ವಿಶೇಷ ಬಿಸ್ಕಿಟ್ಗಳ ತಯಾರಿಕೆಗೇ ಹೆಸರಾದ ಫ್ರೆಡ್ಡಿ ಬೇಕಿಂಗ್ ಎಂಬ ಬೇಕರಿ ಈಗ ಒಂದು ವಿವಾದ ಹುಟ್ಟುಹಾಕಿದೆ. ವಿವಿಧ ಬಗೆಯ ಕುಕ್ಕೀಸ್, ಬಿಸ್ಕಿಟ್ಗಳನ್ನು ತಯಾರಿಸುವ ಈ ಬೇಕರಿ, ಗ್ರಾಹಕರು ಕೊಡುವ ಆರ್ಡರ್ಗಳನ್ನೂ ಸ್ವೀಕರಿಸಿ, ಅವರಿಗೆ ಅಗತ್ಯ ಇರುವ ರೀತಿಯ ಕುಕ್ಕೀಸ್, ಬಿಸ್ಕಿಟ್ ರೆಡಿ ಮಾಡಿ ಕೊಡುತ್ತದೆ. ಅಂದರೆ ಮದುವೆ, ಗೃಹಪ್ರವೇಶ, ಯಾವುದೇ ವಿಧದ ಹಬ್ಬಗಳು, ಪಾರ್ಟಿಗಳಿಗೆ ಗ್ರಾಹಕರು ಕುಕ್ಕೀಸ್/ಬಿಸ್ಕಿಟ್ಗಳು ಬೇಕೆಂದರೆ ಈ ಬೇಕರಿಗೆ ಆರ್ಡರ್ ಕೊಡಬಹುದು. ಆಯಾ ವಿಶೇಷ ಸಂದರ್ಭಕ್ಕೆ ಹೊಂದುವ ವಿನ್ಯಾಸದಲ್ಲೇ ತಿಂಡಿಗಳನ್ನು ರೆಡಿ ಮಾಡಿಕೊಡುತ್ತದೆ.
ಅದೇ ರೀತಿ ಈಗ ಬ್ರಾಹ್ಮಣ ಕುಟುಂಬವೊಂದು ಮನೆ ಮಗನ ಉಪನಯನಕ್ಕಾಗಿ ಬಿಸ್ಕಿಟ್ ತಯಾರು ಮಾಡಿಕೊಡುವಂತೆ ಬೇಕರಿಗೆ ಆರ್ಡರ್ ಕೊಟ್ಟಿತ್ತು. ಅದರಂತೆ ಫ್ರೆಡ್ಡಿ ಬೇಕಿಂಗ್ ಬಿಸ್ಕಿಟ್ ತಯಾರು ಮಾಡಿ, ಅವರಿಗೆ ಕೊಟ್ಟಿದೆ. ಆದರೆ ಈ ಬಿಸ್ಕಿಟ್ಗಳಲ್ಲಿ ಮೂಡಿದ್ದ ಚಿತ್ರ ಅನೇಕರ ಕಣ್ಣುಕೆಂಪಾಗಿಸಿವೆ. ಅದು ಉಪನಯನಕ್ಕೆ ಬೇಕಾದ ಬಿಸ್ಕಿಟ್ ಆಗಿದ್ದರಿಂದ ಅದರ ಮೇಲೆ ‘ಬ್ರಾಹ್ಮಣ ವಟು’ ವಿನ ಚಿತ್ರ ರೂಪಿಸಿದ್ದರು. ಬ್ರಾಹ್ಮಣ ಕುಕ್ಕೀಸ್ ಎಂದೇ ಅದನ್ನು ಹೆಸರಿಸಿದ್ದರು. ಬ್ರಾಹ್ಮಣ ಸಮುದಾಯದ ಸಂಪ್ರದಾಯದ ಪ್ರಕಾರ ಉಪನಯನದ ದಿನ ಬಾಲಕನ ತಲೆ ಕೂದಲನ್ನು ಸಂಪೂರ್ಣವಾಗಿ ತೆಗೆಸಿ, ಒಂದು ಜುಟ್ಟು ಇಡಲಾಗುತ್ತದೆ. ಹಾಗೇ, ಆತ ಪಂಚೆಯನ್ನು ಮಾತ್ರ ಉಟ್ಟಿರುತ್ತಾನೆ. ಅಂದು ಅವನಿಗೆ ಜನಿವಾರ ಧಾರಣೆಯಾಗುತ್ತದೆ. ಹೀಗೆ ಉಪನಯನವಾದ ಬಾಲಕನನ್ನೇ ಆ ಬೇಕರಿ ಬಿಸ್ಕಿಟ್ ಮೇಲೆ ಚಿತ್ರಿಸಿತ್ತು.
ಇದನ್ನೂ ಓದಿ: Varthur prakash | ನನ್ನ ಕೆಲವು ಲಿಂಗಾಯತ, ಬ್ರಾಹ್ಮಣ ಸ್ನೇಹಿತರು ಕೆಜಿಗಟ್ಲೆ ನಾನ್‌ವೆಜ್ ತಿಂತಾರೆ ಎಂದ ವರ್ತೂರು ಪ್ರಕಾಶ್
ಹಲವರು ಬೇಕರಿಯ ಕ್ರಿಯೇಟಿವಿಟಿಯನ್ನು ಹೊಗಳಿದ್ದರೆ, ಇನ್ನೂ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕುಕ್ಕೀಸ್/ಬಿಸ್ಕೀಟ್ಗಳಲ್ಲಿ ಕೂಡ ಜಾತಿ ಬಂತು, ಬ್ರಾಹ್ಮಣರ ಕುಕ್ಕೀಸ್ ಬೇರೆ ಹೊರಬಂತು ಎಂದು ಹಲವರು ವ್ಯಂಗ್ಯವಾಡಿದ್ದಾರೆ. ಈ ವಿಷಯ ಸೋಷಿಯಲ್ ಮೀಡಿಯಾಗಳಲ್ಲಿ ದೊಡ್ಡದಾಗಿ ಚರ್ಚೆಯಾಗುತ್ತಿದ್ದಂತೆ ಬೇಕರಿ ತನ್ನ ಇನ್ಸ್ಟಾಗ್ರಾಂ ಪೇಜ್ನಲ್ಲಿ ಹಂಚಿಕೊಂಡಿದ್ದ ಬ್ರಾಹ್ಮಣರ ಕುಕ್ಕೀಸ್ ಫೋಟೋವನ್ನು ತೆಗೆದು ಹಾಕಿದೆ.