ಚೆನ್ನೈ: ತಮಿಳುನಾಡಿನಲ್ಲಿ 9 ವರ್ಷದ ಬಾಲಕಿಯೊಬ್ಬಳ ಮೇಲೆ ಹಸುವೊಂದು ಕ್ರೂರವಾಗಿ ದಾಳಿ ನಡೆಸಿದ್ದು, ಬಾಲಕಿಯನ್ನು ತುಳಿದು, ತಿವಿದು, ಡಿಕ್ಕಿಯೊಡೆದ (Cow Attack) ಭೀಕರ ವಿಡಿಯೊ ವೈರಲ್ (Viral Video) ಆಗಿದೆ. ಬಾಲಕಿಯು ಶಾಲೆಯಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಹಸು ದಾಳಿ ಮಾಡಿದೆ.
ಆಯೇಷಾ ಎಂಬ ಬಾಲಕಿಯು ತಾಯಿ ಜತೆ ಮನೆಗೆ ನೆಡೆದುಕೊಂಡು ಹೋಗುತ್ತಿದ್ದಳು. ತಾಯಿ ಹಾಗೂ ಸಹೋದರ ಉಮರ್ ಹಿಂದೆ ಇದ್ದರೆ, ಆಯೇಷಾ ಮುಂದೆ ಮುಂದೆ ನಡೆದುಕೊಂಡು ಹೋಗುತ್ತಿದ್ದಳು. ಇದೇ ವೇಳೆ ಎರಡು ಹಸುಗಳು ತೆರಳುತ್ತಿದ್ದವು. ಆಗ ಒಂದು ಹಸು ಆಯೇಷಾ ಮೇಲೆ ದಾಳಿ ನಡೆಸಿದೆ.
ಹಸು ದಾಳಿಯ ಭೀಕರ ವಿಡಿಯೊ
ಚೆನ್ನೈನ ಎಂಎಂಡಿಎ ಕಾಲೊನಿಯ ಆರ್ ಬ್ಲಾಕ್‌ನಲ್ಲಿ ಆಗಸ್ಟ್ 9ರಂದು ಘಟನೆ ನಡೆದಿದೆ. ಮೊದಲು ಹಸು ಕೋಡುಗಳಿಂದ ಬಾಲಕಿಗೆ ತಿವಿದೆ. ನಂತರ ಬಾಲಕಿ ಕೆಳಗೆ ಬಿದ್ದ ಮೇಲೆ ಡಿಕ್ಕಿ ಹೊಡೆದಿದೆ. ಮನಸ್ಸು ಬಂದ ಹಾಗೆ ಆಕೆಯನ್ನು ತುಳಿದುಹಾಕಿದೆ. ಮಗಳ ಮೇಲೆ ಹಸು ದಾಳಿ ಮಾಡಿದ್ದನ್ನು ಕಂಡ ತಾಯಿಯು ಸಹಾಯಕ್ಕಾಗಿ ಅಂಗಲಾಚಿದ್ದಾರೆ.
ಹಸು ದಾಳಿಗೆ ತುತ್ತಾದ ಬಾಲಕಿಯನ್ನು ರಕ್ಷಿಸಲು ಹಲವು ಜನ ಪ್ರಯತ್ನಿಸಿದ್ದಾರೆ. ಹಸುವನ್ನು ಬೆದರಿಸಿ ಹಿಂದಕ್ಕೆ ಕಳುಹಿಸಲು ಕಲ್ಲೇಟು ಕೊಟ್ಟಿದ್ದಾರೆ. ಇಷ್ಟಾದರೂ ಹಸು ಬಾಲಕಿಯನ್ನು ಬಿಟ್ಟಿಲ್ಲ. ಮೂರ್ನಾಲ್ಕು ಜನ ಹಸುವನ್ನು ಹಿಮ್ಮೆಟ್ಟಿಸಲು ಯತ್ನಿಸಿದರೂ, ಅವರ ಮೇಲೆಯೇ ಹಸು ದಾಳಿ ಮಾಡಲು ಮುಂದಾಗಿದೆ.
ಇದನ್ನೂ ಓದಿ: Electric Shock : ರೋಡ್ ಡಿವೈಡರ್ ದಾಟುವ ವೇಳೆ ಕರೆಂಟ್ ಶಾಕ್: ಬೈಕ್ ಸವಾರ ಸ್ಥಳದಲ್ಲೇ ಸಾವು
ಕೊನೆಗೂ ಕಲ್ಲೇಟು ಕೊಟ್ಟು, ಕೂಗಾಡಿ ಹಸುವಿನಿಂದ ಬಾಲಕಿಯನ್ನು ಜನ ರಕ್ಷಿಸಿದ್ದಾರೆ. ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆ ಅಪಾಯದಿಂದ ಪಾರಾಗಿದ್ದಾಳೆ ಎಂದು ತಿಳಿದುಬಂದಿದೆ. ಇನ್ನು, ಹಸುವನ್ನು ಹೀಗೆ ನಿರ್ಲಕ್ಷ್ಯದಿಂದ ಬೀದಿಗೆ ಬಿಟ್ಟ ಮಾಲೀಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಜನ ಆಗ್ರಹಿಸಿದ್ದಾರೆ.