ನಾಯಿಗಳು ತಮಗಿಂತಲೂ ಚಿಕ್ಕ ಪ್ರಾಣಿಗಳಾದ ಬೆಕ್ಕು, ಅಳಿಲು, ಇಲಿಗಳನ್ನೆಲ್ಲ ಬೆನ್ನಟ್ಟಿ ಓಡುವುದನ್ನು ನೋಡಿದ್ದೇವೆ. ಕೆಲವೊಮ್ಮೆಯಂತೂ ಮರದ ಮೇಲಿನ ಪಕ್ಷಿಗಳನ್ನು ಹಿಡಿಯಲೂ ಇನ್ನಿಲ್ಲದ ಪ್ರಯತ್ನ ಮಾಡುತ್ತಿರುತ್ತವೆ. ಆದರೆ ಇಲ್ಲೊಂದು ನಾಯಿ ಅಳಿಲನ್ನು ಬೆನ್ನಟ್ಟಿಕೊಂಡು ಹೋಗಿ, ಪೀಕಲಾಟಕ್ಕೆ ಸಿಲುಕಿತ್ತು. ಅಳಿಲು ಓಡಿತು..ನಾಯಿ ಬೆನ್ನಟ್ಟಿತು. ಅಳಿಲು ಓಡೋಡಿ ಮರವೊಂದನ್ನು ಹತ್ತಿ ಕುಳಿತಿತು, ನಾಯಿಯೂ ತಾನೇನು ಮಾಡುತ್ತಿದ್ದೇನೆ ಎಂಬ ಅರಿವಿಲ್ಲದೆ ಹೋಗಿ ಆ ಮರವನ್ನು ಏರಿತು. ಆದರೆ ನಂತರ ಕೆಳಗೆ ಇಳಿಯಲಾಗದೆ ಅಲ್ಲೇ ಸಿಲುಕಿತು..!
ಯುಎಸ್ನ ಇಡಾಹೋ ಎಂಬಲ್ಲಿ ಇಂಥದ್ದೊಂದು ವಿನೋದಕಾರಿ ಸನ್ನಿವೇಶ ಉಂಟಾಗಿತ್ತು. ಅಳಿಲು ಮರ ಹತ್ತಿತು ಎಂದು ತಾನೂ ಮರ ಹತ್ತಿ ಪೀಕಲಾಟಕ್ಕೆ ಸಿಲುಕಿದ ನಾಯಿಯನ್ನು ಅಗ್ನಿಶಾಮಕದಳದ ಸಿಬ್ಬಂದಿಯೇ ಬಂದು ಕೆಳಗೆ ಇಳಿಸಿ, ಕಾಪಾಡಿದರು.
caldwellfireidaho ಎಂಬ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ನಾಲ್ಕು ಫೋಟೋಗಳನ್ನು ಶೇರ್ ಮಾಡಿಕೊಳ್ಳಲಾಗಿದೆ. ಅದರಲ್ಲಿ ನಾಯಿ ಮರದ ಮೇಲೆ ಹೋಗಿ, ಕೊಂಬೆಗಳ ಮಧ್ಯೆ ಕುಳಿತಿರುವುದನ್ನು, ಅಗ್ನಿಶಾಮಕ ದಳದ ಸಿಬ್ಬಂದಿ ಏಣಿಹಾಕಿ ಮರಹತ್ತಿದ್ದನ್ನು, ಬಳಿಕ ಆ ಶ್ವಾನವನ್ನು ಕೆಳಗೆ ಇಳಿಸಿ, ತಿನ್ನಲು ಆಹಾರಕೊಟ್ಟಿದ್ದನ್ನು ನೋಡಬಹುದು.
ಅಂದಹಾಗೇ, ಈ ನಾಯಿ ಕ್ರಿಶ್ಚಿಯಾನಾ ಡ್ಯಾನರ್ ಎಂಬುವರಿಗೆ ಸೇರಿದ್ದಾಗಿದೆ. ಮರದ ಮೇಲಿದ್ದ ನಾಯಿಯನ್ನು ಮರಳಿ ಪಡೆದ ಬಳಿಕ ಅವರು ಪ್ರತಿಕ್ರಿಯೆ ನೀಡಿ ‘ಈ ನನ್ನ ಶ್ವಾನ ಸ್ವಲ್ಪ ದುರ್ಬಲ. ಆದರೂ ಇಂಥ ಸಾಹಸಗಳಿಗೆ ಮುಂದಾಗುತ್ತದೆ. ಬೆಳಗ್ಗೆಯಿಂದಲೂ ಅಳಿಲುಗಳನ್ನು ಹಿಡಿಯಲು ಒಂದೇ ಸಮ ಪ್ರಯತ್ನ ಮಾಡುತ್ತಿದ್ದ. ಆದರೆ ನಂತರ ಹೀಗಾಯಿತು’ ಎಂದು ಹೇಳಿದ್ದಾರೆ.
ಇದನ್ನೂ ಓದಿ: Viral Video | ಕಾಮ್ ಡೌನ್ ಹಾಡಿಗೆ ಹೆಜ್ಜೆ ಹಾಕಿದ ಆಫ್ರಿಕಾದ ಮಕ್ಕಳು; ವೈರಲ್ ಆಯ್ತು ವಿಡಿಯೊ