Site icon Vistara News

Viral News: ಹುಟ್ಟುಹಬ್ಬದಂದು ಮಗಳಿಗೆ ಕೊಳಕು ನೀರು ತುಂಬಿದ ಬಾಟಲಿ ನೀಡಿದ ತಂದೆ; ಹಿಂದಿದೆ ಅದ್ಭುತ ಪಾಠ

viral news

viral news

ಬೆಂಗಳೂರು: ಸಾಮಾನ್ಯವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಪ್ರೀತಿ ಪಾತ್ರರಿಗೆ ಉತ್ತಮ, ದುಬಾರಿ ಉಡುಗೊರೆ ನೀಡುತ್ತೇವೆ. ಆದರೆ ಇಲ್ಲೊಬ್ಬಳು ಮಹಿಳೆ ಹುಟ್ಟುಹಬ್ಬದಂದು ತನ್ನ ತಂದೆಯಿಂದ ಪಡೆದುಕೊಂಡ ಗಿಫ್ಟ್‌ ನೋಡಿದರೆ ನಿಮ್ಮ ಹುಬ್ಬೇರುವುದು ಖಚಿತ. ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ತಂದೆಯಿಂದ ಸ್ವೀಕರಿಸಿದ ʼಅಪರೂಪʼದ ಉಡುಗೊರೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ʼʼತಂದೆ ನನ್ನ ಹುಟ್ಟುಹಬ್ಬಕ್ಕೆ ಕೊಳಚೆ ನೀರು ತುಂಬಿದ ಬಾಟಲಿಯನ್ನು ಗಿಫ್ಟ್‌ ಆಗಿ ನೀಡಿದ್ದಾರೆʼʼ ಎಂದಿದ್ದಾರೆ. ಜತೆಗೆ ಅವರು ಅದರ ಹಿಂದಿರುವ ಕಾರಣವನ್ನೂ ವಿವರಿಸಿದ್ದಾರೆ. ಸದ್ಯ ಈ ಪೋಸ್ಟ್‌ ವೈರಲ್‌ ಆಗಿದೆ.

ಯಾರು ಈ ಮಹಿಳೆ?

ಪೆಟ್ರೀಷಿಯಾ ಮೌ ಎನ್ನುವ ಮಹಿಳೆಯೇ ಈ ʼಅಪರೂಪʼದ ಉಡುಗೊರೆ ಪಡೆದಾಕೆ. ʼʼಈ ವರ್ಷದ ನನ್ನ ಹುಟ್ಟುಹಬ್ಬಕ್ಕೆ ತಂದೆ ಕೊಳಚೆ ನೀರಿರುವ ಬಾಟಲಿಯನ್ನು ಗಿಫ್ಟ್‌ ಮಾಡಿದ್ದಾರೆʼʼ ಎಂದು ಅವರು ಬರೆದುಕೊಂಡಿದ್ದಾರೆ. ಹಿಂದೆಲ್ಲ ಅವರ ತಂದೆ ಬರ್ತ್‌ ಡೇ ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸೆ ಕಿಟ್‌, ಪೆಪ್ಪರ್‌ ಸ್ಪ್ರೇ, ಕೀ ಚೈನ್‌, ಆಕೆಗಾಗಿಯೇ ಬರೆದ ಪುಸ್ತಕ ಮುಂತಾದ ಅರ್ಥಪೂರ್ಣ ಗಿಫ್ಟ್‌ ನೀಡಿದ್ದರಂತೆ. ʼʼಈ ಬಾರಿ ತುಂಬಾ ವಿಶೇಷವಾದ ಉಡುಗೊರೆ ನೀಡುತ್ತೇನೆ. ಅದರ ಖರೀದಿಗೆ ಹಣ ಬೇಕಾಗುವುದಿಲ್ಲ. ಆದರೆ ಅತೀ ಮುಖ್ಯ ಜೀವನ ಪಾಠ ಕಲಿಸುತ್ತದೆʼ ಎಂದು ತಂದೆ ಈ ಹಿಂದೆಯೇ ಹೇಳಿದ್ದರುʼʼ ಎಂದು ಮೌ ಬರೆದುಕೊಂಡಿದ್ದಾರೆ.

ಜೀವನ ಸಂದೇಶವೇನು?

ಮುಂದೆ ಮೌ ಕೊಳಚೆ ನೀರು ಬೋಧಿಸುವ ಬಹುಮುಖ್ಯ ಜೀವನ ಪಾಠ ವಿವರಿಸುತ್ತಾರೆ. ಇದು ಓದುತ್ತಿದ್ದಂತೆ ನೀವು ಕೂಡ ಅಮೂಲ್ಯ ಉಡುಗೊರೆ ಎಂದಯ ತಲೆ ತೂಗುವುದು ಖಂಡಿತ. ಆಕೆ ಬರೆಯುತ್ತಾರೆ, ʼʼಅಲುಗಾಡಿಸಿದ ಕೊಳಚೆ ನೀರಿನ ಬಾಟಲಿಯ ನೀರು ಚಿಂತೆ, ಗೊಂದಲ, ಕೋಪದಲ್ಲಿರುವ ನಿಮ್ಮ ಮನಸ್ಥಿತಿಯನ್ನು ಹೋಲುತ್ತದೆ. ಆಗ ಪ್ರತಿಯೊಂದು ನಿಮ್ಮ ಕಣ್ಣಿಗೆ ತಪ್ಪಾಗಿಯೇ ಕಾಣಿಸುತ್ತದೆ. ಯಾವಾಗ ನೀರು ಶಾಂತವಾಗುತ್ತದೆಯೋ ಆಗ ಕೊಳಕೆಲ್ಲ ಕೆಳಗೆ ಉಳಿದು ಮೇಲೆ ಶುಭ್ರ ನೀರು ಕಾಣಿಸುತ್ತದೆ. ಆಗ ಕೊಳಕು ಬಾಟಲಿಯ 10% ಭಾಗದಲ್ಲಷ್ಟೇ ಉಳಿದಿರುತ್ತದೆ. ಅದರಂತೆ ನಮ್ಮ ಮನಸ್ಸಿನ ಗೊಂದಲವೆಲ್ಲ ತಿಳಿಯಾದಾಗ ಎಲ್ಲವೂ ಸರಿಯಾಗಿ ಗೋಚರಿಸುತ್ತದೆ. ಆದ್ದರಿಂದ ನಾವು ಸರಿಯಾದ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕುʼʼ ಎಂದು ಮೌ ಹೇಳಿದ್ದಾರೆ.

ʼʼವಾರಾಂತ್ಯದ ಬಳಿಕ ನಾನು ಸಮುದ್ರದ ದಂಡೆಗೆ ತೆರಳಿ ಬಾಟಲಿ ನೀರನ್ನು ಸುರಿದೆ. ಅದರೊಂದಿಗೆ ನಾನು ಇನ್ನೊಂದು ಪಾಠವನ್ನೂ ಕಲಿತೆ. ನಾವು ಸಾಗರದ ಹನಿಯಲ್ಲ, ನಾವು ಒಂದು ಹನಿಯಲ್ಲಿ ಸಾಗರ’ ಎನ್ನುವುದನ್ನು ಕಂಡುಕೊಂಡೆʼʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Viral Video: ಫ್ರಿಡ್ಜ್‌ ಡೋರ್ ತೆಗೆಯಲು ಹೋದ 4 ವರ್ಷದ ಬಾಲಕಿಗೆ ಕರೆಂಟ್ ಶಾಕ್, ಸ್ಥಳದಲ್ಲೇ ಸಾವು

ಅಕ್ಟೋಬರ್‌ 2ರಂದು ಮಾಡಲಾದ ಈ ಪೋಸ್ಟ್‌ ಅನ್ನು ಈಗಾಗಲೇ ಸುಮಾರು 1.2 ಕೋಟಿ ಮಂದಿ ವೀಕ್ಷಿಸಿದ್ದಾರೆ. ಜತೆಗೆ 5,900 ಅಧಿಕ ಲೈಕ್‌ ಲಭಿಸಿದೆ. ಹಲವರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ʼʼಇದು ಉತ್ತಮ ಉಡುಗೊರೆ. ನಿಮಗೆ ಹುಟ್ಟುಹಬ್ಬದ ಶುಭಾಶಯಗಳುʼʼ ಎಂದು ಒಬ್ಬರು ಹೇಳಿದ್ದಾರೆ. ʼʼಈ ಜೀವನ ಪಾಠ ನಿಜಕ್ಕೂ ಅತ್ಯುತ್ತಮವಾದುದು. ಹಂಚಿಕೊಂಡಿದ್ದಕ್ಕೆ ಧನ್ಯವಾದಗಳುʼʼ ಎಂದು ಇನ್ನೊಬ್ಬರು ಹೇಳಿದ್ದಾರೆ. ʼʼಅದ್ಭುತ ತಂದೆʼʼ ಎಂದು ಮಗದೊಬ್ಬರು ಕಮೆಂಟ್‌ ಮಾಡಿದ್ದಾರೆ. “ಸರಳ ಆದರೆ ಆಳವಾದ ಜೀವನ ಪಾಠ. ಅವರು ಕಲಿಸಲು ಬಯಸಿದ ಎರಡನೇ ಜೀವನ ಪಾಠ, ಒಮ್ಮೆ ಕಳೆದು ಹೋದರೆ, ಅದು ಶಾಶ್ವತವಾಗಿ ಕಳೆದುಹೋಗುತ್ತದೆ” ಎಂದು ಐದನೆಯವರು ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ಜೀವನವನ್ನು ಸರಳವಾಗಿ ತಿಳಿಸಿದ ತಂದೆಯ ಪ್ರಯತ್ನಕ್ಕೆ ಭಾರಿ ಮೆಚ್ಚುಗೆಯೇ ಲಭಿಸಿದೆ.

Exit mobile version