Site icon Vistara News

Viral News : ವಾಕಿಂಗ್‌ ಮಾಡುತ್ತಿದ್ದ ಡಿಐಜಿ ಮೊಬೈಲನ್ನೇ ಕಿತ್ತುಕೊಂಡ ಹೋದ ಕಳ್ಳರು!

DIG phone snatched

ಗುವಾಹಟಿ: ಸರಗಳ್ಳತನ, ಮೊಬೈಲ್‌ ಕಳ್ಳತನದ ಸುದ್ದಿಗಳನ್ನು ಆಗಾಗ ಓದುತ್ತಿರುತ್ತೀರಿ. ಅಂತಹ ಕಳ್ಳರನ್ನು ಹುಡುಕಲೆಂದೇ ಪೊಲೀಸರು ಕೆಲಸ ಮಾಡುತ್ತಿರುತ್ತಾರೆ. ಆದರೆ ವಿಚಿತ್ರವೆನ್ನುವಂತೆ ಅಸ್ಸಾಮಿನ ಡೆಪ್ಯೂಟಿ ಇನ್‌ಸ್ಪೆಕ್ಟರ್‌ ಜನರಲ್‌(ಡಿಐಜಿ) ಆಗಿರುವ ವಿವೇಕ್‌ ರಾಜ್‌ ಸಿಂಗ್‌ ಅವರ ಮೊಬೈಲ್‌ ಫೋನ್‌ ಅನ್ನೇ ಕಳ್ಳರು (Viral News) ಕಿತ್ತುಕೊಂಡು ಹೋಗಿದ್ದಾರೆ.

ಹೌದು. ವಿವೇಕ್‌ ಅವರು ಭಾನುವಾರ ಬೆಳಗ್ಗೆ ಗುವಾಹಟಿಯ ಮಜರ್‌ ರಸ್ತೆಯಲ್ಲಿ ವಾಕಿಂಗ್‌ ಮಾಡುತ್ತಿದ್ದರು. ಆ ವೇಳೆ ಬೈಕ್‌ನಲ್ಲಿ ಬಂದ ಕಳ್ಳರು, ವಿವೇಕ್‌ ಅವರ ಮೊಬೈಲ್‌ ಕಸಿದುಕೊಂಡು ಹೋಗಿದ್ದಾರೆ. ಈ ವಿಚಾರ ಹೊರಬೀಳುತ್ತಿದ್ದಂತೆಯೇ ಜನಸಾಮಾನ್ಯರು ಆತಂಕ ವ್ಯಕ್ತಪಡಿಸಲಾರಂಭಿಸಿದ್ದಾರೆ. ಹಿರಿಯ ಪೊಲೀಸ್‌ ಅಧಿಕಾರಿಗಳ ಫೋನನ್ನೇ ಕಳ್ಳರು ಕದಿಯುತ್ತಿದ್ದಾರೆ ಎಂದ ಮೇಲೆ ಜನಸಾಮಾನ್ಯರ ಕಥೆಯೇನು ಎಂದು ಜನ ಪ್ರಶ್ನಿಸಲಾರಂಭಿಸಿದ್ದಾರೆ.

ವಿಶೇಷವೆಂದರೆ ವಿವೇಕ್‌ ಅವರು ವಾಕಿಂಗ್‌ ಮಾಡುತ್ತಿದ್ದ ಮಜರ್‌ ರಸ್ತೆಯಲ್ಲಿ ಪೊಲೀಸ್‌ ಇಲಾಖೆಯ ಹಲವಾರು ಅಧಿಕಾರಿಗಳ ನಿವಾಸಗಳಿವೆ. ಹಾಗೆಯೇ ಐಪಿಎಸ್‌ ಅಧಿಕಾರಿಗಳ ನಿವಾಸವೂ ಇವೆ. ಹಾಗಿದ್ದರೂ ಕಳ್ಳರು ಒಂಚೂರು ಹೆದರದೆ ಕಳ್ಳತನ ಮಾಡಿರುವುದು ಅಸ್ಸಾಂ ಜನರಿಗೆ ಆಘಾತವುಂಟು ಮಾಡಿದೆ.

ಇದನ್ನೂ ಓದಿ: Viral News : 11 ವರ್ಷದ ಬಾಲಕನ ಜೀವ ತೆಗೆದ ಯುಟ್ಯೂಬ್‌ ವಿಡಿಯೊ
ಎಸಿಪಿ ಪೃಥ್ವಿರಾಜ್‌ ರಾಜ್ಖೋವಾ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. “ಪಲ್ತಾನ್‌ಬಜಾರ್‌ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಘಟನೆಯ ಬಗ್ಗೆ ನಾವು ಎಲ್ಲ ರೀತಿಯಲ್ಲಿ ತನಿಖೆ ನಡೆಸುತ್ತಿದ್ದೇವೆ. ಶೀಘ್ರವೇ ಆರೋಪಿಗಳನ್ನು ಸೆರೆಹಿಡಿಯಲಿದ್ದೇವೆ” ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ನೀಡಲು ಪೊಲೀಸ್‌ ಇಲಾಖೆ ನಿರಾಕರಿಸಿದೆ.

ಈ ಹಿಂದೆ ಜುಲೈ 19ರಂದು ಕಳ್ಳರು ಗುವಾಹಟಿಯ ಹಂಗೇರಬರಿಯಲ್ಲಿರುವ ಗುಪ್ತಚರ ಇಲಾಖೆಯ ನಿರ್ದೇಶಕರಾದ ದಪನ್‌ ಕುಮಾರ್‌ ದೆಕ ಅವರ ಮನೆಗೆ ಕಳ್ಳರು ನುಗ್ಗಿದ್ದು ವರದಿಯಾಗಿತ್ತು. ಆ ಹಿನ್ನೆಲೆಯಲ್ಲಿ ದಪನ್‌ ಕುಮಾರ್‌ ಅವರ ಮನೆಗೆ ಹೆಚ್ಚಿನ ಭದ್ರತೆಯನ್ನು ನಿಯೋಜನೆ ಮಾಡಲಾಗಿತ್ತು. ಇದಲ್ಲದೆ ಗುವಾಹಟಿಯ ನರೇಂಗಿ, ನೂನ್ಮತಿ, ಫ್ಯಾನ್ಸಿ ಬಜಾರ್‌ ಮತ್ತು ಬೆಲ್ಟೋಲಾದಲ್ಲಿ ಹೆಚ್ಚಾಗಿ ಸರಗಳ್ಳತನ, ಮೊಬೈಲ್‌ ಕಳ್ಳತನದ ಪ್ರಕರಣಗಳು ವರದಿಯಾಗುತ್ತಿರುತ್ತವೆ. ಈ ಸ್ಥಳಗಳಲ್ಲಿ ಹಲವಾರು ಪೊಲೀಸ್‌ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆಯಾದರೂ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿಲ್ಲ.

Exit mobile version