ಬೆಂಗಳೂರು: ತಮಿಳುನಾಡಿನಲ್ಲಿ ಚಲಿಸುತ್ತಿದ್ದ ಖಾಸಗಿ ಬಸ್ ಒಂದರಿಂದ ಕೆಳಕ್ಕೆ ಬೀಳುತ್ತಿದ್ದ ಮಹಿಳೆಯನ್ನು ಆ ಬಸ್ನ ಕಂಡಕ್ಟರ್ ಕಾಪಾಡಿದ ವಿಡಿಯೊವೊಂದು ವೈರಲ್ ಆಗಿದೆ. ಬಸ್ ಒಳಗೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಭಯಾನಕ ದೃಶ್ಯ ಸೆರೆಯಾಗಿದೆ. ಈರೋಡ್ ಮತ್ತು ಮೆಟ್ಟೂರು ನಡುವೆ ಪ್ರಯಾಣಿಸುವ ಖಾಸಗಿ ಬಸ್ ನಲ್ಲಿ ಈ ಘಟನೆ ಸಂಭವಿಸಿದೆ. ಕಂಡಕ್ಟರ್ ಏನಾದರೂ ತಮ್ಮ ಚಾತುರ್ಯ ತೋರದೇ ಹೋಗಿದ್ದರೆ ಕೆಳಕ್ಕೆ ಬಿದ್ದ ಮಹಿಳೆ ಪ್ರಾಣ ಕಳೆದುಕೊಳ್ಳುವ ಸಾಧ್ಯತೆಗಳಿದ್ದವು.
ವೀಡಿಯೊದಲ್ಲಿ, ಯುವತಿಯೊಬ್ಬಳು ಬಸ್ಸಿನೊಳಗೆ ನಿಂತಿರುವುದನ್ನು ನಾವು ಕಾಣಬಹುದು. ಕಂಡಕ್ಟರ್ ಬಸ್ಸಿನ ಮುಂಭಾಗದ ಬಾಗಿಲ ಬಳಿ ನಿಂತು ಹೊರಗೆ ನೋಡುತ್ತಿರುತ್ತಾರೆ. ಮಹಿಳೆ ಸೀಟಿನಿಂದ ಎದ್ದು ಇಳಿಯಲೆಂದು ಮುಂಭಾಗಕ್ಕೆ ನಡೆಯಲು ಪ್ರಾರಂಭಿಸಿದ್ದರು. ಆಕೆ ಮುಂಭಾಗದ ಕಡೆಗೆ ನಡೆಯುತ್ತಿರುವಾಗ ಸಮತೋಲನ ಕಳೆದುಕೊಂಡು ಬೀಳುತ್ತಾರೆ. ಅವರ ಮುಂದಿನ ಬಾಗಿಲ ಮೂಲಕ ಹೊರಕ್ಕೆ ಬೀಳುವ ಹಂತಕ್ಕೆ ತಲುಪಿದ್ದರು.
ಕಂಡಕ್ಟರ್ ಯುವತಿ ಬೀಳುವುದನ್ನು ನೋಡಿ ತಕ್ಷಣ ಆಕೆಯನ್ನು ಹಿಡಿದಿದ್ದಾನೆ. ಈ ಎಲ್ಲ ದೃಶ್ಯಗಳು ಕೆಲವೇ ಕ್ಷಣಗಳಲ್ಲಿ ಮುಗಿದು ಹೋಗಿದೆ. ಕಂಡಕ್ಟರ್ ಯುವತಿಯ ಚೀಲ ಮತ್ತು ಕೂದಲನ್ನು ಹಿಡಿದು ಕಾಪಾಡುತ್ತಾನೆ. ಕ್ಯಾಬಿನ್ ನಿಂದ ಕಿರುಚಾಟ ಕೇಳಿದ ನಂತರ ಬಸ್ ಚಾಲಕ ನಿಧಾನಗೊಳಿಸುತ್ತಾಣೆ. ಕಂಡಕ್ಟರ್ ಮಹಿಳೆಯನ್ನು ಮೇಲಕ್ಕೆ ಎಳೆದಿದ್ದಾರೆ ಬಳಿಕ ಬಸ್ನೊಳಗಿದ್ದ ಇತರ ಪ್ರಯಾಣಿಕರು ಆಕೆಗೆ ಮೇಲಕ್ಕೆ ಬರಲು ಸಹಾಯ ಮಾಡುತ್ತಾರೆ. ಘಟನೆಯಲ್ಲಿ ಮಹಿಳೆ ಯಾವುದೇ ಗಾಯಗಳಿಲ್ಲದೆ ಪಾರಾಗಿರುವುದು ಅದೃಷ್ಟವೇ ಸರಿ. ವರದಿಗಳ ಪ್ರಕಾರ ಮಹಿಳೆ ನಂತರ ತನ್ನ ವಸ್ತುಗಳನ್ನು ಸಂಗ್ರಹಿಸಿ ಮುಂದಿನ ನಿಲ್ದಾಣದಲ್ಲಿ ಬಸ್ ಇಳಿದಿದ್ದರು.
ಬಸ್ ಕಂಡಕ್ಟರ್ ಆಕೆಯನ್ನು ಹಿಡಿಯದಿದ್ದರೆ ರಸ್ತೆಯಲ್ಲಿ ಬಿದ್ದು ಗಂಭೀರವಾಗಿ ಗಾಯಗೊಳ್ಳುತ್ತಿದ್ದರು. ಯುವತಿ ನಿಯಂತ್ರಣ ಕಳೆದುಕೊಂಡಿದ್ದಾಳೆಯೇ ಅಥವಾ ಬಸ್ ಚಾಲಕ ವೇಗವಾಗಿ ಓಡಿಸಿದನೇ ಎಂಬುದು ಸ್ಪಷ್ಟವಾಗಿಲ್ಲ. ಖಾಸಗಿ ಬಸ್ ಚಾಲಕರು ಸಾಮಾನ್ಯವಾಗಿ ಭಾರತದ ಪ್ರತಿಯೊಂದು ಭಾಗದಲ್ಲೂ ಅಜಾಗರೂಕತೆಯಿಂದ ಚಾಲನೆ ಮಾಡುತ್ತಾರೆ. ವೇಗದ ಮಿತಿಯ ಹೊರತಾಗಿಯೂ ಅವರು ಅದನ್ನು ಕ್ಯಾರೇ ಮಾಡುವುದಿಲ್ಲ. ಸಮಯ ಪಾಲನೆಗಾಗಿ ವೇಗವಾಗಿ ಹೋಗುತ್ತಾರೆ. ಸಮಯಕ್ಕೆ ಸರಿಯಾಗಿ ನಿಲ್ದಾಣಗಳನ್ನು ತಲುಪಲು, ಅವರು ಅಜಾಗರೂಕತೆಯಿಂದ ಚಾಲನೆ ಮಾಡುತ್ತಾರೆ. ಇದು ಅನೇಕ ಸಂದರ್ಭಗಳಲ್ಲಿ ಅಪಘಾತಗಳಿಗೆ ಕಾರಣವಾಗುತ್ತವೆ.
ಬಾಗಿಲು ಹಾಕಿರಲಿಲ್ಲ
ಬಸ್ ಕಂಡಕ್ಟರ್ ಬಾಗಿಲುಗಳನ್ನು ತೆರೆದು ಬಸ್ ನ ಬಾಗಿಲ ಬಳಿ ನಿಂತಿದ್ದ. ಪ್ರಯಾಣಿಕರನ್ನು ಸಾಗಿಸುವ ಖಾಸಗಿ ಅಥವಾ ಸರ್ಕಾರಿ ಬಸ್ಗಳಿಗೆ ಬಾಗಿಲು ಇರಲೇಬೇಕು. ಚಾಲನೆಯಲ್ಲಿರುವಾಗ ಅದನ್ನು ಮುಚ್ಚಬೇಕು. ಪ್ರಯಾಣಿಕರ ಸುರಕ್ಷತೆಗಾಗಿ ವಾಹನದ ಬಾಗಿಲು ಮುಚ್ಚಬೇಕು. ಅಲ್ಲದೆ, ಬಸ್ ನ ಫುಟ್ ಬೋರ್ಡ್ ಮೇಲೆ ನಿಲ್ಲುವುದು ಅತ್ಯಂತ ಅಪಾಯಕಾರಿ ಏಕೆಂದರೆ ವಾಹನದಿಂದ ಬೀಳುವ ಸಾಧ್ಯತೆಗಳು ತುಂಬಾ ಹೆಚ್ಚು.
ಇದನ್ನೂ ಓದಿ : Viral Video: ಹುಲಿ-ಮೊಸಳೆ ಮಧ್ಯೆ ರಣ ರೋಚಕ ಕದನ; ಕೊನೆಯಲ್ಲಿ ಗೆದ್ದವರು ಯಾರು?
ಒಂದು ರೀತಿಯಲ್ಲಿ ಪ್ರಯಾಣಿಕರ ತಪ್ಪೂ ಇತ್ತು. ಎದ್ದು ನಿಲ್ಲುವ ಮೊದಲು ಬಸ್ ಸಂಪೂರ್ಣ ನಿಲ್ಲುವವರೆಗೆ ಅವರು ಕಾಯಲಿಲ್ಲ. ಅವಳ ಯೋಜನೆ ಬಹುಶಃ ಮುಂಭಾಗದ ಬಾಗಿಲಿಗೆ ನಡೆದು ಮುಂದಿನ ನಿಲ್ದಾಣದಲ್ಲಿ ಬಸ್ ನಿಲ್ಲಿಸುವಂತೆ ಕಂಡಕ್ಟರ್ ಗೆ ಹೇಳುವುದಾಗಿತ್ತು. ಆದಾಗ್ಯೂ, ಬಸ್ಸಿನ ಲೋಹದ ಬಾರ್ನಲ್ಲಿ ನೇತಾಡುತ್ತಿದ್ದ ಗ್ರಾಬ್ ಹ್ಯಾಂಡಲ್ ಹಿಡಿಯಲು ಅವಳಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ಇಂಥ ಘಟನೆಗಳನ್ನು ಸಾರ್ವಜನಿಕ ಸಾರಿಗೆಯನ್ನು ಬಳಸುವಾಗ ಈ ಸಣ್ಣ ವಿಷಯಗಳ ಬಗ್ಗೆ ಯಾವಾಗಲೂ ಜಾಗರೂಕರಾಗಿರಬೇಕು.