ವಿಮಾನದಲ್ಲಿ ಪ್ರಯಾಣಿಕನೊಬ್ಬ ಸೃಷ್ಟಿಸಿದ ಗೊಂದಲ, ಮಾಡಿದ ಅವಾಂತರದಿಂದಾಗಿ ಆ ವಿಮಾನ ತುರ್ತು ಲ್ಯಾಂಡ್ ಆಗಬೇಕಾಗಿ ಬಂತು. ಮದ್ಯಪಾನ ಮಾಡಿ ಫ್ಲೈಟ್ ಹತ್ತಿದ್ದ ಈ ಪ್ರಯಾಣಿಕ ಮಾರ್ಗ ಮಧ್ಯೆ ವಿಮಾನ ಪರಿಚಾರಕರ ಜತೆ ಅನುಚಿತವಾಗಿ ವರ್ತಿಸಿದ್ದ. ಅಷ್ಟೇ ಅಲ್ಲ, ಪರಿಚಾರಕನೊಬ್ಬನ ಕೈ ಬೆರಳನ್ನೂ ಕಚ್ಚಿದ್ದ. ವಿಡಿಯೊ ವೈರಲ್ ಆಗಿದೆ.
ಘಟನೆ ನಡೆದಿದ್ದು ಟರ್ಕಿಶ್ ಏರ್ಲೈನ್ಸ್ಗೆ ಸೇರಿದ ವಿಮಾನದಲ್ಲಿ. ಟರ್ಕಿಯ ಇಸ್ತಾಂಬುಲ್ನಿಂದ ಜಕಾರ್ತ್ಗೆ ಈ ಫ್ಲೈಟ್ ಹೋಗುತ್ತಿತ್ತು. ಅಕ್ಟೋಬರ್ 12ರಂದು ನಡೆದ ಈ ಘಟನೆ ಬೆಳಕಿಗೆ ಬಂದಿದ್ದು, ಅದರ ವಿಡಿಯೋ ಟ್ವಿಟರ್ನಲ್ಲಿ ವೈರಲ್ ಆದಾಗ. ಮೊಹಮ್ಮದ್ ಹೋಹ್ನ್ ಜೈಜ್ ಬೌಡೆವಿಜಿನ್ (48) ಎಂಬಾತ ಹೀಗೆಲ್ಲ ಅವಾಂತರ ಸೃಷ್ಟಿಸಿದಾತ. ಈತ ಇಂಡೋನೇಷಿಯಾದ ಬಾಟಿಕ್ ಏರ್ ಸಂಸ್ಥೆಯಲ್ಲಿ ಪೈಲಟ್. ಇಸ್ತಾಂಬುಲ್ನಿಂದ ಜಕಾರ್ತ್ಗೆ Boeing 777 ವಿಮಾನದಲ್ಲಿ ತೆರಳುತ್ತಿದ್ದ. ಕುಡಿದಿದ್ದ ಇವನು ಮಾಡುತ್ತಿದ್ದ ಗಲಾಟೆಯನ್ನು ನೋಡಿದ ವಿಮಾನ ಪರಿಚಾರಕನೊಬ್ಬ ಆತನನ್ನು ಸಮಾಧಾನ ಮಾಡಲು ಬಳಿಗೆ ಹೋಗಿದ್ದ. ಆದರೆ ಜೈಜ್ ಬೌಡೆವಿಜಿನ್ ಪರಿಚಾರಕನ ಕೈ ಕಚ್ಚಿ, ಗಲಾಟೆಯನ್ನು ಮತ್ತಷ್ಟು ಹೆಚ್ಚಾಗಿಸಿದ. ಅದನ್ನು ನೋಡಿದ ಇನ್ನಿತರರು ಆತನ ಬಳಿ ಧಾವಿಸಿ ಅವನನ್ನು ಸಮಾಧಾನ ಮಾಡಲು ಪ್ರಯತ್ನ ಮಾಡಿದರು. ಆದರೆ ಇವನ ಅಮಲು ಅದೆಷ್ಟರ ಮಟ್ಟಿಗೆ ಇತ್ತೆಂದರೆ, ಆ ಪರಿಚಾರಕರಿಗೆ ಹೊಡೆದಿದ್ದಾನೆ. ಆಗ ಅವರು ತಿರುಗಿ ಬೌಡೆವಿಜಿನ್ಗೆ ಒದ್ದಿದ್ದಾರೆ. ಈ ವಿಡಿಯೋ ವ್ಯಾಪಕವಾಗಿ ವೈರಲ್ ಆಗಿದೆ.
ಈ ಕಾರಣಕ್ಕೆ ಫ್ಲೈಟ್ ಮೆಡಾನ್ನ ಕುಲಾನಮು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ತುರ್ತು ಲ್ಯಾಂಡ್ ಆಗಿತ್ತು. ಬಳಿಕ ಅಲ್ಲಿಂದ ಹೊರಟು ಜಕಾರ್ತ ತಲುಪಿದೆ. ನಿಗದಿತ ಸಮಯಕ್ಕಿಂತ ಮೂರು ಗಂಟೆ ತಡವಾಗಿ ಜಕಾರ್ತಕ್ಕೆ ತೆರಳಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: Viral Video | ವೈದ್ಯರನ್ನೇ ಗಾಬರಿ ಬೀಳಿಸಿದ ಕುಡುಕ; ಅಮಲು ಇಳಿದ ಮೇಲೆ ಸತ್ಯ ಒಪ್ಪಿಕೊಂಡ !