ಫ್ಲೋರಿಡಾ: ಕಾಡು ಪ್ರಾಣಿಗಳು ಕಾಡಿನಲ್ಲಿದ್ದರೆ ಒಳ್ಳೆಯದು. ಅದೇ ಅವು ಒಂದು ವೇಳೆ ನಾಡಿಗೆ ಬಂದುಬಿಟ್ಟರೆ ಮನುಷ್ಯರ ಕಥೆ ಅಧೋಗತಿ. ಹಾಗೆಯೇ ಕಾಡಿನ ಕೊಳಗಳಲ್ಲಿ ಇರಬೇಕಿದ್ದ ಮೊಸಳೆಯೊಂದು ಇದ್ದಕ್ಕಿದ್ದಂತೆ ಮನೆಯೊಂದರ ಈಜುಕೊಳಕ್ಕೆ ಬಂದ ವಿಚಿತ್ರ ಘಟನೆ ಫ್ಲೋರಿಡಾದಲ್ಲಿ ನಡೆದಿದೆ.
ಫ್ಲೋರಿಡಾದ ಮೈಲ್ ಮಾರ್ಕರ್ 90 ಅಲ್ಲಿನ ಪ್ಲಾಂಟೇಶನ್ ಕೀ ಅಲ್ಲಿರುವ ಮನೆಯೊಂದರ ವ್ಯಕ್ತಿ ಜೂನ್ 11ರ ರಾತ್ರಿ 2 ಗಂಟೆಯ ಹೊತ್ತಿಗೆ ಮನೆಯ ಈಜುಕೊಳದ ಬಳಿ ಹೋಗಿದ್ದಾರೆ. ಆಗ ಅವರಿಗೆ ದೊಡ್ಡದೊಂದು ಆಘಾತವಾಗಿದೆ. ಕೊಳದಲ್ಲಿ 10 ಅಡಿಯಷ್ಟು ಉದ್ದದ ಮೊಸಳೆ ಇರುವುದು ಕಂಡುಬಂದಿದೆ. ತಕ್ಷಣ ಅವರು ಸ್ಥಳೀಯ ಅರಣ್ಯ ಅಧಿಕಾರಿಗಳಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ.
ಇದನ್ನೂ ಓದಿ: Viral Video : ಜಲ್ಲಾ ಎನ್ನುತ್ತ ಪಡ್ಡೆ ಹುಡುಗರ ಎದೆ ಝಲ್ ಎನ್ನುವಂತೆ ಮಾಡುತ್ತಿದ್ದಾಳೆ ಈ ಬೆಡಗಿ
ಅರಣ್ಯ ಇಲಾಖೆಯವರು ಮೊಸಳೆಯನ್ನು ಸೆರೆ ಹಿಡಿಯುವ ಸಿಬ್ಬಂದಿಯೊಂದಿಗೆ ಮನೆಗೆ ಬಂದಿದ್ದಾರೆ. ನೀರಿನೊಳಗಿದ್ದ ಮೊಸಳೆಯನ್ನು ಕಷ್ಟಪಟ್ಟು ಸೆರೆ ಹಿಡಿಯಲಾಗಿದೆ. ನಂತರ ಅದನ್ನು ತೆಗೆದುಕೊಂಡು ಹೋಗಿ ಸುರಕ್ಷಿತ ಜಾಗದಲ್ಲಿ ನೀರಿಗೆ ಬಿಡಲಾಗಿದೆ. ಈ ಎಲ್ಲ ದೃಶ್ಯಗಳನ್ನು ವಿಡಿಯೊ ರೂಪದಲ್ಲಿ ಸೆರೆ ಹಿಡಿಯಲಾಗಿದೆ.
ಈ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಹಾಗೆಯೇ ಅದರ ಕುರಿತಾಗಿ ಮಾಹಿತಿಯನ್ನೂ ಹಂಚಿಕೊಳ್ಳಲಾಗಿದೆ. ವಿಡಿಯೊವನ್ನು ಎರಡು ದಿನಗಳ ಮೊದಲು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೊ ನೂರಾರು ಮಂದಿಯಿಂದ ವೀಕ್ಷಣೆ ಪಡೆದುಕೊಂಡಿದೆ. ಅನೇಕರು ವಿಡಿಯೊ ನೋಡಿ ಗಾಬರಿಯಾಗಿದ್ದಾಗಿ ಕಮೆಂಟ್‌ಗಳಲ್ಲಿ ಹೇಳಿಕೊಂಡಿದ್ದಾರೆ. ಕಾಡಿನ ಪ್ರಾಣಿಯೊಂದು ನಾಡಿನೊಳಕ್ಕೆ ಬಂದಿದ್ದರ ಕುರಿತಾಗಿಯೂ ಚರ್ಚೆ ನಡೆಸುತ್ತಿದ್ದಾರೆ.