ಇತ್ತೀಚೆಗೆ ದೆಹಲಿ ಮೆಟ್ರೋದಲ್ಲಿ ಯುವತಿಯೊಬ್ಬಳು ತುಂಡುಡುಗೆ ತೊಟ್ಟು ಪ್ರಯಾಣಿಸುತ್ತಿದ್ದ ವಿಡಿಯೊ ವೈರಲ್ ಆಗಿತ್ತು. ಅದನ್ನು ನೋಡಿದ ಅನೇಕರು ಟೀಕಿಸಿದ್ದರು. ಇನ್ನೂ ಕೆಲವರು, ಯುವತಿ ಯಾವ ರೀತಿ ಬಟ್ಟೆ ಧರಿಸಬೇಕು ಎಂಬುದು ಆಕೆಯ ಆಯ್ಕೆ ಎಂದೂ ಹೇಳಿದ್ದರು. ಅಂದಹಾಗೇ, ಯುವತಿ ಹೆಸರು ರಿದಮ್ ಚಾನಾನಾ ಎಂದಾಗಿದ್ದು ಉಡುಪಿನಿಂದಾಗಿಯೇ ಇಂಟರ್ನೆಟ್ನಲ್ಲಿ ಸೆನ್ಸೇಶನ್ ಸೃಷ್ಟಿಸಿದ್ದಳು. ಹಾಗೇ, ಹಲವು ತಿಂಗಳುಗಳಿಂದ ನಾನು ಇದೇ ರೀತಿ ಬಟ್ಟೆಯನ್ನೇ ಧರಿಸಿ ಓಡಾಡುತ್ತಿದ್ದೇನೆ ಎಂದೂ ಹೇಳಿದ್ದಳು. ಯುವತಿಯ ವಿಡಿಯೊ ವೈರಲ್ (Viral Video) ಆಗಿ, ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ದೆಹಲಿ ಮೆಟ್ರೊ ಹೇಳಿಕೆ ಬಿಡುಗಡೆ ಮಾಡಿ ‘ಪ್ರಯಾಣಿಕರು ಸಾಮಾಜಿಕ ಶಿಷ್ಟಾಚಾರಗಳನ್ನು’ ಪಾಲಿಸಬೇಕು ಎಂದು ಸೂಚನೆ ಹೊರಡಿಸಿದೆ.
ಆದರೆ ಅದಾಗಿ ಎರಡು ದಿನಗಳಲ್ಲಿ ದೆಹಲಿ ಮೆಟ್ರೋ ರೈಲಿನಲ್ಲಿ ಜೋಡಿಯೊಂದು ಪರಸ್ಪರ ತುಟಿಗೆ, ಕೆನ್ನೆಗೆ ಚುಂಬಿಸಿಕೊಳ್ಳುತ್ತಿರುವ ವಿಡಿಯೊ ವೈರಲ್ ಆಗಿದೆ. ಮೆಟ್ರೋ ರೈಲಿನ ಬಾಗಿಲ ಬಳಿ ಬಿಗಿದಪ್ಪಿ ನಿಂತಿರುವ ಹುಡುಗ-ಹುಡುಗಿ ಒಬ್ಬರಿಗೊಬ್ಬರು ಪ್ರೀತಿಯಿಂದ ಮುತ್ತಿಟ್ಟುಕೊಂಡಿದ್ದಾರೆ. ಅವನು ಆಕೆಯನ್ನು, ಆಕೆ ಅವನನ್ನು ಮುದ್ದಾಡಿದ್ದಾರೆ. ಅದನ್ನು ಅವರಿಗೆ ಗೊತ್ತಿಲ್ಲದಂತೆ ಇನ್ಯಾರೋ ಪ್ರಯಾಣಿಕರು ವಿಡಿಯೊ ಮಾಡಿ, ಶೇರ್ ಮಾಡಿಕೊಂಡಿದ್ದಾರೆ. ಇವರು ಗಂಡ-ಹೆಂಡತಿಯೋ, ಲವರ್ಸೋ ಎಂಬುದು ಸ್ಪಷ್ಟವಾಗಿಲ್ಲ.
ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ಬಂದಿದೆ. ಕೆಲವರು ಪ್ರೀತಿ-ಪ್ರೇಮವೆಲ್ಲ ಮನೆಯಲ್ಲಿದ್ದರೆ ಚೆನ್ನ ಎಂದಿದ್ದಾರೆ. ಹಾಗೇ, ಸಾರ್ವಜನಿಕ ಪ್ರದೇಶದಲ್ಲಿ ಹೀಗೆ ಮಾಡುವುದರಿಂದ ಉಳಿದವರಿಗೆ ಮುಜುಗರ ಆಗುತ್ತದೆ ಎಂದೂ ಹೇಳಿದ್ದಾರೆ. ಆದರೆ ಇನ್ನೂ ಕೆಲವರು..ಇದರಲ್ಲಿ ಅಸಭ್ಯ ವರ್ತನೆ ಏನಿದೆ. ಪರಸ್ಪರ ಅಪ್ಪಿಕೊಂಡು ನಿಂತು ಚುಂಬಿಸಿಕೊಂಡಿದ್ದಾರಷ್ಟೇ, ಯುರೋಪ್ ದೇಶಗಳೆಲ್ಲಿ ಇದು ಅತ್ಯಂತ ಸಾಮಾನ್ಯ. ನಮ್ಮಲ್ಲೂ ಸಿನಿಮಾಗಳಲ್ಲಿ ಇಂಥ ದೃಶ್ಯ ತೋರಿಸುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಹಾಗೇ, ‘ಅವರಿಬ್ಬರೂ ಯಾರಿಗೂ ತೊಂದರೆ ಕೊಟ್ಟಿಲ್ಲ. ಪರಸ್ಪರ ಚುಂಬಿಸಿಕೊಳ್ಳುತ್ತಿರುವಾಗ, ಅವರಿಗೆ ಗೊತ್ತಿಲ್ಲದಂತೆ ವಿಡಿಯೊ ಮಾಡಿದ್ದಲ್ಲದೆ, ಅದನ್ನು ವೈರಲ್ ಮಾಡಿದ್ದು ಅಪರಾಧ. ಅದು ಅವರ ಖಾಸಗಿತನಕ್ಕೆ ಧಕ್ಕೆ ತಂದಂತೆ’ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.