ಬೆಂಗಳೂರು: ಬಸ್ಸಲ್ಲಾಗಲೀ ಅಥವಾ ವಿಮಾನದಲ್ಲಾಗಲೀ, ಪ್ರಯಾಣ ಮಾಡುವಾಗ ನಮಗೆ ನಮ್ಮದೇ ಆದ ಪ್ರೈವಸಿ ಅತಿ ಮುಖ್ಯ ಎನಿಸುತ್ತದೆ. ನಾವು ಮೊಬೈಲ್‌ನಲ್ಲಿ ಏನು ನೋಡುತ್ತಿದ್ದೇವೆ ಅಥವಾ ವಿಮಾನದ ಸೀಟಿನಲ್ಲಿರುವ ಟ್ಯಾಬ್‌ನಲ್ಲಿ ಏನು ವೀಕ್ಷಿಸುತ್ತಿದ್ದೇವೆ ಎನ್ನುವುದನ್ನು ಪಕ್ಕದವರು ಇಣುಕಿ ನೋಡುವುದು ನಮಗೆ ಕಿರಿಕಿರಿ ಎನಿಸುತ್ತದೆ. ಆದರೆ ಇಲ್ಲೊಬ್ಬ ಪ್ರಯಾಣಿಕರು ಈ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ವಿಮಾನದ ತಮ್ಮ ಎಕಾನಮಿ ಸೀಟ್ ಅನ್ನು ವಿಐಪಿ ಸೀಟ್ ರೀತಿ ಬದಲಾಯಿಸಿಕೊಂಡಿದ್ದಾರೆ. ಅದರ ವಿಡಿಯೊ ಜಾಲತಾಣಗಳಲ್ಲಿ ಹರಿದಾಡಿದ್ದು, ಈ ವಿಚಾರ ಎಲ್ಲೆಡೆ ಭಾರಿ ಚರ್ಚೆಗೆ (Viral News) ಒಳಗಾಗಿದೆ.
ಕ್ಯಾಲಿಫೋರ್ನಿಯಾದ ಗಿಗಾ ವಶಕಿಡ್ಜೆ ಹೆಸರಿನ ಪ್ರಯಾಣಿಕ ಇತ್ತೀಚೆಗೆ ಸ್ಯಾನ್ ಡಿಯಾಗೋದಿಂದ ಇಟಲಿಯ ವೆನಿಸ್‌ಗೆ ವಿಮಾನದಲ್ಲಿ ಪ್ರಯಾಣ ಮಾಡಿದ್ದಾರೆ. ಅವರು ತಮ್ಮ ಎಕಾನಮಿ ಸೀಟ್‌ನಲ್ಲಿ ಕುಳಿತುಕೊಂಡಾಗ ಪಕ್ಕದಲ್ಲಿ ಈ ರೀತಿಯಲ್ಲಿ ವಿಶೇಷವಾಗಿ ವಿಐಪಿ ಸೀಟನ್ನು ರಚಿಸಿಕೊಂಡ ಪ್ರಯಾಣಿಕರೊಬ್ಬರು ಕಾಣಿಸಿಕೊಂಡಿದ್ದಾರಂತೆ. ಅದರ ವಿಡಿಯೊವನ್ನು ಅವರು ಚಿತ್ರೀಕರಿಸಿದ್ದು, ಟಿಕ್‌ಟಾಕ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. “ನನ್ನ ಪಕ್ಕದಲ್ಲಿದ್ದ ಪ್ರಯಾಣಿಕರು ಎಕಾನಮಿ ಸೀಟನ್ನು ವಿಐಪಿ ಸೀಟಾಗಿ ಬದಲಾಯಿಸಿಕೊಂಡಿದ್ದಾರೆ, ನೀವು ಈ ರೀತಿಯ ದೃಶ್ಯವನ್ನು ಎಂದಾದರೂ ನೋಡಿದ್ದೀರಾ?” ಎಂದು ಅವರು ಕ್ಯಾಪ್ಶನ್‌ನಲ್ಲಿ ಕೇಳಿದ್ದಾರೆ.
ವಿಡಿಯೊದಲ್ಲಿ ವ್ಯಕ್ತಿಯು ತಮಗೆ ಪ್ರಯಾಣದ ವೇಳೆ ಚಳಿಯಿಂದ ರಕ್ಷಿಸಿಕೊಳ್ಳಲೆಂದು ವಿಮಾನದಲ್ಲಿ ಕೊಡಲಾಗಿದ್ದ ಬೆಡ್‌ಶೀಟ್ ಅನ್ನು ತಮ್ಮ ಮೇಲೆ ಲಗೇಜ್ ಇಡುವ ಕಂಪಾಟ್ಮೆಂಟ್‌ನ ಬಾಗಿಲಿಗೆ ಸಿಕ್ಕಿಸಿದ್ದಾರೆ. ಆ ಬೆಡ್‌ಶೀಟ್ ಅನ್ನು ಕರ್ಟನ್ ರೀತಿಯಲ್ಲಿ ಇಳಿಬಿಟ್ಟು, ಅದರ ಒಂದು ಭಾಗವನ್ನು ಮುಂದಿನ ಸೀಟಿಗೆ ಸಿಕ್ಕಿಸಿದ್ದಾರೆ. ಇದರಿಂದಾಗಿ ಅಲ್ಲಿ ಯಾರು ಕುಳಿತಿದ್ದಾರೆ, ಅವರೇನು ಮಾಡುತ್ತಿದ್ದಾರೆ ಎನ್ನುವುದು ಪಕ್ಕ ಕುಳಿತವರಿಗೆ ಕಾಣದಂತೆ ಪ್ರೈವಸಿ ಸೃಷ್ಟಿಯಾಗಿದೆ.
ಈ ವಿಡಿಯೊ ಟಿಕ್‌ಟಾಕ್‌ನಲ್ಲಿ ಹರಿದಾಡುತ್ತಿದ್ದಂತೆಯೇ ಜನರು ಈ ವಿಡಿಯೊ ಬಗ್ಗೆ ಹಲವಾರು ರೀತಿಯಲ್ಲಿ ಚರ್ಚೆ ಆರಂಭಿಸಿದ್ದಾರೆ. ಸಾವಿರಾರು ಜನರು ವಿಡಿಯೊವನ್ನು ಮೆಚ್ಚಿಕೊಂಡಿದ್ದು, ಅದಕ್ಕೆ ಲೈಕ್ ಅನ್ನು ಮಾಡಿದ್ದಾರೆ. “ಅಬ್ಬಬ್ಬಾ, ಈ ಪ್ರಯಾಣಿಕರದ್ದು ಎಂತಹ ಅದ್ಭುತ ತಲೆ. ಎಷ್ಟೊಂದು ಚೆನ್ನಾಗಿ ಪ್ರೈವಸಿಯನ್ನು ಸೃಷ್ಟಿಸಿಕೊಂಡಿದ್ದಾರೆ”, “ಇದುವರೆಗೂ ಹಲವು ಬಾರಿ ವಿಮಾನದಲ್ಲಿ ಪ್ರಯಾಣ ಮಾಡಿದರೂ ಈ ಐಡಿಯಾ ಬಂದಿರಲಿಲ್ಲ. ಮುಂದಿನ ಬಾರಿ ಪ್ರಯಾಣ ಮಾಡುವಾಗ ಗ್ಯಾರಂಟಿ ನಾನೂ ಹೀಗೇ ಮಾಡುತ್ತೇನೆ”, “ಈ ರೀತಿ ಮಾಡಿದ್ದನ್ನು ನೋಡಿ ಏರ್‌ಲೈನ್ ಸಿಬ್ಬಂದಿ ಪ್ರಶ್ನಿಸಲಿಲ್ಲವೇ?” ಎನ್ನುವಂತಹ ಹಲವಾರು ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ. ಜನರು ಈ ವಿಡಿಯೊವನ್ನು ಮೆಚ್ಚಿಕೊಂಡು ತಮ್ಮ ಸ್ನೇಹಿತರೊಂದಿಗೂ ಹಂಚಿಕೊಳ್ಳಲಾರಂಭಿಸಿದ್ದಾರೆ.
ಇದನ್ನೂ ಓದಿ: Modi Yogi Sisters: ಪಿಎಂ ಮೋದಿ, ಸಿಎಂ ಯೋಗಿ ಸಹೋದರಿಯರ ಭೇಟಿ; ಇವರೆಷ್ಟು ಸಿಂಪಲ್ ನೋಡಿ
ಇದೇ ರೀತಿಯ ಹಲವಾರು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ ಹಾಗೆಯೇ ವೈರಲ್ ಕೂಡ ಆಗುತ್ತಿರುತ್ತವೆ. ಹಾಗಾಗಿ ಈ ವಿಡಿಯೊ ನೋಡಿದ ಕೆಲವರು “ಇನ್ನೂ ಈ ಕಣ್ಣುಗಳಲ್ಲಿ ಏನೇನು ನೋಡುವುದು ಬಾಕಿಯುಳಿದಿದೆಯೋ?” ಎಂದು ತಮಾಷೆಯನ್ನೂ ಮಾಡಲಾರಂಭಿಸಿದ್ದಾರೆ.