Site icon Vistara News

Viral Video | ಗೋವಿಗೆ ಅಮ್ಮ ಎಂದು ಸುಮ್ಮನೆ ಹೇಳೋಲ್ಲ; ಈ ದೃಶ್ಯಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲ

Cow

ಹಿಂದು ಸಂಸ್ಕೃತಿಯಲ್ಲಿ ಗೋವನ್ನು ತಾಯಿಯೆಂದು ಪೂಜಿಸುತ್ತಾರೆ. ಗೋ ಮಾತೆಯೆಂದೇ ಕೆರೆಯುತ್ತಾರೆ. ಹಸು ಪ್ರಕೃತಿಯ ಇನ್ನೊಂದು ಅವತಾರ ಎಂದೇ ಪರಿಗಣಿಸಲ್ಪಟ್ಟಿದೆ. ಅಂಥ ಗೋವು ಈಗ ನಾಯಿಮರಿಗಳಿಗೂ ತನ್ನ ಮಾತೃಹೃದಯವನ್ನು ತೋರಿಸಿದೆ. ಗೋವೊಂದು ಹಸಿದ ನಾಯಿ ಮರಿಗಳಿಗೆ ಹಾಲುಣಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬ ವೈರಲ್ ಆಗುತ್ತಿದ್ದು, ಅದನ್ನು ನೋಡಿದರೆ ಮನಸು ತುಂಬಿ ಬರುತ್ತದೆ.

ಇಂಡಿಯನ್ ಫಾರೆಸ್ಟ್ ಸರ್ವೀಸ್​ (ಐಎಫ್​ಎಸ್​) ಅಧಿಕಾರಿ ಸುಸಾಂತ ನಂದಾ ಅವರು ಟ್ವಿಟರ್​​ನಲ್ಲಿ ಈ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ‘ಗೋಮಾತೆ ನಾಯಿಮರಿಗಳನ್ನು ದತ್ತು ತೆಗೆದುಕೊಂಡಿದೆ. ಇಂಥ ಸನ್ನಿವೇಶವನ್ನೆಲ್ಲ ಭಾರತದಲ್ಲಿ ಮಾತ್ರ ನೋಡಲು ಸಾಧ್ಯವಾಗುತ್ತದೆ’ ಎಂದು ಕ್ಯಾಪ್ಷನ್​ ಬರೆದುಕೊಂಡಿದ್ದಾರೆ. ಈ ವಿಡಿಯೋವನ್ನು ಆಗಸ್ಟ್​ 3ರಂದು ಶೇರ್​​ ಮಾಡಿಕೊಳ್ಳಲಾಗಿದ್ದು, ಇಲ್ಲಿಯವರೆಗೆ 29 ಸಾವಿರಕ್ಕೂ ಅಧಿಕ ವೀವ್ಸ್​ ಕಂಡಿದೆ. ‘ಬಿಳಿ ಬಣ್ಣದ ಹಸುವೊಂದು ಮಲಗಿದೆ. ನಾಲ್ಕು ಕಂದು ಬಣ್ಣದ ನಾಯಿ ಮರಿಗಳು ಅದರ ಮೊಲೆ ಹಾಲನ್ನು ಕುಡಿಯುತ್ತಿವೆ. ಇವೆಲ್ಲ ಬೀದಿ ನಾಯಿಯ ಮರಿಗಳು. ತಾಯಿ ಎಲ್ಲಿಗೆ ಹೋಯಿತೋ ಗೊತ್ತಿಲ್ಲ, ಈ ಹಸು ಒಂದಿನಿತೂ ಪ್ರತಿರೋಧ ಒಡ್ಡದೆ, ಅಲ್ಲಾಡದೆ, ಕಣ್ಮುಚ್ಚಿ ಮಲಗಿ ಆ ಮರಿಗಳು ಸಂತೃಪ್ತಿಯಿಂದ ಹಾಲು ಕುಡಿಯುವಂತೆ ಮಾಡಿದ್ದನ್ನು ವಿಡಿಯೋದಲ್ಲಿ ನೋಡಬಹುದು.

ವಿಡಿಯೋವನ್ನು ನೋಡಿದ ಜನರು ಖುಷಿ ವ್ಯಕ್ತಪಡಿಸಿದ್ದಾರೆ. ಗೋವಿನಲ್ಲಿ ದೇವರಿದ್ದಾನೆ ಎಂದು ಹೇಳುತ್ತಾರೆ. ಆದರೆ ನಿಜ ಹೇಳಬೇಕು ಎಂದರೆ, ಹಸುವೇ ಒಂದು ದೇವರು ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಹಾಗೇ, ನಿಸ್ವಾರ್ಥ ಮತ್ತು ಪ್ರೀತಿಯಿಂದ ಸೇವೆ ಸಲ್ಲಿಸುವ ಏಕೈಕ ಪ್ರಾಣಿ ಹಸು ಎಂದು ಇನ್ನೊಬ್ಬರು ಬರೆದಿದ್ದಾರೆ. ಹೀಗೆ ಹಸುವಿನ ಬಗ್ಗೆ ಅನೇಕರು ತಮ್ಮದೇ ರೀತಿಯ ವ್ಯಾಖ್ಯಾನ ಕೊಟ್ಟಿದ್ದಾರೆ.

ಇದನ್ನೂ ಓದಿ: Viral Video: ಲೋಕಸಭೆಯಲ್ಲಿ ಲಗುಬಗೆಯಿಂದ ತಮ್ಮ ಬ್ಯಾಗ್​ ಅಡಗಿಸಿಟ್ಟ ತೃಣಮೂಲ ಕಾಂಗ್ರೆಸ್ ಸಂಸದೆ !

Exit mobile version