ಲೇಕ್ಸ್ ಸ್ಟೇಟ್: ಮಂಗಗಳ ದಾಳಿ, ಹುಚ್ಚು ನಾಯಿ ಅಟ್ಯಾಕ್, ಬೀದಿ ನಾಯಿಗಳಿಂದ ದಾಳಿ, ಎತ್ತು ಬಂದು ತಿವಿಯುವುದೆಲ್ಲ ಭಾರತದಲ್ಲಂತೂ ಪದೇಪದೆ ನಡೆಯುತ್ತಿರುತ್ತದೆ. ಆದರೆ ಎಂದಾದರೂ ಆ ಪ್ರಾಣಿಗಳಿಗೆ ಕಾನೂನು-ಕಾಯ್ದೆಯಡಿ ಶಿಕ್ಷೆ ನೀಡಿದ್ದನ್ನು, ಅವುಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದನ್ನು ಕೇಳಿದ್ದೀರಾ? ಸಾಧ್ಯವೇ ಇಲ್ಲ ಬಿಡಿ. ಯಾವುದೇ ಪ್ರಾಣಿ ದಾಳಿಯಾಗಿ ಮನುಷ್ಯನಿಗೆ ಗಾಯವಾದರೆ ಅಥವಾ ಆತನ ಜೀವವೇ ಹೋದರೂ ಅವುಗಳನ್ನು ಹಿಡಿದು ಜೈಲಿಗೆ ಹಾಕುವ ಕಾನೂನಂತೂ ನಮ್ಮ ದೇಶದಲ್ಲಿ ಇಲ್ಲವೇ ಇಲ್ಲ. ಆದರೆ ಉತ್ತರ ಆಫ್ರಿಕಾದ ದಕ್ಷಿಣ ಸೂಡಾನ್ ದೇಶದಲ್ಲಿ ಹೀಗೊಂದು ಘಟನೆ ನಡೆದಿದೆ. 12 ವರ್ಷದ ಬಾಲಕನಿಗೆ ತಿವಿದು ಕೊಂದ ಎತ್ತು ಮತ್ತು ಅದರ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.
ಲೇಕ್ಸ್‌ಸ್ಟೇಟ್‌ನ ಹೊಲವೊಂದರಲ್ಲಿ ನೇಗಿಲು ಎಳೆಯುತ್ತಿದ್ದ ಎತ್ತು, ಅದನ್ನು ಬಿಟ್ಟ ಸಂದರ್ಭದಲ್ಲಿ ಅಲ್ಲೇ ಸುತ್ತಮುತ್ತ ಓಡಾಡುತ್ತ ಹುಲ್ಲು ಮೇಯುತ್ತಿತ್ತು. ಸಂಜೆ ವೇಳೆ ಅದೇ ದಾರಿಯಲ್ಲಿ ಹೋಗುತ್ತಿದ್ದ 12 ವರ್ಷದ ಬಾಲಕನ ಮೇಲೆ ದಾಳಿ ಮಾಡಿತ್ತು. ಎತ್ತು ತಿವಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದ. ಬಾಲಕನ ಕುಟುಂಬದವರು ಈ ಬಗ್ಗೆ ದೂರು ಕೊಟ್ಟಿದ್ದರು. ಹೀಗಾಗಿ ಎತ್ತು ಮತ್ತು ಅದರ ಮಾಲೀಕ ಇಬ್ಬರನ್ನೂ ಪೊಲೀಸ್ ಅರೆಸ್ಟ್ ಮಾಡಿದ್ದಾರೆ. ಎತ್ತನ್ನು ಬಂಧಿಸಿರುವುದನ್ನು ಪೊಲೀಸ್ ವಕ್ತಾರ ಮೇಜರ್ ಎಲಿಜಾಹ್ ಮಹಬೋರ್ ದೃಢಪಡಿಸಿದ್ದು, ಅದನ್ನು ಸದ್ಯ ರುಂಬೆಕ್ ಸೆಂಟ್ರಲ್ ಕಂಟ್ರಿ ಪೊಲೀಸ್ ಸ್ಟೇಶನ್‌ನಲ್ಲಿಡಲಾಗಿದೆ. ಹುಡುಗನ ಮೃತದೇಹವನ್ನು ಪೋಸ್ಟ್ ಮಾರ್ಟಮ್‌ಗೆ ಕಳಿಸಲಾಗಿದೆ ಎಂದು ತಿಳಿಸಿದ್ದಾರೆ.
ದಕ್ಷಿಣ ಸೂಡಾನ್‌ನಲ್ಲಿ ಇಂಥ ಘಟನೆ ಇದೇ ಮೊದಲಲ್ಲ. ಕೆಲವು ದಿನಗಳ ಹಿಂದೆ ಇದೇ ಲೇಕ್ಸ್‌ಸ್ಟೇಟ್‌ನಲ್ಲಿ ಟಗರೊಂದು 45 ವರ್ಷದ ಮಹಿಳೆಯನ್ನು ತಿವಿದಿತ್ತು. ಆ ಮಹಿಳೆಯ ಪಕ್ಕೆಲುಬುಗಳಿಗೆ ತೀವ್ರ ಹೊಡೆತ ಬಿದ್ದು, ಬಳಿಕ ಆಕೆ ಮೃತಪಟ್ಟಿದ್ದರು. ಬಳಿಕ ಮಲೇಂಗ್ ಅಗೋಕ್ ಪಾಯಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಟಗರನ್ನೂ ಪೊಲೀಸರು ಬಂಧಿಸಿದ್ದು, 3 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಇದೀಗ ಎತ್ತಿನ ಬಂಧನವಾಗಿದ್ದು, ಶಿಕ್ಷೆ ಅವಧಿ ಪ್ರಕಟವಾಗಬೇಕಿದೆ.
ಇದನ್ನೂ ಓದಿ: Sarkaru Vaari Paata : ಸಿನಿಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟ ಮಹೇಶ್ ಬಾಬು