ಬೆಂಗಳೂರು: ಬೀದಿ ನಾಯಿಗಳ ಕಷ್ಟ ಹೇಳತೀರದು. ಎಷ್ಟೋ ನಾಯಿಗಳು ಅಪಘಾತವಾಗಿ ಕಾಲು ಅಥವಾ ಸೊಂಟ ಮುರಿದುಕೊಂಡು ಒದ್ದಾಡುತ್ತಿರುತ್ತವೆ. ಅಂಥದ್ದೇ ಒಂದು ನಾಯಿ ಇದೀಗ ಕಾಲುಗಳನ್ನು ಪಡೆದುಕೊಂಡಿದೆ. ಆದರೆ ಅದು ಅಂತಿಂಥ ಕಾಲಲ್ಲ. ಪ್ರಸಿದ್ಧ ಮರ್ಸಿಡಿಸ್ ಬೆನ್ಜ್ ಸಂಸ್ಥೆಯೇ ಮಾಡಿಕೊಟ್ಟಿರುವ (Viral Video) ವೀಲ್‌ಚೇರ್!
ಹೌದು. ಬುನ್ನಿ ಹೆಸರಿನ ಸಾಕು ನಾಯಿಗೆ ಅಪಘಾತವಾಗಿ ಅದು ತನ್ನ ಹಿಂಬದಿಯ ಎರಡೂ ಕಾಲುಗಳನ್ನು ಕಳೆದುಕೊಂಡಿತ್ತು. ಅದೇ ಕಾರಣಕ್ಕೆ ಅದರ ಮಾಲೀಕರು ಕೂಡ ಆ ನಾಯಿಯನ್ನು ರಸ್ತೆಯ ಬದಿ ಬಿಟ್ಟು ಹೋಗಿದ್ದರು. ಆ ನಾಯಿಯನ್ನು ಹೆನ್ರಿ ಫ್ರೈಡ್‌ಮನ್ ಹೆಸರಿನ ವ್ಯಕ್ತಿ ರಕ್ಷಣೆ ಮಾಡಿದ್ದಾರೆ. ಅದರ ರಕ್ಷಣೆಯ ಕುರಿತಾದ ವಿಡಿಯೊವನ್ನು ಅವರ keepingfinn ಹೆಸರಿನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದೆ. ಹಾಗೆ ಹಂಚಿಕೊಳ್ಳಲಾದ ವಿಡಿಯೊ ವೈರಲ್ ಆಗಿದ್ದು, ಯಾರೋ ಒಬ್ಬರು, “ಈ ನಾಯಿಗೆ ಮರ್ಸಿಡಿಸ್ ಬೆನ್ಜ್ ವೀಲ್‌ಚೇರ್ ಕೊಡಿಸಬೇಕು” ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Viral Video: ಇದು ಕೆನ್ನೆಗೆ ಮುತ್ತನ್ನಿಟ್ಟು ಮುದ್ದಾಡುವ ಬೆಕ್ಕು; ವೈರಲ್ ಆಗ್ತಿದೆ ಈ ವಿಡಿಯೊ
ಅದನ್ನು ಗಂಭೀರವಾಗಿ ಪರಿಗಣಿಸಿದ ಹೆನ್ರಿ ಅವರು ಮರ್ಸಿಡಿಸ್ ಬೆನ್ಜ್ ಸಂಸ್ಥೆಯನ್ನು ಸಂಪರ್ಕಿಸಿದ್ದಾರೆ. ಆಗ ಅವರು ಬುನ್ನಿಗೆಂದು ವಿಶೇಷ ವೀಲ್‌ಚೇರ್ ಮಾಡಿಕೊಡಲು ನಿರ್ಧರಿಸಿದ್ದಾರೆ. ಅದರಂತೆ ಬುನ್ನಿಯನ್ನು ಮರ್ಸಿಡಿಸ್ ಶಾಖೆಯೊಂದಕ್ಕೆ ಕರೆದುಕೊಂಡು ಹೋಗಿ ಅಳತೆ ಕೊಡಲಾಗಿದೆ. ಸಂಸ್ಥೆಯು ಬುನ್ನಿಗಾಗಿ ವಿಶೇಷ ರೂಪದಲ್ಲಿ ವೀಲ್‌ಚೇರ್ ತಯಾರಿಸಿ ಉಡುಗೊರೆಯಾಗಿ ಕೊಟ್ಟಿದೆ.
ಮರ್ಸಿಡಿಸ್ ಬೆನ್ಜ್ ಕಚೇರಿಯೊಳಗೆ ಬುನ್ನಿಗೆ ಬುನ್ನಿಯ ಬೆನ್ಜ್ ವೀಲ್‌ಚೇರ್ ಅನ್ನು ತೊಡಿಸುವ ವಿಡಿಯೊವನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಎರಡೇ ಕಾಲಿನಲ್ಲಿ ಒದ್ದಾಡಿಕೊಂಡು ಓಡಾಡುತ್ತಿದ್ದ ಬುನ್ನಿ ವೀಲ್‌ಚೇರ್ ಹಾಕಿದ ನಂತರ ಬೇರೆ ನಾಯಿಗಳಂತೆ ಅರಾಮವಾಗಿ ಓಡಾಡಿಕೊಂಡಿರುವ ದೃಶ್ಯವನ್ನೂ ವಿಡಿಯೊದಲ್ಲಿ ತೋರಿಸಲಾಗಿದೆ.
ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. 29 ಲಕ್ಷಕ್ಕೂ ಅಧಿಕ ಮಂದಿ ವಿಡಿಯೊವನ್ನು ಲೈಕ್ ಮಾಡಿದ್ದಾರೆ. ಲಕ್ಷಾಂತರ ಮಂದಿ ವಿಡಿಯೊವನ್ನು ಶೇರ್ ಮಾಡಿದ್ದಾರೆ. ಹಾಗೆಯೇ ಲಕ್ಷಾಂತರ ಮಂದಿ ವಿಡಿಯೊಗೆ ಕಾಮೆಂಟ್‌ಗಳನ್ನು ಮಾಡಿದ್ದಾರೆ. “ಮಾನವೀಯತೆ ಇನ್ನೂ ಉಳಿದುಕೊಂಡಿದೆ ಎನ್ನುವುದಕ್ಕೆ ಇದೇ ಸಾಕ್ಷಿ” ಎಂದು ಜನರು ಬೆನ್ಜ್ ಸಂಸ್ಥೆಯನ್ನೂ ಹಾಗೂ ಬುನ್ನಿಯನ್ನು ಕಾಪಾಡಿದ ಹೆನ್ರಿಯನ್ನು ಕೊಂಡಾಡಲಾರಂಭಿಸಿದ್ದಾರೆ.