ಮಕ್ಕಳಿಗೆ ಹೆಸರಿಡುವುದು ಖಂಡಿತ ಸುಲಭದ ಕೆಲಸವಲ್ಲ. ಅದರಲ್ಲೂ ಈಗಿನ ಕಾಲಘಟ್ಟದಲ್ಲಿ, ಎಲ್ಲರಿಗಿಂತ ನಮ್ಮ ಮಗುವಿನ ಹೆಸರು ವಿಶಿಷ್ಟವಾಗಿರಬೇಕು ಎಂದು ಎಲ್ಲರೂ ಬಯಸುವುದು ಸಾಮಾನ್ಯ. ಹೀಗಾಗಿ ಸದಾ ಅತ್ಯಂತ ವಿರಳವಾದ ಆದರೆ ಅಷ್ಟೇ ವಿಶಿಷ್ಟವಾದ ಹೆಸರಿನ ಹುಡುಕಾಟ ಹೊಸ ತಂದೆ ತಾಯಂದಿರಿಗೆ ಇದ್ದೇ ಇರುತ್ತದೆ. ಹೊಸ ಹೊಸ ಹೆಸರುಗಳ ಲಿಸ್ಟುಗಳನ್ನೆಲ್ಲ ಜಾಲಾಡಿ, ಗೂಗಲ್ಲುಗಳಲ್ಲು ತಡಕಾಡಿ, ತಮ್ಮ ಹೆಸರುಗಳಿಗೆ ಹೊಂದುವ ಹೆಸರಿಗೆ ತಾಳಮೇಳ ಮಾಡಿ, ದಿನಗಟ್ಟಲೆ ತಲೆಕೆಡಿಸಿಕೊಂಡು ಕೊನೆಗೂ ಒಂದು ಹೆಸರಿಡುವ ಶಾಸ್ತ್ರ ನಡೆಯುತ್ತದೆ!
ಹಾಗೆಯೇ ಇಲ್ಲೊಬ್ಬಾಕೆ ತನ್ನ ರೆಸ್ಟೋರೆಂಟಿನ ಹೆಸರು ಇದ್ದಕ್ಕಿದ್ದಂತೆ ವೈರಲ್ ಆಗಲು ಒಂದು ತಂತ್ರವನ್ನೂ ಹೂಡಿದ್ದಾಳೆ. ಆಕೆ, ತನ್ನ ಗ್ರಾಹಕರೊಬ್ಬರು ಖರೀದಿಸಿರುವರೆಂದು ಹೇಳಲಾದ ಬಿಲ್‌ನ ಫೋಟೋದೊಂದಿಗೆ ಈಗ ತಾನೇ ಹುಟ್ಟಿದ ಮಗುವಿನ ಚಿತ್ರವನ್ನೂ ಪೋಸ್ಟ್ ಮಾಡಿದ್ದು, ತನ್ನ ಗ್ರಾಹಕರೊಬ್ಬರು ಈ ರೆಸ್ಟೋರೆಂಟಿನ ಅವರ ಅತ್ಯಂತ ಫೇವರಿಟ್ ಭಾರತೀಯ ತಿನಿಸಿನ ಹೆಸರಾದ ʻಪಕೋಡಾʼ ಎಂದೇ ತಮ್ಮ ಮಗುವನ್ನು ಕರೆಯಲು ಯೋಚಿಸಿದ್ದಾರಂತೆ ಎಂದು ಬರೆದುಕೊಂಡಿದ್ದಾರೆ. ಇದು ಭಾರೀ ವೈರಲ್ ಆಗಿದ್ದು, ಹಲವರು ಇದನ್ನು ಗಂಭೀರವಾಗಿಯೂ ಕೆಲವರು ತಮಾಷೆಯಾಗಿಯೂ ಪರಿಗಣಿಸಿ ಸಿಕ್ಕಾಪಟ್ಟೆ ಕಾಮೆಂಟುಗಳನ್ನು ಮಾಡಿದ್ದಾರೆ.
ಉತ್ತರ ಐರ್‌ಲೆಂಡಿನ ʻದಿ ಕ್ಯಾಪ್ಟೈನ್ಸ್ ಟೇಬಲ್ʼ ಎಂಬ ರೆಸ್ಟೋರೆಂಟಿನ ಮಾಲೀಕಳಾದ ಹಿಲರಿ ಬ್ರಾನಿಫ್ ಎಂಬವರು ಈ ಪೋಸ್ಟ್ ಮಾಡಿದ್ದು, ಕೊನೆಗೆ ವಿಧವಿಧ ಪ್ರತಿಕ್ರಿಯೆ ಕಂಡು ಹಾಗೂ ಇದನ್ನು ಗಂಭೀರವಾಗಿ ಎಲ್ಲರೂ ಪರಿಗಣಿಸಿದ್ದು ನೋಡಿ ಎಚ್ಚೆತ್ತುಕೊಂಡಿದ್ದಾರೆ. ನಿಜವಾಗಿ ಈ ಮಗು ನನ್ನ ಮೊಮ್ಮಗಳಾಗಿದ್ದು, ನನಗೆ ಚಿಕನ್ ಪಕೋಡಾ ಹಾಗೂ ಈಕೆ ಇಬ್ಬರೂ ಫೇವರಿಟ್‌ಗಳಾಗಿರುವುದರಿಂದ ಸುಮ್ಮನೇ ರೆಸ್ಟೊರೆಂಟಿನ ಜಾಹಿರಾತಿಗಾಗಿ ತಮಾಷೆಯಾಗಿ ಹೀಗೆ ಬರೆದುಕೊಂಡೆ. ಇದು ಸಾಕಷ್ಟು ವರ್ಕೌಟ್ ಕೂಡಾ ಆಯ್ತು ಎಂದು ಆಕೆ ವಿವರಿಸಿದ್ದಾರೆ.
ಜೊತೆಗೆ ದಿ ಕ್ಯಾಪ್ಟನ್ಸ್ ಟೇಬಲ್‌ನಲ್ಲಿ ಸಿಗುವ ಭಾರತೀಯ ಖಾದ್ಯ ಪಕೋಡಾಕ್ಕೆ ಇದೀಗ ಇದ್ದಕ್ಕಿದ್ದಂತೆ ಬಹುಬೇಡಿಕೆ ಬಂದಿದೆಯಂತೆ. ಕೊನೆಗೂ ತನ್ನ ಐಡಿಯಾ ಫಲಿಸಿತೆಂದು ರೆಸ್ಟೋರೆಂಟ್ ಮಾಲಿಕರೀಗ ಫುಲ್ ಖುಷ್ ಆಗಿದ್ದಾರಂತೆ.
ಮಗುವಿಗೆ ಬ್ಯಾಕ್ಟೀರಿಯಾ ಹೆಸರು!: ಗಂಡ ಹಾಗೂ ಹೆಂಡತಿ ತಮ್ಮಿಬ್ಬರ ಹೆಸರುಗಳ ಅರ್ಧವನ್ನು ಸೇರಿಸಿ ಒಂದು ಹೆಸರನ್ನಾಗಿ ಹೊಲಿದು ಮಾಡಿ ಮಕ್ಕಳಿಗೆ ಇಡುವುದೂ ಇದೀಗ ಟ್ರೆಂಡ್. ಹಲವು ಸೆಲೆಬ್ರಿಟಿಗಳೂ ಈ ಪ್ರಯತ್ನ ಮಾಡಿದ್ದಾರೆ ಕೂಡಾ. ಇದೀಗ ಇಂಥದ್ದೇ ಒಂದು ಪ್ರಯತ್ನವನ್ನು ಮಾಡಿರುವ ತಾಯಿಯೊಬ್ಬಳು ತನ್ನ ಮಗುವಿಗೆ ಬ್ಯಾಕ್ಟೀರಿಯಾ ಒಂದರ ಹೆಸರನ್ನೇ ಇಡಲು ಸಜ್ಜಾಗಿದ್ದಾಳಂತೆ!
ಇದನ್ನೂ ಓದಿ | Warrior Mother | ತಾಯಿಗಿಂತ ದೊಡ್ಡ ಯೋಧ ಇಲ್ಲ, ಹುಲಿ ಜತೆ 20 ನಿಮಿಷ ಕಾದಾಡಿ ಮಗನ ರಕ್ಷಿಸಿದ ಅಮ್ಮ!
ತನ್ನ ಹೆಸರು ಎಲ್ಲಾ ಹಾಗೂ ತನ್ನ ಗಂಡನ ಹೆಸರು ಸ್ಯಾಮ್ ಆಗಿರುವುದರಿಂದ ಸ್ಯಾಮ್ನೆಲ್ಲಾ ಎಂದು ಹೆಸರಿಡಲು ಆಕೆ ಯೋಚಿಸಿದ್ದಾಳಂತೆ. ಈಗಾಗಲೇ ಹುಟ್ಟಲಿರುವ ಮಗುವಿಗೆ ಕುಲಾವಿಯನ್ನೂ ಹೊಲಿಸಿ ರೆಡಿ ಇಟ್ಟಿದ್ದು, ಅದನ್ನು ಸೀಮಂತದ ದಿನ ಹೊರತೆಗೆದು ತೋರಿಸಿರುವುದೇ ಈ ಎಡವಟ್ಟಿಗೆ ಕಾರಣವಾಗಿದೆ. ಆಕೆ, ತಾನು ರೆಡಿ ಮಾಡಿಟ್ಟ ಮಗುವಿನ ಅಂಗಿಯಲ್ಲಿ ಸ್ಯಾಮ್ನೆಲ್ಲಾ ಎಂದು ಬರೆಸಿದ್ದು ಎಲ್ಲರೂ ಆದನ್ನು ಸಾಲ್ಮೊನೆಲ್ಲ ಎಂಬಂತೆ ಓದಿಕೊಂಡು ಅವಾಂತರ ಮಾಡಿಕೊಂಡಿದ್ದಾರೆ.
ಹೊಟ್ಟೆ ಕೆಟ್ಟು ಭೇದಿಗೆ ಕಾರಣವಾಗುವ ಬ್ಯಾಕ್ಟೀರಿಯಾ ಸಾಲ್ಮೋನೆಲ್ಲಾದಂತೆ ಅನಿಸುವ ಈ ಹೆಸರು ಯಾಕೋ ಸರಿಯಿಲ್ಲ ಎಂದು ಎಲ್ಲರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಆಕೆಯ ಮೂಡ್ ಕೆಡಿಸಿದ್ದಾರೆ. ಆದರೆ, ಆಕೆಯ ಹೆತ್ತವರು, ಹತ್ತಿರದ ಬಂಧುಮಿತ್ರರು ಎಷ್ಟು ಮುದ್ದಾದ ಹೆಸರು ಎಂದು ಆಕೆಗಾದ ಆಘಾತವನ್ನು ತಿಳಿಗೊಳಿಸಲು ಹೆಣಗಾಡುತ್ತಿದ್ದಾರಂತೆ.
ಇದನ್ನೂ ಓದಿ | Viral video | ಕಚ್ಚಾ ಬಾದಾಮ್ ಥರ ಭೋಪಾಲಿನ ನಮ್ಕೀನ್ ಸೆಲ್ಲರ್ ಹಾಡು ವೈರಲ್!