕ್ಕೆ ಯಾವುದೇ ನಿಯಮ ಇರುವುದಿಲ್ಲ. ಅವಧಿಗೂ ಮುನ್ನ ಹೋಗುವಂತಿಲ್ಲ. ಸಮಯಕ್ಕೆ ಸರಿಯಾಗಿ ಎದ್ದು ಹೋಗಬಹುದು. ಅಗತ್ಯ ಬಿದ್ದರೆ, ಕೆಲಸದ ಅವಧಿ ಮುಗಿದ ಬಳಿಕವೂ ಕುಳಿತುಕೊಳ್ಳಬೇಕು..ಇದು ಸಾಮಾನ್ಯವಾಗಿ ಉದ್ಯೋಗಸ್ಥರ ಜೀವನ.

ಹೀಗೆಲ್ಲ ಇರುವಾಗ ಕಂಪನಿಯೊಂದರಲ್ಲಿ ವಾಚ್​​ಮ್ಯಾನ್​ವೊಬ್ಬರು ಬಾಗಿಲು ಮುಚ್ಚಿ, ಸರಪಳಿಯ ಬೀಗ ಹಾಕುತ್ತಿರುವ ವಿಡಿಯೊ ವೈರಲ್ ಆಗಿದೆ. ಉದ್ಯೋಗಿಗಳು ಅನುಮತಿ ಇಲ್ಲದೆ ಹೊರಗೆ ಹೋಗಬಾರದು ಎಂಬ ಕಾರಣಕ್ಕೆ ಹೀಗೆ ಮಾಡಿದ್ದಾಗಿ ಆತ ಹೇಳುವುದು ವಿಡಿಯೊದಲ್ಲಿ ಕೇಳಿಸುತ್ತದೆ. ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಹಾಗೇ, ನೆಟ್ಟಿಗರ ಆಕ್ರೋಶಕ್ಕೂ ಕಾರಣವಾಗಿದೆ.

ಎಡ್​ಟೆಕ್​ ಕಂಪನಿಯೊಂದರಲ್ಲಿ ಉದ್ಯಮಿಯಾಗಿರುವ ರವಿ ಹಂಡಾ ಎಂಬುವರು ಈ ವಿಡಿಯೊವನ್ನು ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹೀಗೆ ಬಾಗಿಲನ್ನು ಲಾಕ್​ ಮಾಡಿದ್ದು ಯಾವ ಕಂಪನಿಯಲ್ಲಿ ಎಂಬುದು ಗೊತ್ತಾಗಿಲ್ಲ. ಹೀಗ್ಯಾಕೆ ಬಾಗಿಲನ್ನು ಮುಚ್ಚುತ್ತೀದ್ದೀರಿ ಎಂದು ವಿಡಿಯೊ ಮಾಡುತ್ತಿರುವವರು, ವಾಚ್​​ಮ್ಯಾನ್​​ನನ್ನು ಪ್ರಶ್ನೆ ಮಾಡಿದ್ದಕ್ಕೆ ಆತ ‘ಈ ಕಂಪನಿಯ ಮ್ಯಾನೇಜರ್​ ಒಬ್ಬರು ಹೇಳಿದ್ದಕ್ಕೆ ಮಾಡುತ್ತಿದ್ದೇನೆ. ಇಲ್ಲಿನ ಯಾವ ಉದ್ಯೋಗಿಯೂ ನನ್ನ ಅನುಮತಿ ಪಡೆಯದೆಯೇ ಹೊರಗೆ ಹೋಗುವಂತಿಲ್ಲ. ಮನೆಗೂ ಹೋಗುವಂತಿಲ್ಲ. ಹೀಗಾಗಿ ಬಾಗಿಲನ್ನು ಲಾಕ್​ ಮಾಡು ಎಂದಿದ್ದಾರೆ’ ಎಂದು ವಾಚ್​ಮ್ಯಾನ್ ಹೇಳುತ್ತಾನೆ.

ವಿಡಿಯೊ ಸಿಕ್ಕಾಪಟೆ ವೈರಲ್ ಆಗುತ್ತಿದೆ. ವಿಡಿಯೊ ಶೇರ್ ಮಾಡಿಕೊಂಡಿರುವ ರವಿ ಹಂಡಾ ‘ಭಾರತದ ಎಡ್​​ಟೆಕ್​ ಕಂಪನಿಗಳನ್ನು ಹುಟ್ಟುಹಾಕಿದವರು ಈಗ ಅವರ ಉದ್ಯೋಗಿಗಳನ್ನು ಹೀಗೆ ಕೂಡಿ ಹಾಕುತ್ತಿದ್ದಾರೆ. ಇಂಥ ನರಕಸದೃಶ ಕಂಪನಿಗಳನ್ನು ಈ ದೇಶದಿಂದ ಹೊರಹಾಕಬೇಕು. ಇನ್ಯಾವುದೇ ದೇಶದಲ್ಲೂ ಹೀಗೆ ಕಂಪನಿಗಳು ಬಾಗಿಲು ಹಾಕುವ ಧೈರ್ಯವನ್ನು ಮಾಡುವುದಿಲ್ಲ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.

Coding Ninjas ಎಂಬ ಗುರುಗ್ರಾಮ ಮೂಲದ ಕಂಪನಿಯಲ್ಲಿ ಕಂಡು ಬಂದ ದೃಶ್ಯ ಇದಾಗಿದೆ. ವಿಡಿಯೊ ವೈರಲ್ ಆಗುತ್ತಿದ್ದಂತೆ Coding Ninjas ಕಂಪನಿ ಹೇಳಿಕೆ ಬಿಡುಗಡೆ ಮಾಡಿದ್ದು, ಈ ಬಗ್ಗೆ ವಿಷಾದ ವ್ಯಕ್ತಪಡಿಸುವುದಾಗಿ ತಿಳಿಸಿದೆ. ಹೀಗೆ ಬಾಗಿಲು ಹಾಕಲು ಸೂಚನೆ ನೀಡಿದ ಉದ್ಯೋಗಿಯನ್ನು ಪತ್ತೆ ಹಚ್ಚಲಾಯಿತು. ಅವರೂ ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದ್ದಾರೆ ಎಂದು ತಿಳಿಸಿದೆ. ಕಂಪನಿಯ ಸಂಸ್ಥಾಪಕರಿಗೂ ಈ ಬಗ್ಗೆ ವಿಷಯ ಗೊತ್ತಾಗಿದೆ. ಕ್ಷಮೆ ಕೇಳಿದರೂ ಉದ್ಯೋಗಿ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಿದ್ದೇವೆ ಎಂದು Coding Ninjas ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ಕಂಪನಿಯ ಸಂಸ್ಥಾಪಕನ ಹೆಸರು ಅಂಕುಶ್ ಸಿಂಗ್ಲಾ ಎಂದಾಗಿದ್ದು, ಅವರೂ ಕೂಡ ಟ್ವೀಟ್ ಮಾಡಿಕೊಂಡಿದ್ದಾರೆ. ಕಳೆದ ವಾರ ನಮ್ಮ ಕಂಪನಿಯಲ್ಲಿ ಹೀಗಾಗಿದ್ದು ನಿಜ. ಸೇಲ್ಸ್ ವಿಭಾಗದ ಒಬ್ಬ ಮ್ಯಾನೇಜರ್​​ನಿಂದಾಗಿ ಸಮಸ್ಯೆಯಾಯಿತು. ತಕ್ಷಣವೇ ಕ್ರಮ ವಹಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಕಂಪನಿಯ ಹೇಳಿಕೆಗಳು ಮತ್ತು ಅಂಕುಶ್​ ಸಿಂಗ್ಲಾ ಟ್ವೀಟ್​ನ್ನು ಕೂಡ ರವಿ ಹಂಡಾ ಶೇರ್ ಮಾಡಿಕೊಂಡಿದ್ದಾರೆ. ಆದರೆ ನೆಟ್ಟಿಗರು ವಿಡಿಯೊ ನೋಡಿ, ಇದು ಅತಿರೇಕದ ವರ್ತನೆ ಎಂದು ಹೇಳಿದ್ದಾರೆ.

Exit mobile version