ಲಕ್ನೋ: ಕೆಲವು ಬಟ್ಟೆಗಳು ನಮಗೆ ಕಂಫರ್ಟ್ ಎನಿಸಿಬಿಟ್ಟಿರುತ್ತವೆ. ಅವನ್ನೇ ಹಾಕಿಕೊಂಡು ಅಡ್ಡಾಡುವುದು ಕೂಡ ಅಭ್ಯಾಸವಾಗಿಬಿಟ್ಟಿರುತ್ತದೆ. ಈ ಕಂಫರ್ಟ್ ವಿಚಾರಕ್ಕೆ ಬಂದರೆ ಹೆಣ್ಣು ಮಕ್ಕಳಿಗೆ ನೈಟಿ, ಗಂಡು ಮಕ್ಕಳಿಗೆ ಲುಂಗಿ ಹೇಳಿ ಮಾಡಿಸಿದ್ದು ಎನ್ನಬಹುದು. ಅದಕ್ಕೆಂದೇ ಎಷ್ಟೋ ಜನ ಎಲ್ಲ ಕಡೆಗಳಲ್ಲೂ ನೈಟಿ, ಲುಂಗಿಯಲ್ಲೇ ಕಾಣಿಸಿಕೊಳ್ಳುತ್ತಾರೆ. ಆದರೆ ಉತ್ತರ ಪ್ರದೇಶದ ನೊಯ್ಡಾದ ಈ ಸೊಸೈಟಿಯಲ್ಲಿ ಇನ್ನು ಮುಂದೆ ಹಾಗೆ ಮಾಡುವಂತಿಲ್ಲ.
ಹೌದು. ನೊಯ್ಡಾದ ಹಿಮಸಾಗರ್ ಹೆಸರಿನ ಅಪಾರ್ಟ್‌ಮೆಂಟ್‌ನಲ್ಲಿ ಹೊಸದೊಂದು ನಿಯಮ ಮಾಡಲಾಗಿದೆ. ಅದರ ಪ್ರಕಾರ ಅಲ್ಲಿನ ನಿವಾಸಿಗಳು ನೈಟಿ ಅಥವಾ ಲುಂಗಿ ತೊಟ್ಟುಕೊಂಡು ಮನೆಯಿಂದ ಹೊರಗೆ ಓಡಾಡುವಂತಿಲ್ಲ. ” ಈ ಡ್ರೆಸ್ ಕೋಡ್ ಅನ್ನು ನೀವು ಪಾಲಿಸುತ್ತೀರಿ. ಆ ಮೂಲಕ ಬೇರೆಯವರಿಗೆ ಮುಜುಗರ ಉಂಟಾಗದಂತೆ ನೋಡಿಕೊಳ್ಳುತ್ತೀರಿ ಎಂದು ನಾವು ನಂಬಿರುತ್ತೇವೆ” ಎಂದು ಅಪಾರ್ಟ್‌ಮೆಂಟ್ ಕಮಿಟಿಯ ಮುಖ್ಯಸ್ಥರು ಸೂಚನೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Viral News: ಆನ್‌ಲೈನ್ ಮೀಟಿಂಗ್‌ಗೆ ಶರ್ಟ್ ಬಿಚ್ಚಿಕೊಂಡು ಹಾಜರಾದ ಸರ್ಕಾರಿ ಅಧಿಕಾರಿ ಸಸ್ಪೆಂಡ್
ಈ ರೀತಿಯ ವಿಶೇಷ ಆದೇಶ ಬರುತ್ತಿದ್ದಂತೆಯೇ ಆ ಸುದ್ದಿ ಅಪಾರ್ಟ್‌ಮೆಂಟ್‌ನ ಒಳಗೆ ಸುತ್ತಾಡುವುದರ ಜತೆ ಅಪಾರ್ಟ್‌ಮೆಂಟ್‌ನ ಹೊರಗೂ ಭಾರೀ ಸದ್ದು ಮಾಡುತ್ತಿದೆ. ಈ ಬಗ್ಗೆ ಜನರು ನಾನಾ ರೀತಿಯಲ್ಲಿ ಚರ್ಚೆಗಳನ್ನು ಮಾಡುವುದಕ್ಕೆ ಆರಂಭಿಸಿದ್ದಾರೆ.
ಇದೊಂದು ಒಳ್ಳೆಯ ವಿಚಾರ. ಎಷ್ಟೋ ಹೆಂಗಸರು ನೈಟಿ ಧರಿಸಿ ಬರುವುದರಿಂದ ನಮಗೆ ಮುಜುಗರವಾಗುತ್ತಿತ್ತು ಎಂದು ಕೆಲವರು ಹೇಳಿದ್ದಾರೆ. ಹಾಗೆಯೇ ಲುಂಗಿಯ ಬಗ್ಗೆಯೂ ಸಾಕಷ್ಟು ಕಮೆಂಟ್‌ಗಳು ಬಂದಿವೆ. ಇನ್ನು ಈ ಆದೇಶದ ಬಗ್ಗೆ ವಿರೋಧವೂ ಕಂಡುಬಂದಿದೆ. ಜನರಿಗೆ ಇಷ್ಟವಾದ ಬಟ್ಟೆಯನ್ನು, ಅವರಿಗೆ ಕಂಫರ್ಟ್ ಎನಿಸುವ ಬಟ್ಟೆಯನ್ನು ಅವರು ತೊಡುತ್ತಾರೆ. ಅದರ ಬಗ್ಗೆ ಪ್ರಶ್ನೆ ಮಾಡುವುದು ಸರಿಯಲ್ಲ ಎಂದು ಹೇಳಲಾಗುತ್ತಿದೆ. ಅಪಾರ್ಟ್‌ಮೆಂಟ್ ಎನ್ನುವುದು ಶಾಲೆ ಅಥವಾ ಆಫೀಸಲ್ಲದಿರುವುದರಿಂದ ಅಲ್ಲಿ ಡ್ರೆಸ್ ಕೋಡ್ ಸರಿಯಲ್ಲ ಎಂದು ಕೆಲವರು ಹೇಳುತ್ತಿದ್ದಾರೆ.