ಹಸು ನಾಯಿಮರಿಗಳಿಗೆ ಹಾಲುಣಿಸಿದ, ಬೆಕ್ಕಿನ ಮರಿಗಳಿಗೆ ಶ್ವಾನ ಮೊಲೆ ಹಾಲು ಕೊಟ್ಟ ವಿಡಿಯೊಗಳು, ಎರಡು ಬೇರೆಬೇರೆ ಪ್ರಭೇದದ ಪ್ರಾಣಿಗಳ ಅತ್ಯಮೂಲ್ಯ ಸ್ನೇಹ ತೋರಿಸುವ ಕ್ಯೂಟ್ ವಿಡಿಯೊಗಳನ್ನೆಲ್ಲ ನಾವು ಆಗಾಗ ಸೋಷಿಯಲ್ ಮೀಡಿಯಾಗಳಲ್ಲಿ ನೋಡುತ್ತಿರುತ್ತೇವೆ. ಈ ಮೂಕ ಪ್ರಾಣಿ-ಪಕ್ಷಿಗಳ ನಡುವಿನ ಸೌಹಾರ್ದತೆ, ಪರಸ್ಪರ ಸಹಾಯ ಮಾಡಿಕೊಳ್ಳುವ ರೀತಿ ನೋಡಿದರೆ ಸಹಜವಾಗಿಯೇ ಅಚ್ಚರಿಯಾಗುತ್ತದೆ. ಈಗಿಲ್ಲಿ ಒಂದು ವಿಡಿಯೊ ಇದೆ ನೋಡಿ. ಈ ಮುದ್ದಾದ ಕಥೆಯಲ್ಲಿ ಬರುವ ಪಾತ್ರಗಳು ಒಂದು ಕೋಳಿ, ಒಂದು ಹುಂಜ, ಅವುಗಳ ಪುಟಾಣಿ ಮರಿಗಳು ಮತ್ತು ಎರಡು ನಾಯಿಮರಿಗಳು!
ಇಲ್ಲಿ ಕೋಳಿ ಒಂದು ಮರದ ಬುಟ್ಟಿಯಲ್ಲಿ ಕುಳಿತಿದೆ. ಅದರ ಪುಕ್ಕಗಳಡಿಯಲ್ಲಿ ಕುಳಿತ ಮರಿಗಳು ಹಾಲುಣ್ಣುತ್ತಿವೆ. ಅಲ್ಲೇ ಬೆಚ್ಚಗೆ ಆಟವಾಡುತ್ತಿವೆ. ಆದರೆ ನೀವಿಲ್ಲಿ ಕೋಳಿ ಪುಕ್ಕಗಳ ಅಡಿಯಲ್ಲಿ ಬಿಳಿ ಬಣ್ಣದ ನಾಯಿ ಮರಿಯೊಂದನ್ನೂ ನೋಡಬಹುದು. ಆ ಮುದ್ದಾದ ನಾಯಿಮರಿ ಅದೆಷ್ಟು ಜೋರಾಗಿದೆ ಎಂದರೆ, ಅಲ್ಲಿರುವ ಕೋಳಿಮರಿಗಳನ್ನೇ ಓಡಿಸಿ, ತಾನು ಇನ್ನಷ್ಟು-ಮತ್ತಷ್ಟು ಆ ದೊಡ್ಡ ಕೋಳಿಯ ಮಗ್ಗುಲಿಗೆ ಜಾರುತ್ತದೆ. ಹಾಗೇ ಇನ್ನೊಂದು ನಾಯಿಮರಿ ಬುಟ್ಟಿಯ ಸಮೀಪವೇ ಇದೆ. ಅಷ್ಟರಲ್ಲಿ ಅಲ್ಲಿಯೇ ಇದ್ದ ಬಿಳಿ ಬಣ್ಣದ, ಕೆಂಪು ಜುಟ್ಟಿನ ಹುಂಜ ತನ್ನ ಸಂಗಾತಿ ಕೋಳಿ ಮುಖದ ಎದುರೇ ಬಂದು ತನ್ನ ಕೊಕ್ಕನ್ನು ಕುಣಿಸುತ್ತದೆ. ‘ಈ ಎರಡು ಮರಿಗಳು ಯಾರು?-ಇವು ನಮ್ಮ ಮರಿಗಳು ಅಲ್ಲವಲ್ಲ, ಯಾವವು ಇವು?!’ ಎಂದು ಹುಂಜ ತನ್ನ ಪತ್ನಿ ಕೋಳಿ ಬಳಿ ಕೇಳಿತ್ತಿದೆಯೆನೋ ಎಂಬಂತಿದೆ ಅದರ ಹಾವಭಾವ.
41,800ಕ್ಕೂ ಹೆಚ್ಚು ಲೈಕ್ಸ್ ಪಡೆದ ವಿಡಿಯೊ ಸಖತ್ ವೈರಲ್ ಆಗುತ್ತಿದೆ. ನೆಟ್ಟಿಗರು ಕೋಳಿಯ ವಾತ್ಸಲ್ಯ, ಹುಂಜದ ಅಚ್ಚರಿ, ಗೊಂದಲವನ್ನು ಮೆಚ್ಚಿಕೊಂಡಿದ್ದಾರೆ.