Site icon Vistara News

Viral News : ನಾಯಿಗಳಿಗೂ ಬಂತು ಕ್ಯೂಆರ್‌ ಕೋಡ್‌! ಇದು ನಾಯಿಯ ಆಧಾರ್‌ ಕಾರ್ಡ್‌!

dog belt

ಮುಂಬೈ: ಸಾಕಿದ ನಾಯಿಯನ್ನು ಕಳೆದುಕೊಂಡಾಗ ಆಗುವ ನೋವು ಅದನ್ನು ಅನುಭವಿಸುವವರಿಗೆ ಮಾತ್ರ ಗೊತ್ತು. ಮಗುವಂತೆ ಸಾಕಿದ್ದ ಪ್ರಾಣಿಯೊಂದು ಕೈ ತಪ್ಪಿ ಹೋಯಿತಲ್ಲ ಎಂದು ಬಿಕ್ಕಿ ಬಿಕ್ಕಿ ಅಳುವವರೂ ಇದ್ದಾರೆ. ಅಂತವರಿಗೆಂದೇ ಮುಂಬೈನ ಇಂಜಿನಿಯರ್‌ ಒಬ್ಬ ಹೊಸ ತಂತ್ರವನ್ನು ಕಂಡುಹಿಡಿದಿದ್ದಾನೆ. ನಾಯಿಗಳಿಗೆಂದೇ ಕ್ಯೂಆರ್‌ ಕೋಡ್‌ ರಚಿಸಿಕೊಡುತ್ತಿರುವನ ಈತನ ಸುದ್ದಿ ಇದೀಗ ವೈರಲ್‌ (Viral News) ಆಗುತ್ತಿದೆ.

ಮುಂಬೈನ 24 ವರ್ಷದ ಇಂಜಿನಿಯರ್‌ ಅಕ್ಷಯ್‌ ರಿದ್ಲಾನ್‌ ನಾಯಿಗಳಿಗೆಂದೇ ವಿಶೇಷವಾದ ಕ್ಯೂಆರ್‌ ಕೋಡ್‌ ಬೆಲ್ಟ್‌ಗಳನ್ನು ತಯಾರಿಸುತ್ತಿದ್ದಾರೆ. ಕ್ಯೂಆರ್‌ ಕೋಡ್‌ ಅನ್ನು ಹೊಂದಿರುವ ಆ ಬೆಲ್ಟ್‌ನ್ನು ಸ್ಕ್ಯಾನ್‌ ಮಾಡಿದರೆ ಆ ನಾಯಿಯ ಸಂಪೂರ್ಣ ಮಾಹಿತಿ ನಿಮ್ಮ ಮೊಬೈಲ್‌ನಲ್ಲೇ ಸಿಗುತ್ತದೆ. ನಾಯಿ ಹೆಸರೇನು? ಅದರ ವೈದ್ಯಕೀಯ ವರದಿ, ಹಾಗೆಯೇ ಅದನ್ನು ಸಾಕುತ್ತಿರುವರ ಮೊಬೈಲ್‌ ಸಂಖ್ಯೆ ಕೂಡ ಸಿಗುತ್ತದೆ. ತಪ್ಪಿಸಿಕೊಂಡಿರುವ ನಾಯಿ ಏನಾದರೂ ಕಂಡರೆ ನೀವು ಅದರ ಕ್ಯೂಆರ್‌ ಕೋಡ್‌ ಅನ್ನು ಸ್ಕ್ಯಾನ್‌ ಮಾಡಿ ಅದರ ಮಾಲೀಕರಿಗೆ ಮಾಹಿತಿ ತಲುಪಿಸಿಬಿಡಬಹುದು.

ಇದನ್ನೂ ಓದಿ: Viral News : ಮಳೆ ನೀರು ತುಂಬಿದ್ದ ರಸ್ತೆಯಲ್ಲಿ ಕೆಟ್ಟು ನಿಂತ ಕಾರು, ರಿಪೇರಿಗೆ ಬೇಕಾಯ್ತು 40 ಲಕ್ಷ ರೂಪಾಯಿ!
ಅಷ್ಟಕ್ಕೂ ಅಕ್ಷಯ್‌ ಈ ಬೆಲ್ಟ್‌ ಅನ್ನು ಮಾಡಿರುವುದು ಬೀದಿ ನಾಯಿಗಳಿಗಾಗಿಯೇ ಅಂತೆ. ಅವರ ಏರಿಯಾದಲ್ಲಿ ಕಾಲು ಹೆಸರಿನ ಬೀದಿ ನಾಯಿಯೊಂದಿತ್ತಂತೆ. ಅದನ್ನು ಅವರು ಸಾಕಷ್ಟು ಪ್ರೀತಿಸುತ್ತಿದ್ದರಂತೆ ಕೂಡ. ಆದರೆ 2020ರಲ್ಲಿ ಅವರ ಏರಿಯಾದಲ್ಲಿ ಕಾರ್ಯಕ್ರಮವೊಂದರ ಪ್ರಯುಕ್ತ ಜೋರಾಗಿ ಪಟಾಕಿ ಹೊಡೆಯಲಾಗಿದೆ. ಅದಕ್ಕೆ ಹೆದರಿಕೊಂಡು ನಾಯಿ ಎಲ್ಲೋ ಓಡಿ ಹೋಗಿದೆ. ಅದನ್ನು ಹುಡುಕುವುದಕ್ಕೆಂದು ಅಕ್ಷಯ್‌ ಸಾಕಷ್ಟು ಪ್ರಯತ್ನ ಪಟ್ಟರಂತೆ. ಸಾಮಾಜಿಕ ಜಾಲತಾಣಗಳಲ್ಲೂ ಸುದ್ದಿ ಮಾಡಿದರಂತೆ. ಆದರೆ ಅದು ಸಿಗದ ಹಿನ್ನೆಲೆ ಅವರಿಗೆ ನಾಯಿಗಳನ್ನು ರಕ್ಷಿಸುವುದಕ್ಕೆ ಏನಾದರೂ ಮಾಡಬೇಕೆಂದು ಎನಿಸಿ ಈ ಕ್ಯೂಆರ್‌ ಕೋಡ್‌ ಬೆಲ್ಟ್‌ಗಳನ್ನು ಮಾಡಿದರಂತೆ.

ಈ ಬೆಲ್ಟ್‌ನ ಬೆಲೆ 100 ರೂಪಾಯಿ. ಹಾಗೆಯೇ ಇದನ್ನು ಬೇರೆ ಊರಿಗೆ ಕಳುಹಿಸಿಕೊಡುವುದಕ್ಕೆಂದು 50 ರೂ. ಹೆಚ್ಚುವರಿ ಪಡೆಯಲಾಗುತ್ತಿದೆಯಂತೆ. ಇದೇ ಕ್ಯೂಆರ್‌ ಕೋಡ್‌ನಲ್ಲಿ ಜಿಪಿಎಸ್‌ ಅಳವಡಿಕೆಯನ್ನೂ ಮಾಡಬಹುದು. ಹಾಗೆ ಮಾಡುವುದರಿಂದ ನಾಯಿ ಈಗ ಎಲ್ಲಿದೆ ಎನ್ನುವುದನ್ನು ಮಾಲೀಕರು ತಮ್ಮ ಮೊಬೈಲ್‌ನಿಂದಲೇ ತಿಳಿದುಕೊಳ್ಳಬಹುದು. ಆದರೆ ಹಾಗೆ ಮಾಡುವುದರಿಂದ ಬೆಲ್ಟ್‌ನ ದರ ಸಾವಿರ ರೂ.ಗಿಂತ ಹೆಚ್ಚಾಗುತ್ತದೆಯಂತೆ. ಆಗ ಜನರು ಅದನ್ನು ಕೊಂಡುಕೊಳ್ಳುವುದಕ್ಕೆ ಮುಂದೆ ಬರುವುದಿಲ್ಲ ಎನ್ನುವ ಕಾರಣಕ್ಕೆ ಆ ಯೋಜನೆಯನ್ನು ಸದ್ಯದ ಮಟ್ಟಿಗೆ ಕೈಬಿಟ್ಟಿದ್ದೇವೆ ಎನ್ನುತ್ತಿದ್ದಾರೆ ಅಕ್ಷಯ್‌.

ಇದನ್ನೂ ಓದಿ: Viral News : ಬಸ್​ನ ಏಣಿ ಮೇಲೆ ಹತ್ತಿಕೊಂಡು ಗೋವಾದಲ್ಲಿ ಫ್ರೀ ರೈಡ್​ ಮಾಡಿದ ವಿದೇಶಿ ದಂಪತಿ!
ಈ ಕ್ಯೂಆರ್‌ ಕೋಡ್‌ ಬೆಲ್ಟ್‌ಗಳನ್ನು ಅಕ್ಷಯ್‌ ಅವರು ನಾಯಿಗಳ ಆಧಾರ್‌ ಕಾರ್ಡ್‌ ಎಂದು ಕರೆದಿದ್ದಾರೆ. ಇದನ್ನು ನಗರ ಪಾಲಿಕೆಯವರು ಬಳಸಿಕೊಳ್ಳಬಹುದು. ಆಗ ಅವರಿಗೆ ಯಾವ ಬೀದಿಯ ಯಾವ ನಾಯಿಗೆ ಚುಚ್ಚುಮದ್ದು ನೀಡಿದ್ದಾಗಿದೆ ಎನ್ನುವುದನ್ನು ಸುಲಭದಲ್ಲಿ ತಿಳಿದುಕೊಳ್ಳಬಹುದು ಎನ್ನುತ್ತಾರೆ ಅಕ್ಷಯ್‌. ಸದ್ಯ ತಮ್ಮದೇ ಹಣ ಖರ್ಚು ಮಾಡಿಕೊಂಡು ನಾಯಿಗಳ ದತ್ತಾಂಶವನ್ನು ಗೂಗಲ್‌ ಕ್ಲೌಡ್‌ನಲ್ಲಿ ಸಂಗ್ರಹಿಸುತ್ತಿದ್ದಾರೆ. ಇದಕ್ಕೆ ಹಣ ನೀಡುವವರು ಮುಂದಾದರೆ ಇನ್ನೂ ಅಭಿವೃದ್ಧಿಪಡಿಸಲು ಸಾಧ್ಯ ಎನ್ನುವುದು ಅವರ ಮಾತು.

ಇದನ್ನು ನಾಯಿಗಳಿಗೆ ಮಾತ್ರವಲ್ಲದೆ ಹಸು, ಕುರಿ ಹೀಗೆ ಯಾವುದೇ ಪ್ರಾಣಿಗೆ ಬೇಕಾದರೂ ಬಳಕೆ ಮಾಡಿಕೊಳ್ಳಬಹುದು. ಈಗಾಗಲೇ 500ಕ್ಕೂ ಅಧಿಕ ಕ್ಯೂಆರ್‌ ಕೋಡ್‌ ಬೆಲ್ಟ್‌ಗಳನ್ನು ಅಕ್ಷಯ್‌ ಮತ್ತು ಅವರ ತಂಡ ಮಾರಾಟ ಮಾಡಿದೆ.

Exit mobile version