Site icon Vistara News

Viral Video: ಉದ್ದನೆಯ ಹಾವನ್ನು ಚಪ್ಪರಿಸಿಕೊಂಡು ತಿಂದ ಜಿಂಕೆ!

Deer Eating Snake

#image_title

ಜಿಂಕೆಗಳು ಎಂದಾದರೂ ಮಾಂಸ ತಿನ್ನುತ್ತವಾ? ಇವು ಪ್ರಕೃತಿಯಲ್ಲಿ ಸಸ್ಯಾಹಾರಿ ಜೀವಿಗಳ ಸಾಲಿಗೆ ಸೇರಿವೆ. ಹುಲಿ, ಚಿರತೆ, ಸಿಂಹದಂಥ ಮೃಗಗಳಿಗೆ ಇವೇ ಮಾಂಸದೂಟ ಆಗುತ್ತವೆ ಬಿಟ್ಟರೆ, ಜಿಂಕೆಗಳೆಂದೂ ಬೇಟೆಯಾಡುವುದಿಲ್ಲ. ಹುಲ್ಲು, ಮರದ ಎಲೆಗಳೇ ಇವುಗಳಿಗೆ ಆಹಾರ. ಆದರೂ ಇದು ಪ್ರಕೃತಿ ನೋಡಿ, ಒಮ್ಮೊಮ್ಮೆ ವೈಚಿತ್ರ್ಯಗಳು ನಡೆದುಬಿಡುತ್ತವೆ. ಕಪ್ಪೆ ಹಾವನ್ನು ನುಂಗಿದ ಬಗ್ಗೆ ಈ ಹಿಂದೆ ಸುದ್ದಿಯಾಗಿತ್ತಲ್ಲ, ಈಗ ಅಂಥ ಇನ್ನೊಂದು ಸುದ್ದಿ ವರದಿಯಾಗಿದೆ. ಜಿಂಕೆಯೊಂದು ಹಾವನ್ನು ಕಚ್ಚಿಕಚ್ಚಿ ತಿಂದಿದೆ (Deer Eating Snake). ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ.

ಐಎಫ್​ಎಸ್​ ಅಧಿಕಾರಿ ಸುಸಾಂತಾ ನಂದಾ ಅವರು ವಿಡಿಯೊ ಶೇರ್​ ಮಾಡಿಕೊಂಡು ‘ಪ್ರಕೃತಿಯನ್ನು ಆಳವಾಗಿ ಅರ್ಥೈಸಿಕೊಳ್ಳಲು ನಮಗೆ ಕ್ಯಾಮರಾಗಳು ಸಹಾಯ ಮಾಡುತ್ತವೆ. ಜಿಂಕೆಗಳು ಕೆಲವು ಸಲ ಹಾವನ್ನೂ ತಿನ್ನಬಲ್ಲವು’ ಎಂದು ಕ್ಯಾಪ್ಷನ್ ಬರೆದಿದ್ದಾರೆ. ವಿಡಿಯೊ ನೋಡಿದವರಂತೂ ಶಾಕ್​ ವ್ಯಕ್ತಪಡಿಸುತ್ತಿದ್ದಾರೆ. ಅದೊಂದು ಕಾಡು, ಪಕ್ಕದಲ್ಲೇ ವಾಹನಗಳು ಓಡಾಡುವ ರೋಡು. ರಸ್ತೆ ಪಕ್ಕ ನಿಂತ ಜಿಂಕೆಯೊಂದು ಹಾವನ್ನು ಬಾಯಲ್ಲಿ ಹಾಕಿಕೊಂಡು ಒಂದೇ ಸಮ ಜಗಿಯುತ್ತಿದೆ. ಅದನ್ನು ನೋಡಿದರೆ ನಮಗೇ ಭಯವಾಗುತ್ತದೆ. ನೆಟ್ಟಿಗರೂ ಕೂಡ ಅಚ್ಚರಿಯಾಗಿದೆ ಎನ್ನುತ್ತಿದ್ದಾರೆ. ಜಿಂಕೆ ನಿಜಕ್ಕೂ ಮಾಂಸಹಾರಿಯಾ ಎಂಬ ಬಗ್ಗೆ ಚರ್ಚೆಯೂ ನಡೆದಿದೆ. ಕೆಲವರು, ಜಿಂಕೆಗೆ ಅದು ಹಾವು ಎಂದು ಗೊತ್ತೇ ಆಗಿಲ್ಲ, ಹುಲ್ಲು ಎಂದು ಭಾವಿಸಿ ತಿನ್ನುತ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಿಂಕೆ ಮಾಂಸಹಾರಿಯಾ?
ಕೆಲವೊಮ್ಮೆ ನಾಯಿ-ಬೆಕ್ಕುಗಳು ಹುಲ್ಲನ್ನು ಬಾಯಿಯಲ್ಲಿ ಹಾಕಿಕೊಂಡು ಅಗಿಯುವುದನ್ನು ನಾವು ನೋಡುತ್ತೇವೆ. ಅವು ಹುಲ್ಲು-ಸೊಪ್ಪು ತಿನ್ನದೆ ಇದ್ದರೂ ಅಪರೂಪಕ್ಕೆಂಬಂತೆ ಅಗಿಯುತ್ತವೆ. ಅದಕ್ಕೆ ಕಾರಣ ಅವರ ದೇಹದಲ್ಲಿ ಯಾವುದೊ ಒಂದು ಅಂಶ, ಅಂದರೆ ಕ್ಯಾಲ್ಸಿಯಂ, ಸೋಡಿಯಂ ಅಥವಾ ಇತರ ಯಾವುದೋ ಖನಿಜದ ಕೊರತೆಯಾಗುವುದು. ಅಂತೆಯೇ ಜಿಂಕೆಗಳು ಮಾಂಸಹಾರಿಗಳು ಅಲ್ಲವೇ ಅಲ್ಲ. ಆದರೂ ಇವುಗಳ ದೇಹದಲ್ಲಿ ಯಾವುದೇ ಖನಿಜಾಂಶ ಕೊರತೆಯಾದಾಗ ಹೀಗೆ ಮಾಂಸ ತಿನ್ನಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಅದೂ ಕೂಡ ಹೀಗೆ ಅಗೆದು ಅಗೆದು ಬಿಡುತ್ತವೆ ಎನ್ನಲಾಗಿದೆ. ಒಟ್ನಲ್ಲಿ ವಿಡಿಯೊ ಬಗ್ಗೆ ಒಂದು ಸ್ಪಷ್ಟನೆ ಸಿಕ್ಕಿಲ್ಲ.

Exit mobile version