Site icon Vistara News

ಬಾಲಕನನ್ನು ನುಂಗಿದ ಮೊಸಳೆ; ಹೊಟ್ಟೆ ಕೊಯ್ದು ಹೊರತೆಗೆಯಲು ಮುಂದಾದ ಹಳ್ಳಿಗರು

crocodile

ಶಿಯೋಪುರ್‌: ನದಿಯಲ್ಲಿ ಸ್ನಾನ ಮಾಡುತ್ತಿದ್ದ 8 ವರ್ಷದ ಬಾಲಕನನ್ನು ಮೊಸಳೆಯೊಂದು ಹೊತ್ತೊಯ್ದು ನುಂಗಿದ ಭಯಾನಕ ಘಟನೆ ಮಧ್ಯಪ್ರದೇಶದ ಶಿಯೋಪುರ್‌ನಲ್ಲಿ ನಡೆದಿದೆ. ಈತ ಒಬ್ಬನೇ ನದಿ ಬಳಿಗೆ ಹೋಗಿದ್ದ. ಹಾಗಂತ ನದಿಯ ಬಳಿ ಕೆಲವರು ಇದ್ದರು. ಅವರೂ ಕೂಡ ಸ್ನಾನ ಮಾಡುತ್ತ, ದನಕರುಗಳಿಗೆ ನೀರು ಕುಡಿಸುತ್ತ ಇದ್ದರು. ಬಾಲಕನನ್ನು ಮೊಸಳೆ ಬಾಯಿಂದ ತಪ್ಪಿಸಲು ಏನೆಲ್ಲ ಪ್ರಯತ್ನ ಮಾಡಿದರೂ ಅದು ಸಾಧ್ಯವಾಗದೆ ಹೋಗಿದೆ.

ಬಾಲಕನನ್ನು ಮೊಸಳೆ ಎಳೆದೊಯ್ಯದುವುದನ್ನು ನೋಡುತ್ತಿದ್ದಂತೆ ಸ್ಥಳದಲ್ಲಿದ್ದವರು ದೊಡ್ಡದಾಗಿ ಕೂಗಿದ್ದಾರೆ. ಅದರಲ್ಲೇ ಒಂದಿಬ್ಬರು ಹೋಗಿ ಬಾಲಕನ ಪಾಲಕರು, ಹಳ್ಳಿಯ ಜನರಿಗೆ ವಿಷಯವನ್ನೂ ತಿಳಿಸಿದ್ದಾರೆ. ಆಗ ಅವರೆಲ್ಲ ದೊಡ್ಡದೊಡ್ಡ ಕೋಲುಗಳು, ಉದ್ದನೆಯ ಹಗ್ಗಗಳನ್ನೆಲ್ಲ ತಂದು ಮೊಸಳೆಯನ್ನು ದಡಕ್ಕೆ ಎಳೆದು ತಂದಿದ್ದಾರೆ. ಎಷ್ಟೋ ಹೊತ್ತಿನವರೆಗೆ ಅದನ್ನು ವಾಪಸ್‌ ನೀರಿಗೆ ಬಿಡಲು ಬಾಲಕನ ಪಾಲಕರು ಒಪ್ಪಲೇ ಇಲ್ಲ. ʼಮೊಸಳೆಯ ಹೊಟ್ಟೆಯನ್ನು ಕೊಯ್ಯಬೇಕು. ಅದರಲ್ಲಿ ನಮ್ಮ ಮಗ ಖಂಡಿತವಾಗಿಯೂ ಜೀವಂತವಾಗಿ ಇರುತ್ತಾನೆ. ಅವನನ್ನು ಅಲ್ಲಿಂದ ಹೊರತೆಗೆಯಬೇಕುʼ ಎಂದೇ ರೋಧಿಸುತ್ತಿದ್ದರು.

ಈ ಹುಡುಗ ಚಿಕ್ಕವನಾದರೂ ನದಿಯಲ್ಲಿ ಸ್ನಾನ ಮಾಡುತ್ತ ಸುಮಾರು ಆಳಕ್ಕೆ ಹೋಗಿಬಿಟ್ಟಿದ್ದ. ಆಗ ಮೊಸಳೆ ಅವನನ್ನು ಹೊತ್ತೊಯ್ದಿದೆ. ಬಲೆ ಮತ್ತು ಕೋಲಿನಿಂದ ಮೊಸಳೆಯನ್ನು ದಡಕ್ಕೆ ಎಳೆದು ತಂದ ಗ್ರಾಮಸ್ಥರು ಅದನ್ನು ಕೊಲ್ಲಲು ಮುಂದಾಗಿದ್ದರು. ಅಷ್ಟರಲ್ಲಿ ಅಲ್ಲಿಗೆ ಮೊಸಳೆಗಳ ನಿರ್ವಹಣಾ ತಂಡ ಆಗಮಿಸಿತು. ಗ್ರಾಮಸ್ಥರ ಹಿಡಿತದಲ್ಲಿದ್ದ ಮೊಸಳೆಯನ್ನು ರಕ್ಷಿಸಲು ಅವರು ತುಂಬ ಕಷ್ಟಪಟ್ಟರು ಎಂದು ರಘುನಾಥಪುರ ಪೊಲೀಸ್‌ ಠಾಣೆ ಉಸ್ತುವಾರಿ ಶ್ಯಾಮ್‌ ವೀರ್‌ ಸಿಂಗ್‌ ತೋಮರ್‌ ಹೇಳಿದ್ದಾರೆ.

ಇದನ್ನೂ ಓದಿ: ರಿಪೋರ್ಟರ್‌ಗಳಿಗೆ ಟೀ ಸರ್ವ್‌ ಮಾಡಿದ ಅಕ್ಷತಾ ಮೂರ್ತಿ, ಫೋಟೊ ವೈರಲ್‌

Exit mobile version