ಅಪ್ಪ ಬರೆದ ಪತ್ರವೊಂದು ಮಗಳಿಗೆ ಆತ ತೀರಿಕೊಂಡು ಒಂಬತ್ತು ವರ್ಷಗಳಾದ ಮೇಲೆ ಸಿಕ್ಕರೆ!
ಹೌದು. ಇಂಥದ್ದೊಂದು ಭಾವುಕ ಕ್ಷಣ ಈಗ ಮಗಳೊಬ್ಬಳದ್ದು. ಆಕೆ ಅಪ್ಪನ ಪತ್ರವನ್ನು ಯಥಾವತ್ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು ಇದೀಗ ಆ ಪೋಸ್ಟ್ ವೈರಲ್ ಆಗಿದೆ. ಅಷ್ಟೇ ಅಲ್ಲ, ಇಂಟರ್ನೆಟ್ ಜಗತ್ತು ಆಕೆಯ ಆ ಭಾವುಕ ಕ್ಷಣದಲ್ಲಿ ಕಣ್ಣೀರಾಗಿದೆ.
ಹೆತ್ತವರನ್ನು ಕಳೆದುಕೊಳ್ಳುವುದು ಮಕ್ಕಳ ಜೀವನದಲ್ಲಿ ಬಹುದೊಡ್ಡ ನೋವಿನ ಕ್ಷಣಗಳಲ್ಲಿ ಒಂದು. ಈ ನೋವಿಗೆ ಮದ್ದಿಲ್ಲ. ಆ ಜಾಗವನ್ನು ಬೇರಾರೂ ತುಂಬಿಸಲೂ ಸಾಧ್ಯವಿಲ್ಲ. ಹಾಗೆಯೇ ಅವರು ಹೋದ ಮೇಲೆ ಅವರಿಗೆ ಸಂಬಂಧಿಸಿದ ಒಂದೊಂದು ವಸ್ತುವೂ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳಲಾರಂಭಿಸುತ್ತದೆ. ಅಮ್ಮನ ಸೀರೆ, ಅಪ್ಪನ ಕೈಬರಹ, ಅಪ್ಪ ಕೊನೆಯಲ್ಲಿ ಮಾತನಾಡಿದ ವಾಕ್ಯ, ಅಮ್ಮನ ಅಡುಗೆ, ಅಪ್ಪನ ಕೈತುತ್ತು… ಹೀಗೆ ಒಂದೊಂದೂ ನೆನಪಾಗಿ ಕಾಡುತ್ತವೆ. ಅದನ್ನು ಶಬ್ದಗಳಲ್ಲಿ ಹಿಡಿದಿಡುವುದು ಕಷ್ಟ.
ಈಗ ಇಂಥದ್ದೊಂದು ಪೋಸ್ಟ್ ಸದ್ಯಕ್ಕೆ ಇಂಟರ್ನೆಟ್ ಜಗತ್ತನ್ನು ಕಣ್ಣಿರಾಗಿಸಿದೆ. ಯುಎಸ್‌ನ ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್ ಆಗಿರುವ ಆಮಿ ಕ್ಲೂಕಿ ಎಂಬಾಕೆ ತನ್ನ ಅಪ್ಪನ ಹಳೆಯ ವಸ್ತುಗಳಲ್ಲಿ ಬೇಕಾದ್ದನ್ನು ಆರಿಸಿ ಇಡುವ ಸಂದರ್ಭ ಅಪ್ಪನೇ ತನಗೆ ಬರೆದ ಪತ್ರವೊಂದು ಆಕೆಗೆ ಜೇನುಪೆಟ್ಟಿಗೆಯಲ್ಲಿ ಸಿಕ್ಕಿದೆ. ಅದನ್ನು ಓದಿ ಆಕೆ ಕಣ್ಣೀರಾಗಿದ್ದಾಳೆ. ಆಕೆ ಇದನ್ನು ತನ್ನ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದು, “ಅಪ್ಪ ತೀರಿಕೊಂಡು ಒಂಬತ್ತು ವರ್ಷಗಳಾದ ಮೇಲೆ ಸಿಕ್ಕ ಅಪ್ಪನ ಪತ್ರ” ಎಂಬ ತಲೆಬರಹದಲ್ಲಿ ಅಪ್ಪನ ಪತ್ರವನ್ನು ಯಥಾವತ್ ಹಾಕಿದ್ದಾಳೆ.
ಪತ್ರದ ಸಾರಾಂಶ ಹೀಗಿದೆ. “ಜೇನು ಸಾಕಣೆಯ ಬಗ್ಗೆ ಆಸಕ್ತಿ ಇರುವ ನನ್ನ ಯಾರಾದರೂ ಮಕ್ಕಳಲ್ಲಿ ಒಬ್ಬರಿಗೆ ಈ ಪತ್ರ ಸಿಕ್ಕೀತೆಂಬ ಭಾವನೆ. ಜೇನುಸಾಕಣೆ ನಿಜಕ್ಕೂ ತುಂಬ ಸುಲಭದ ಕೆಲಸ. ಅದರ ಬಗ್ಗೆ ಕಲಿಯಬೇಕೆಂದರೆ ಬಹಳಷ್ಟು ಸಂಗತಿಗಳು ಆನ್‌ಲೈನಿನಲ್ಲೂ ಸಿಗುತ್ತವೆ. ಕೇವಲ ಜೇನಲ್ಲದೆ, ಬಹಳಷ್ಟು ಬೇರೆ ವಸ್ತುಗಳನ್ನೂ ಜೇನ್ನೊಣಗಳು ಉತ್ಪಾದಿಸುತ್ತವೆ. ಜೊತೆಗೆ ಇದೊಂದು ಉಪಕೆಲಸದ ಹಾಗೆ, ಆರ್ಥಿಕವಾಗಿಯೂ ಲಾಭದಾಯಕವಾಗಿದೆ. ಹಾಗಾಗಿ ಹೆದರದೆ ಧೈರ್ಯದಿಂದ ಜೇನುಸಾಕಣೆ ಮಾಡಿ, ಗುಡ್ ಲಕ್” ಎಂದು ಬರೆದ ಪತ್ರವಿದು.
ಇದನ್ನೂ ಓದಿ: Hugging is injurious | ಪ್ರೀತಿಯಿಂದ ಅಪ್ಪಿಕೊಂಡ ಸಹೋದ್ಯೋಗಿಗೆ 1.16 ಲಕ್ಷ ರೂ. ದಂಡ!
ಈ ಪತ್ರದಲ್ಲಿ ೨೦೧೨ರ ದಿನಾಂಕ ನಮೂದಾಗಿದ್ದು, ಆಕೆಯ ತಂದೆ ೨೦೧೩ರಲ್ಲಿ ತನ್ನ ೫೩ನೇ ವಯಸ್ಸಿನಲ್ಲಿ ಶಾಸಕೋಶದ ಕ್ಯಾನ್ಸರ್‌ನಿಂದ ತೀರಿಕೊಂಡಿದ್ದಾರೆ. ರಿಕ್ ಕ್ಲುಕಿ ಎಂಬ ಹೆಸರಿನ ಆತ,ನಿಗೆ ಆರು ಮಕ್ಕಳಿದ್ದು, ಆಮಿ ಕ್ಲುಕಿ ಎಲ್ಲರಿಗಿಂತ ಹಿರಿಯಳು. ಆಕೆಯ ಸಹೋದರನಿಗೆ ಈ ಪತ್ರ ಸಿಕ್ಕಿದ್ದು, ಆಕೆ ಸದ್ಯದಲ್ಲೇ ಹೊಂದಲಿರುವ ಮನೆಯಲ್ಲಿ ಜೇನುಸಾಕಣೆಯನ್ನು ಮಾಡಲು ಯೋಚಿಸಿದ್ದಾಳಂತೆ.
ಈ ಪೋಸ್ಟ್‌ಗೆ ಏಳೂವರೆ ಲಕ್ಷ ಲೈಕ್ ಬಂದಿದ್ದು, ಇದು ಆಕೆಯನ್ನು ಮತ್ತಷ್ಟು ಭಾವುಕಳನ್ನಾಗಿಸಿದೆ. ʻಅಪ್ಪ ಇರುತ್ತಿದ್ದರೆ, ಆತ ಖುಷಿ ಪಡುತ್ತಿದ್ದʼ ಎಂದು ಆಕೆ ಉತ್ತರವನ್ನೂ ಕೊಟ್ಟಿದ್ದು, ತನ್ನ ಹಾಗೂ ತಂದೆಯ ಹಳೆಯ ಫೋಟೋ ಒಂದನ್ನು ಕಮೆಂಟಿನಲ್ಲಿ ಪೋಸ್ಟ್ ಮಾಡಿದ್ದಾಳೆ. ಕೆಲವರು, ನಿಮ್ಮ ಜಾಗದಲ್ಲಿ ನಾನಿರುತ್ತಿದ್ದರೆ, ಅತ್ತುಬಿಡುತ್ತಿದ್ದೆ ಎಂದು ಹೇಳಿದ್ದಕ್ಕೆ ಆಕೆ, ʻಕಾಫಿ ಶಾಪ್ ಒಂದರಲ್ಲಿ ಕುಳಿತು ಅಳುತ್ತಿದ್ದೇನೆʼ ಎಂದು ಉತ್ತರ ನೀಡಿದ್ದಾಳೆ.
ಇದನ್ನೂ ಓದಿ: Walking Snake | ಹರಿದಾಡುವ ಹಾವು ನೋಡಿದ್ದೀರಿ, ಆದರೆ ನಡೆದಾಡುವ ಹಾವು ನೋಡಿದ್ದೀರಾ? ಇಲ್ಲಿದೆ ವಿಡಿಯೊ
ಅಪ್ಪನೊಬ್ಬ ತಾನು ಇದ್ದಾಗಲೇ, ತನ್ನ ಮಕ್ಕಳಲ್ಲಿ ಯಾರಾದರೊಬ್ಬರು ತನ್ನ ಆಸಕ್ತಿಯ ಕ್ಷೇತ್ರವಾದ ಜೇನುಸಾಕಣೆಯಲ್ಲಿ ತಾವೂ ಆಸಕ್ತಿ ತೋರಿಸಿದರೆಂದಾದಲ್ಲಿ ಅವರಿಗೊಂದು ಪ್ರೀತಿಯ ಸ್ವಾಗತವೆಂಬಂತೆ ಬರೆದಿಟ್ಟ ಪತ್ರವಿದು. ತನ್ನ ಮಕ್ಕಳಲ್ಲಿ ಒಬ್ಬರಾದರೂ ಆಸಕ್ತಿ ತೋರಿಸಲಿ ಎಂದು ಆಸೆಪಡುವ ಹೆತ್ತ ಕರುಳಿದು. ಆತನ ಮರಣದ ನಂತರ ಒಂಭತ್ತು ವರ್ಷಗಳು ಕಳೆದ ಮೇಲೆ ಇದು ಸಿಕ್ಕಿದ್ದು ಈ ಇಡೀ ಪ್ರಕರಣಕ್ಕೊಂದು ಭಾವುಕ ಸ್ಪರ್ಶವನ್ನೇ ನೀಡಿದೆ. ಪ್ರತಿಯೊಬ್ಬರಲ್ಲೂ ಇದು ಕಣ್ಣೀರು ತರಿಸಿದೆ.