ಘಾಜಿಯಾಬಾದ್: ಶ್ವಾನವನ್ನು ಸಾಕಿಕೊಂಡವರು ಅನೇಕರು ಅದನ್ನು ಹೋದಲ್ಲೆಲ್ಲ ಕರೆದುಕೊಂಡು ಹೋಗುವ ಪರಿಪಾಠ ಬೆಳೆಸಿಕೊಂಡಿರುತ್ತಾರೆ. ನಗರಗಳಲ್ಲಂತೂ ನಾಯಿ ಬೆಲ್ಟ್ ಹಿಡಿದು ಓಡಾಡುವವರು ಹಲವರು. ಅವರು ವಾಕಿಂಗ್ ಹೋಗಲಿ, ಮಾರ್ಕೆಟ್ ಹೋಗಲಿ ಅಥವಾ ಇನ್ನೆಲ್ಲೇ ಹೋಗಲಿ, ಜತೆಗೆ ತಮ್ಮ ನಾಯಿಯನ್ನೂ ಕರೆದುಕೊಂಡು ಹೋಗುತ್ತಾರೆ. ಹೀಗೆ ಮಹಿಳೆಯೊಬ್ಬರೂ ತಾನು ಸಾಕಿದ ಶ್ವಾನವನ್ನು ಕರೆದುಕೊಂಡು ಎಲ್ಲಿಗೋ ಹೋಗಿದ್ದರು. ವಾಪಸ್ ಬರುವಾಗ ಲಿಫ್ಟ್ನಲ್ಲಿ ಆ ನಾಯಿ ಬಾಲಕನೊಬ್ಬನಿಗೆ ಕಚ್ಚಿದೆ. ಆದರೆ ಆ ಮಹಿಳೆ ಬಾಲಕನನ್ನು ತಿರುಗಿಯೂ ನೋಡದೆ ಹೋಗಿದ್ದಾರೆ.
ಉತ್ತರ ಪ್ರದೇಶದ ಘಾಜಿಯಾಬಾದ್ನಲ್ಲಿ ನಡೆದ ಘಟನೆಯೊಂದರ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇಲ್ಲಿನ ರಾಜ್ನಗರ ಎಕ್ಸ್ಟೆನ್ಷನ್ನ ಚಾರ್ಮ್ಸ್ ಕ್ಯಾಸಲ್ ಫ್ಲ್ಯಾಟ್ನ ಲಿಫ್ಟ್ನಲ್ಲಿ ನಡೆದ ಘಟನೆ. ಬಾಲಕನಿಗೆ ನಾಯಿಕಚ್ಚಿದ ವಿಡಿಯೋ ಅಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಲಿಫ್ಟ್ನಲ್ಲಿ ಪುಟ್ಟ ಬಾಲಕನೊಬ್ಬ ಶಾಲಾ ಬ್ಯಾಗ್ ಹಾಕಿಕೊಂಡು ಮೊದಲೇ ನಿಂತಿದ್ದಾನೆ. ಆಗ ಅಲ್ಲೊಬ್ಬಳು ಮಹಿಳೆ, ತನ್ನ ಸಾಕು ನಾಯಿಯನ್ನು ಕರೆದುಕೊಂಡು ಬರುತ್ತಾಳೆ. ಒಂದು ಮೂಲೆಯಲ್ಲಿ ನಿಂತಿದ್ದ ಬಾಲಕ ಸ್ವಲ್ಪ ಮುಂದೆ ಹೋಗಲು ಪ್ರಯತ್ನಿಸಿದಾಗ ಆ ನಾಯಿ ಹುಡುಗನ ಬಲತೊಡೆಗೆ ಕಚ್ಚಿದೆ. ಆ ಹುಡುಗನಿಗೆ ತುಂಬ ನೋವಾಗಿದೆ. ಬಲಗಾಲನ್ನು ಮೇಲೆತ್ತಿ ಕುಂಟುತ್ತಾನೆ, ಆ ಭಾಗವನ್ನು ಉಜ್ಜಿಕೊಳ್ಳುತ್ತಾನೆ. ಅಷ್ಟೆಲ್ಲ ಆದರೂ ಮಹಿಳೆ ಮಾತ್ರ ಅದನ್ನು ನೋಡಿಯೂ ನೋಡಿಲ್ಲದಂತೆ ನಿಂತಿದ್ದಾಳೆ. ಹುಡುನ ಬಳಿ ಏನಾಯಿತೆಂದೂ ಅವಳು ಕೇಳಲಿಲ್ಲ. ಅವಳ ಫ್ಲೋರ್ ಬಂದ ತಕ್ಷಣ ಲಿಫ್ಟ್ನಿಂದ ಆಚೆಗೆ ಬರುತ್ತಾಳೆ. Akassh Ashok Gupta ಎಂಬುವರು ಟ್ವಿಟರ್ನಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
ಬಾಲಕನ ಪಾಲಕರು ಮಹಿಳೆ ಮತ್ತು ನಾಯಿಯ ವಿರುದ್ಧ ಘಾಜಿಯಾಬಾದ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನೊಂದೆಡೆ ನೆಟ್ಟಿಗರು ಮಹಿಳೆಗೆ ಬಾಯಿಗೆ ಬಂದಂತೆ ಬೈಯ್ಯುತ್ತಿದ್ದಾರೆ. ‘ಆ ಮಗು ಅಷ್ಟು ನೋವಿನಲ್ಲಿದ್ದರೂ ಮಹಿಳೆಗೆ ಸ್ವಲ್ಪವೂ ಏನೂ ಅನ್ನಿಸಲಿಲ್ಲವಾ? ನಾಚಿಕೆಯಾಗಬೇಕು ಆಕೆಗೆ’ ಎಂದು ಒಬ್ಬರು ಹೇಳಿದ್ದರೆ, ‘ಇತ್ತೀಚೆಗೆ ಮನುಷ್ಯರು ಕರುಣೆ, ದಯೆ, ಸಂವೇದನಾಶೀಲತೆಯನ್ನು ಕಳೆದುಕೊಳ್ಳುತ್ತಿರುವುದು ಖೇದಕರ’ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ‘ಈಕೆಯೊಬ್ಬ ನಾಚಿಕೆಯಿಲ್ಲದ ಮಹಿಳೆ’ ಎಂದೂ ಜರಿದಿದ್ದಾರೆ. ಬೇರೆಯವರ ಮಕ್ಕಳ ಬಗ್ಗೆ ಇಷ್ಟು ನಿರ್ಲಕ್ಷ್ಯವಾ ಎಂದೂ ಹಲವರು ಕೇಳಿದ್ದಾರೆ.
ಇದನ್ನೂ ಓದಿ: Viral news | ಫ್ರೀಜರ್ ತುಂಡಿನಲ್ಲಿ ತೇಲುತ್ತಾ 11 ದಿನ ಸಮುದ್ರದಲ್ಲಿ ಬದುಕುಳಿದ!