ಭಾರತದ ಮೊಟ್ಟಮೊದಲ ಎಂಜಿನಿಯರ್ ಸರ್. ಎಂ.ವಿಶ್ವೇಶ್ವರಯ್ಯನವರು ಹುಟ್ಟಿದ ದಿನ ಸೆಪ್ಟೆಂಬರ್ 15ನ್ನು ಪ್ರತಿವರ್ಷ ಭಾರತದಲ್ಲಿ ‘ರಾಷ್ಟ್ರೀಯ ಎಂಜಿನಿಯರ್ಗಳ ದಿನ’ ಎಂದು ಆಚರಿಸಲಾಗುತ್ತದೆ. ಈ ದಿನ ಸರ್. ಎಂ.ವಿಶ್ವೇಶ್ವರಯ್ಯನವರನ್ನು ಸ್ಮರಿಸುವ ಜತೆ ಎಲ್ಲ ಎಂಜಿನಿಯರ್ಗಳಿಗೂ ಶುಭಕೋರಿ ಗೌರವಿಸಲಾಗುತ್ತದೆ. ಈ ದಿನ ಸೋಷಿಯಲ್ ಮೀಡಿಯಾದಲ್ಲಿ ಎಂಜಿನಿಯರ್ಗಳಿಗೆ ಗೌರವ ಸಲ್ಲಿಸುವ ಪೋಸ್ಟ್ಗಳನ್ನು ಹಾಕುವ ಜತೆ, ಅವರ ಕಾಲೆಳೆಯುವ, ಅವರ ಬಗೆಗಿನ ತಮಾಷೆಯುಕ್ತ ಜೋಕ್ಗಳ ಪೋಸ್ಟ್ನ್ನೂ ಹಾಕಲಾಗುತ್ತದೆ. ಹಾಗಂತ ಇದು ಟೀಕೆಯೆಂದೆಲ್ಲ..
ಇಷ್ಟೆಲ್ಲ ಮಾಡಿ ಎಂಜಿನಿಯರ್ಸ್ ಡೇ ಆಚರಿಸುವ ನಮಗೆ ಅರಣ್ಯದಲ್ಲಿರುವ ಸಿವಿಲ್ ಎಂಜಿನಿಯರ್ಗಳು ಯಾರೆಂದು ಗೊತ್ತಾ? -ಏನು ಕಾಡಿನಲ್ಲಿ ಸಿವಿಲ್ ಎಂಜಿನಿಯರ್ಗಳು ಇರುತ್ತಾರಾ? ಎಂಬ ಪ್ರಶ್ನೆ ನಿಮ್ಮಲ್ಲಿ ಉದ್ಭವ ಆಗಬಹುದು. ‘ಹೌದು..ಪುರಾತನ ಕಾಲದಿಂದಲೂ..ಈಗಿನವರೆಗೂ ಕಾಡಿನಲ್ಲೂ ಸಿವಿಲ್ ಎಂಜಿನಿಯರ್ಗಳು ಇದ್ದಾರೆ ಎನ್ನುತ್ತಾರೆ ಐಎಫ್ಎಸ್ (ಇಂಡಿಯನ್ ಫಾರೆಸ್ಟ್ ಸರ್ವೀಸ್) ಅಧಿಕಾರಿ ಪರ್ವೀನ್ ಕಾಸ್ವಾನ್. ಅಂದಹಾಗೇ, ಪರ್ವೀನ್ ಮಾತನಾಡುತ್ತಿರುವುದು ‘ಆನೆ’ಗಳ ಬಗ್ಗೆ. ಅವರು ಹೇಳುವ ಪ್ರಕಾರ ಆನೆಗಳೇ ಅರಣ್ಯದ ಸಿವಿಲ್ ಎಂಜಿನಿಯರ್ಗಳು.
ಇಂದು ಎಂಜಿನಿಯರ್ಸ್ ಡೇ ನಿಮಿತ್ತ ಟ್ವೀಟ್ ಮಾಡಿರುವ ಐಎಫ್ಎಸ್ ಅಧಿಕಾರಿ ಪರ್ವೀನ್ ಕಾಸ್ವಾನ್, ‘ಆನೆಗಳು ಅರಣ್ಯಗಳಲ್ಲಿ ಸಿವಿಲ್ ಎಂಜಿನಿಯರ್ಗಳಂತೆ ಕೆಲಸ ಮಾಡುತ್ತವೆ ಎಂಬುದು ನಿಮಗೆಲ್ಲ ತಿಳಿದಿದೆಯೇ? ದಟ್ಟಾರಣ್ಯದಲ್ಲಿ ಅವು ಹೆಜ್ಜೆಯೂರಿ ನಡೆದ ಜಾಗ ದಾರಿಯಾಗಿ ಮಾರ್ಪಾಡಾಗುತ್ತದೆ. ಅದೆಷ್ಟೋ ಪ್ರದೇಶಗಳಲ್ಲಿ ನೀರು ಹುಡುಕಲು ತಮ್ಮ ಸೊಂಡಿಲುಗಳ ಮೂಲಕ ನೆಲವನ್ನು ಅಗೆದು, ಅಂತರ್ಜಲದ ನೀರು ಉಕ್ಕುವಂತೆ ಮಾಡಿ ಸರೋವರ, ಕೊಳವನ್ನು ನಿರ್ಮಿಸಿವೆ. ನದಿಗಳ ಮೂಲಕ ನಡೆದು ಹೋಗಿ ಅವುಗಳ ಹರಿವಿಗೆ ದಾರಿ ಮಾಡಿಕೊಟ್ಟಿವೆ. ಪ್ರಾಚೀನ ಭಾರತದ ದೇಗುಲಗಳ ನಿರ್ಮಾತೃಗಳು ಈ ಆನೆಗಳು, ಇಷ್ಟೆಲ್ಲ ಮಾಡುವ ಅವು ಎಂಜಿನಿಯರ್ಗಳಲ್ಲದೆ ಇನ್ನೇನು?’ ಎಂದು ವಿವರಿಸಿದ್ದಾರೆ.
ಆನೆಗಳು ಪರಿಸರ ವ್ಯವಸ್ಥೆಯ ಎಂಜಿನಿಯರ್ಗಳು ಎಂಬುದನ್ನು ವರ್ಲ್ಡ್ ವೈಲ್ಡ್ಲೈಫ್ ಫಂಡ್ ಕೂಡ ಹೇಳಿದೆ. ದಟ್ಟಾರಣ್ಯಗಳಲ್ಲಿ ಆನೆಗಳು ಮೊದಲು ನಡೆದು ಉಳಿದ ಪ್ರಾಣಿಗಳಿಗೆ ಹಾದಿ ನಿರ್ಮಿಸಿಕೊಡುತ್ತವೆ. ದೊಡ್ಡದೊಡ್ಡ ಮರಗಳನ್ನು, ಪೊದೆಗಳನ್ನು ಉರುಳಿಸಿ ದಾರಿ ಮಾಡುವ ಶಕ್ತಿ ಆನೆಗಳಿಗೆ ಅಲ್ಲದೆ, ಇನ್ಯಾವ ಪ್ರಾಣಿಗಳಿಗೂ ಇಲ್ಲ ಎಂದು ಹೇಳಿದೆ. ಇಲ್ಲಿ ನಾಡಿನಲ್ಲಿ ಅಭಿಯಂತರರು ಮಾಡುವ ಕೆಲಸವನ್ನು ಅಲ್ಲಿ ಕಾಡಿನಲ್ಲಿ ಆನೆಗಳು ಮಾಡುತ್ತವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.
ಇದನ್ನೂ ಓದಿ: Engineers Day | ನೀವು ನೆನಪಿನಲ್ಲಿಟ್ಟುಕೊಳ್ಳಲೇಬೇಕಾದ ವಿಶ್ವೇಶ್ವರಯ್ಯರ ಹತ್ತು ಹೇಳಿಕೆಗಳು ಇವು