Site icon Vistara News

Viral Video: ‘ಪ್ರೀತಿನೇ ಆ ದ್ಯಾವ್ರು ತಂದ..’; ಕಾಯಿಲೆ ಪೀಡಿತ ಪತ್ನಿಗೆ ತುತ್ತುಣಿಸಿದ ಅಜ್ಜ, ಮನಮಿಡಿಯುವ ದೃಶ್ಯವಿದು

Elderly Man Feeding chapati to his Wife Viral Video

#image_title

ಎಷ್ಟೇ ದುಡ್ಡಿರಲಿ, ಶ್ರೀಮಂತಿಕೆ ಇರಲಿ, ಕಡು ಬಡತನವೇ ಇರಲಿ..‘ಪ್ರೀತಿ’ ಮನುಷ್ಯನಿಗೆ ಬೇಕು. ನನ್ನವರು-ತನ್ನವರೆಂಬ ಪಾಶದಲ್ಲಿ ಆತ ಕಟ್ಟಿಕೊಂಡಿರಲೇಬೇಕು. ‘ನನ್ನದು ಪವಿತ್ರ ಪ್ರೀತಿ, ಸತ್ಯವಾದ ಪ್ರೀತಿ’ ಎಂದು ಪ್ರತಿಯೊಬ್ಬರೂ ಮಾತಿನಲ್ಲಿ ಹೇಳಿಕೊಳ್ಳುತ್ತಾರೆ. ಆದರೆ ವರ್ತನೆಯಲ್ಲಿ?..’-ಇದು ಪ್ರಶ್ನೆಯಾಗಿಯೇ ಉಳಿದುಬಿಡಲಿ.. ಇದಕ್ಕೆ ಉತ್ತರ ಕಂಡುಕೊಳ್ಳುವ ಬದಲು ಸದ್ಯ ನಾವೀಗ ಒಂದು ವೃದ್ಧ ಜೋಡಿಯ ಮುಗ್ಧ, ಪವಿತ್ರ ಪ್ರೀತಿಯನ್ನು ಕಣ್ಣಾರೆ ಕಂಡುಬಿಡೋಣ…

ಸಾಮಾಜಿಕ ಮಾಧ್ಯಮದಲ್ಲಿ ವೃದ್ಧ ದಂಪತಿಯ ವಿಡಿಯೊವೊಂದು ವೈರಲ್ ಆಗುತ್ತಿದೆ. ಅದರಲ್ಲಿ ವೃದ್ಧ ಪತಿ, ತನ್ನ ಅನಾರೋಗ್ಯ ಪೀಡಿತ ಪತ್ನಿಗೆ ಚಪಾತಿ ತಿನ್ನಿಸುತ್ತಿರುವುದನ್ನು ನೋಡಬಹುದು. ಗಾಯಕ ರಾಕೇಶ್​ ಮೈನಿ ಅವರು ಏಪ್ರಿಲ್​ 12ರಂದು ತಮ್ಮ ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೊ ಶೇರ್ ಮಾಡಿಕೊಂಡಿದ್ದಾರೆ. ‘ಅದೊಂದು ಸಂಚರಿಸುತ್ತಿರುವ ರೈಲು. ದಂಪತಿ ತಮ್ಮ ಸೀಟ್​ನಲ್ಲಿ ಕುಳಿತಿದ್ದಾರೆ. ಆ ಅಜ್ಜಿ ಶಾಲು ಹೊದ್ದು ಕುಳಿತುಕೊಂಡಿದ್ದರೆ, ಅಜ್ಜ ಆಕೆಗೆ ಚಪಾತಿ ತುತ್ತು ಮಾಡಿ ತಿನ್ನಿಸುತ್ತಿದ್ದಾರೆ. ಅದೇನೋ ಮಾತನಾಡುತ್ತ, ಅಜ್ಜಿ ಬಾಯಿಗೆ ಇಟ್ಟ ಚಪಾತಿ ಚೂರನ್ನು ಅಗೆದು ನುಂಗುವವರೆಗೂ ಸಮಾಧಾನವಾಗಿ ಕುಳಿತು ಮತ್ತೆ ತುತ್ತಿಡುತ್ತಿದ್ದಾರೆ. ಕೊನೆಯಲ್ಲಿ ಆಕೆಯ ಬಾಯಿಯನ್ನೂ ಒರೆಸುತ್ತಾರೆ. ಅದೆಷ್ಟು ಪ್ರೀತಿ ತುಂಬಿದ ಕ್ಷಣ ಅದು..!

ವಿಡಿಯೊ ಶೇರ್ ಮಾಡಿದ ಗಾಯಕ ಮೈನಿ, ‘ರೈಲಿನಲ್ಲಿ ಈ ದಂಪತಿಯನ್ನು ನೋಡಿದೆ. ಅವರು ತಮ್ಮ ಅನಾರೋಗ್ಯ ಪೀಡಿತ ಪತ್ನಿಯ ಕೈ ಹಿಡಿದೆ ಇರುತ್ತಿದ್ದರು. ಆಕೆಗೆ ತಿಂಡಿ ತಿನ್ನಿಸುತ್ತಿದ್ದರು. ಟಾಯ್ಲೆಟ್​ಗೆ ಕರೆದೊಯ್ಯುತ್ತಿದ್ದರು. ರಾತ್ರಿ ತಮ್ಮ ಪತ್ನಿ ಮಲಗಲು ಇವರೇ ವ್ಯವಸ್ಥೆ ಮಾಡಿಕೊಟ್ಟರು. ಇದೇ ನಿಜವಾದ ಪ್ರೀತಿ ಮತ್ತು ಒಡನಾಟ. ನಾನಂತೂ ಇಡೀ ದಿನ ಅವರನ್ನು ನೋಡುತ್ತಿದ್ದೆ. ನನ್ನ ಮನಸು ಕರಗಿಹೋಯಿತು. ಕಣ್ಣುಗಳು ಗೊತ್ತಿಲ್ಲದಂತೆ ತೇವಗೊಂಡವು’ ಎಂದು ಬರೆದುಕೊಂಡಿದ್ದಾರೆ. ಅಂದಹಾಗೇ, ವಿಡಿಯೊಕ್ಕೆ 7.7 ಮಿಲಿಯನ್​​ (77 ಲಕ್ಷ)ಗಳಷ್ಟು ವೀಕ್ಷಣೆ ಬಂದಿದೆ. ನೆಟ್ಟಿಗರೂ ಕೂಡ ಅತ್ಯಂತ ಮೆಚ್ಚುಗೆ ವ್ಯಕ್ತಪಡಿಸಿ, ಕಮೆಂಟ್​ಗಳನ್ನು ಮಾಡಿದ್ದಾರೆ.

Exit mobile version