ನವದೆಹಲಿ: ಮೆಟ್ರೋ ರೈಲುಗಳಲ್ಲಿ ರೀಲ್ಸ್ ಮಾಡುವ ಹುಚ್ಚು ಈಗಿನ ಯುವಜನತೆಗೆ ಹೆಚ್ಚಾಗಿಬಿಟ್ಟಿದೆ. ಮೆಟ್ರೋದಲ್ಲಿ ವಿಡಿಯೊ ಮಾಡುತ್ತಾ ಬೇರೆ ಪ್ರಯಾಣಿಕರಿಗೆ ತೊಂದರೆ ಕೊಡಬೇಡಿ ಎಂದು ಎಷ್ಟೇ ಜಾಗೃತಿ ಮೂಡಿಸಿದರೂ ಯುವಕರು ಮಾತ್ರ ಅದರಿಂದ ಹಿಂದೆ ಸರಿದಿಲ್ಲ. ಇತ್ತೀಚೆಗೆ ಅದೇ ರೀತಿಯಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯ ಮೆಟ್ರೋದಲ್ಲಿ ಯುವಕನೊಬ್ಬ ನೃತ್ಯ ಮಾಡಿದ್ದು, ಅದು ಭಾರೀ ಸದ್ದಾಗಿದೆ. ವಿಡಿಯೊ ಜನರಿಂದ ಮೆಚ್ಚುಗೆ ಪಡೆದುಕೊಳ್ಳುವ ಬದಲಾಗಿ ವಿರೋಧವನ್ನೇ (Viral Video) ಪಡೆದುಕೊಳ್ಳುತ್ತಿದೆ.
ಮೆಟ್ರೋದಲ್ಲಿ ರಾತ್ರಿ ಯುವಕನೊಬ್ಬ ಜೀನ್ಸ್ ಪ್ಯಾಂಟ್ ಟೀ ಶರ್ಟ್ ಧರಿಸಿ, ಅದರ ಮೇಲೊಂದು ಶಾಲನ್ನು ಹಾಕಿಕೊಂಡು ಕುಣಿಯುತ್ತಿದ್ದಾನೆ. ಅದರಲ್ಲೂ ಹೆಣ್ಣು ಮಕ್ಕಳ ನೃತ್ಯದ ಹಾಡಾದ ಚೋಲಿ ಕೆ ಪೀಚೆ ಕ್ಯಾ ಹೈ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾನೆ. ಆತ ಕೂಡ ಹೆಣ್ಣು ಮಕ್ಕಳಂತೆಯೇ ಕುಣಿಯುತ್ತಿದ್ದ ಅಲ್ಲಿ ಕುಳಿತಿದ್ದ ಬೇರೆ ಪ್ರಯಾಣಿಕರಿಗೆ ಮುಜುಗರವಾಗುವಂತೆ ಹಾಗೆಯೇ ಹಾಸ್ಯಮಯವೆನಿಸುವಂತೆ ಮಾಡಿದ್ದಾನೆ.
ಇದನ್ನೂ ಓದಿ: Viral Video : ಪುಟಾಣಿ ಮಾಡ್ತಿದೆ ಕಾವಾಲಯ್ಯ ಡ್ಯಾನ್ಸ್! ಆಹಾ ಎಷ್ಟು ಮುದ್ಮುದ್ದು
ಆತನ ನೃತ್ಯವನ್ನು ವಿಡಿಯೊ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದ ಆತನ ಸ್ನೇಹಿತರು ಹೀಗೆ ಮಾಡು, ಹಾಗೆ ಮಾಡು ಎಂದು ಆತನಿಗೆ ಸಲಹೆ ನೀಡಿದ್ದಾರೆ. ಮೆಟ್ರೋದಲ್ಲಿ ಜನರಿಗೆ ಹಿಡಿದುಕೊಳ್ಳಲು ನೀಡಲಾಗಿರುವ ಕಂಬವನ್ನು ಹಿಡಿದುಕೊಂಡು ಪೋಲ್ ಡ್ಯಾನ್ಸ್ ಮಾಡು, ಹಾಗೆಯೇ ಬೆಲ್ಲಿ ಡ್ಯಾನ್ಸ್ ಮಾಡು ಎಂದು ಅವರು ಹೇಳಿದ್ದಾರೆ. ಅವರ ಸಲಹೆಯಂತೆ ಆತ ಪೋಲ್ ಡ್ಯಾನ್ಸ್, ಬೆಲ್ಲಿ ಡ್ಯಾನ್ಸ್ ಅನ್ನು ಮಾಡಿದ್ದಾನೆ ಕೂಡ. ಹಾಗೆಯೇ ಮೆಟ್ರೋ ರೈಲಿನ ನೆಲದ ಮೇಲೇ ಕುಳಿತುಕೊಂಡೂ ನೃತ್ಯ ಮಾಡಿದ್ದಾನೆ.
ಈ ಎಲ್ಲ ದೃಶ್ಯಗಳನ್ನು ಅಲ್ಲಿದ್ದ ಸಹ ಪ್ರಯಾಣಿಕರೊಬ್ಬರು ವಿಡಿಯೊ ಮಾಡಿಕೊಂಡಿದ್ದಾರೆ. ವಿಡಿಯೊವನ್ನು duupdates ಹೆಸರಿನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೊವನ್ನು ಜುಲೈ 10ರಂದು ಹಂಚಿಕೊಳ್ಳಲಾಗಿದ್ದು, ಅಂದಿನಿಂದ ಇಂದಿನವರೆಗೆ ವಿಡಿಯೊ 3.4 ಲಕ್ಷಕ್ಕೂ ಅಧಿಕ ಮಂದಿಯಿಂದ ವೀಕ್ಷಣೆ ಪಡೆದುಕೊಂಡಿದೆ. 9700ಕ್ಕೂ ಅಧಿಕ ಮಂದಿ ವಿಡಿಯೊಗೆ ಲೈಕ್ ಮಾಡಿದ್ದಾರೆ. ಸಾವಿರಾರು ಮಂದಿ ವಿಡಿಯೊವನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ. ವಿಡಿಯೊ ಬಗ್ಗೆ ನೂರಾರು ಮಂದಿ ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್‌ಗಳ ಮೂಲಕ ಹಂಚಿಕೊಂಡಿದ್ದಾರೆ.
“ಈ ರೀತಿ ಹಾಡು ಹಾಕಿಕೊಂಡು ಮೆಟ್ರೋದೊಳಗೆ ನೃತ್ಯ ಮಾಡುವವರಿಗೆ ಶಿಕ್ಷೆ ವಿಧಿಸಲಾಗುತ್ತಿಲ್ಲ ಏಕೆ? ಈ ರೀತಿ ಮಾಡಬಾರದು ಎನ್ನುವುದಕ್ಕೆ ಯಾವ ನಿಯಮವೂ ಇಲ್ಲವೇ?”, “ಈ ರೀತಿ ಮಾಡುವವರನ್ನು ಮೆಟ್ರೋ ನಿಲ್ದಾಣದಲ್ಲಿ ನಿಂತ ತಕ್ಷಣ ಹೊರಗೆ ದೂಡಿ ಸರಿಯಾಗಿ ನಾಲ್ಕು ಬಾರಿಸಬೇಕು”, “ನಾನು ಸಂಚರಿಸುವಾಗ ಇಂತವರು ಕಾಣುವುದೇ ಇಲ್ಲ ಏಕೆ?”, “ಮೆಟ್ರೋದಲ್ಲಿ ರೋಡಿಸ್ ಆಡಿಶನ್ ಆಗುತ್ತಿರುವಂತಿದೆ”, “ಮೆಟ್ರೋ ರೈಲುಗಳಲ್ಲಿ ಈ ರೀತಿ ಅಸಭ್ಯ ವರ್ತನೆ ಯಾವಾಗ ನಿಲ್ಲುತ್ತದೆ?”, “ವಿಶೇಷ ಸೂಚನೆ: ರೈಲುಗಳಲ್ಲಿ ಮಂಗಗಳಂತೆ ಕುಣಿಯುವ ಕಮಂಗಿಗಳಿದ್ದಾರೆ” ಎನ್ನುವಂತಹ ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ.
ಇದನ್ನೂ ಓದಿ: Viral Video : ಮೆಟ್ರೋದಲ್ಲಿ ಸೀಟಿಗಲ್ಲ, ನಿಲ್ಲುವ ಜಾಗಕ್ಕಾಗಿಯೇ ಮಹಿಳೆಯರ ಮಾರಾಮಾರಿ!
ಇತ್ತೀಚೆಗೆ ದೆಹಲಿ ಮೆಟ್ರೋದ ಮತ್ತೊಂದು ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ವೈರಲ್ ಆಗಿತ್ತು. ಮಹಿಳೆಯರಿಬ್ಬರು ಮೆಟ್ರೋ ರೈಲಿನಲ್ಲಿ ನಿಂತುಕೊಳ್ಳುವ ಜಾಗಕ್ಕಾಗಿ ಕಿತ್ತಾಡಿಕೊಳ್ಳುವ ವಿಡಿಯೊ (Viral Video ) ಅದಾಗಿತ್ತು.