ಡೆಹ್ರಾಡೂನ್: ನಾವು-ನೀವೆಲ್ಲ ಟ್ರಾಫಿಕ್ ಪೊಲೀಸರನ್ನು ನೋಡಿರುತ್ತೇವೆ. ಕೈಯಲ್ಲೊಂದು ಸೀಟಿ ಇರುತ್ತದೆ. ಗಂಭೀರವಾಗಿ ನಿಂತು ರಸ್ತೆಗಳಲ್ಲಿ ವಾಹನಗಳನ್ನು ನಿಯಂತ್ರಿಸುವ, ಯಾರಾದರೂ ಟ್ರಾಫಿಕ್ ನಿಯಮ ಬ್ರೇಕ್ ಮಾಡಿದರೆ ಅವರಿಗೆ ದಂಡ ವಿಧಿಸುವ ಕೆಲಸ ಮಾಡುತ್ತಿರುತ್ತಾರೆ. ವಾಹನ ಸವಾರರೊಂದಿಗೆ ನಗುವುದೆಲ್ಲ ತೀರ ಅಪರೂಪ. ಇದು ಸಾಮಾನ್ಯವಾಗಿ ಟ್ರಾಫಿಕ್ ಪೊಲೀಸ್ ಇರುವ ರೀತಿ.
ಆದರೆ ಉತ್ತರಾಖಂಡ್ನಲ್ಲಿರುವ ಒಬ್ಬ ಟ್ರಾಫಿಕ್ ಪೊಲೀಸ್ ತಮ್ಮದೇ ಆದ ವಿಭಿನ್ನ ರೀತಿಯಲ್ಲಿ ಟ್ರಾಫಿಕ್ ಕಂಟ್ರೋಲ್ ಮಾಡಿ ಈಗ ನೆಟ್ಟಿಗರ ಮನಗೆದ್ದಿದ್ದಾರೆ. ಡೆಹ್ರಾಡೂನ್ನ ನಗರದಲ್ಲಿರುವ ಹೃದಯ ಆಸ್ಪತ್ರೆ ಸಮೀಪ ಈ ಟ್ರಾಫಿಕ್ ಪೊಲೀಸ್ ಜೋಗೆಂದ್ರ ಕುಮಾರ್ ಕರ್ತವ್ಯ ನಿರ್ವಹಿಸುತ್ತಾರೆ. ಆದರೆ ಇವರು ಉಳಿದ ಪೊಲೀಸ್ ಸಿಬ್ಬಂದಿಯಂತೆ ಗಂಭೀರವಾಗಿ ನಿಂತು ಬರೀ ಡ್ಯೂಟಿಯನ್ನಷ್ಟೇ ಮಾಡುವುದಿಲ್ಲ. ತಮ್ಮ ಕೈ ಚಲನೆಯೊಂದಿಗೆ ಡಾನ್ಸ್ ಕೂಡ ಮಾಡುತ್ತಾರೆ. ಅಂದರೆ ಅತ್ತ-ಇತ್ತ ಸುಳಿದು ವಾಹನ ಚಾಲಕರಿಗೆ ಸೂಚನೆ ಕೊಡುವಾಗ ಇವರು ವಿಶಿಷ್ಟವಾಗಿ ಕೈ-ಕಾಲು ಚಲನೆ ಮಾಡುತ್ತಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ.
ಜೋಗೇಂದ್ರ ಕುಮಾರ್ ಟ್ರಾಫಿಕ್ ನಿಯಂತ್ರಿಸುವ ವಿಡಿಯೋ ನೋಡಿದರೆ ನಿಮಗೂ ಖುಷಿಯಾಗುತ್ತದೆ. ಅವರ ಮುಖದಲ್ಲಿ ಮಂದಹಾಸ ಮರೆಯಾಗುವುದೇ ಇಲ್ಲ. ತುಂಬ ಚಟುವಟಿಕೆಯಿಂದ, ಕ್ರಿಯಾಶೀಲವಾಗಿ ತಮ್ಮ ಕೆಲಸ ಮಾಡುತ್ತಾರೆ. ಅವರ ಈ ವಿಭಿನ್ನ ಮಾದರಿಯ ಕೆಲಸ ವಾಹನ ಚಾಲಕರಿಗೂ ಸಖತ್ ಖುಷಿಕೊಡುತ್ತಿದೆ. ತಮ್ಮ ವಿಡಿಯೋ ವೈರಲ್ ಆದ ಬೆನ್ನಲ್ಲೇ ಎಎನ್ಐ ಜತೆ ಮಾತನಾಡಿದ ಜೋಗೇಂದ್ರ ಕುಮಾರ್ ‘ ಯಾರ್ಯಾರೋ ಎಲ್ಲೆಲ್ಲಿಗೋ ಹೋಗುತ್ತಿರುತ್ತಾರೆ. ಟ್ರಾಫಿಕ್ ಸಿಗ್ನಲ್ನಲ್ಲಿ ನಿಂತಾಗ ಅವರಿಗೆ ಸಹಜವಾಗಿಯೇ ಬೇಸರ ಆಗುತ್ತಿರುತ್ತದೆ, ಕೋಪ ಬರುತ್ತಿರುತ್ತದೆ. ಆದರೆ ಹಾಗಾಗಬಾರದು. ಅವರೂ ಸಂತೋಷ ಪಡಲಿ ಎಮದೇ ನಾನು ಈ ರೀತಿ ವಿಶಿಷ್ಟ ಕ್ರಮ ರೂಢಿಸಿಕೊಂಡಿದ್ದೇನೆ’ ಎಂದಿದ್ದಾರೆ.
ಹೀಗೊಂದು ಸದುದ್ದೇಶ ಕಾರಣಕ್ಕೆ ಡಾನ್ಸ್ ಮಾಡುತ್ತ ಟ್ರಾಫಿಕ್ ಕಂಟ್ರೋಲ್ ಕೆಲಸ ನಿರ್ವಹಿಸುತ್ತಿರುವ ಪೊಲೀಸ್ಗೆ ನೆಟ್ಟಿಗರು ಭೇಷ್ ಎಂದಿದ್ದಾರೆ. ವಿಡಿಯೋವನ್ನು ಈಗಾಗಲೇ 12 ಸಾವಿರಕ್ಕೂ ಅಧಿಕ ಜನರು ನೋಡಿದ್ದಾರೆ. ‘ಇದು ಕರ್ತವ್ಯ ನಿಷ್ಠೆ’, ‘ಅವರ ಉತ್ಸಾಹ ಎಲ್ಲರಿಗೂ ಸ್ಫೂರ್ತಿ’ ಎಂಬಿತ್ಯಾದಿ ಕಮೆಂಟ್ಗಳನ್ನು ಹಾಕಿದ್ದಾರೆ.
ಇದನ್ನೂ ಓದಿ: Viral Video | ಪ್ರಿಯಕರನೊಂದಿಗೆ ಪರಾರಿಯಾಗುತ್ತಿದ್ದ ಪತ್ನಿಯನ್ನು ರೆಡ್ಹ್ಯಾಂಡ್ ಆಗಿ ಹಿಡಿದ ಪತಿ