ಕರ್ಮ ತುಂಬ ಕಾಯಿಸುವುದಿಲ್ಲ. ತಾನೇನು ಕೊಡಬೇಕೋ ಅದನ್ನು ಕೊಟ್ಟೇ ಕೊಡುತ್ತದೆ. ಕೆಲವೊಮ್ಮೆಯಂತೂ ತತ್ಕ್ಷಣಕ್ಕೇ ಕರ್ಮಫಲ ಉಣ್ಣಬೇಕಾಗುತ್ತದೆ. ನೀವು ಈಗ ವೈರಲ್ ಆಗುತ್ತಿರುವ ವಿಡಿಯೊದಲ್ಲಿ ಅದನ್ನು ತಾಜಾ ಆಗಿ ನೋಡಬಹುದು. ಇಲ್ಲೊಬ್ಬ ಹಿರಿಯ ನಾಗರಿಕ, ರಸ್ತೆ ದಾಟುತ್ತಿದ್ದಾಗ ಸುಮ್ಮನೆ ಕಾರು ಚಾಲಕನೊಬ್ಬನತ್ತ ಕೋಪ ತೋರಿಸಿ, ಅನುಚಿತ ವರ್ತನೆ ತೋರಿಸಿದ್ದಾರೆ ಮತ್ತು ಅದಕ್ಕೆ ತಕ್ಕ ಫಲವನ್ನು ಅಲ್ಲೇ ಪಡೆದಿದ್ದಾರೆ.
ಇದ್ಯಾವ ದೇಶದಲ್ಲಿ ನಡೆದ ಘಟನೆ ಗೊತ್ತಿಲ್ಲ. ಹಿರಿಯ ನಾಗರಿಕರೊಬ್ಬರು ತನ್ನ ನಾಯಿಯೊಟ್ಟಿಗೆ ಜೀಬ್ರಾ ಕ್ರಾಸ್ ಗುಂಟ ಸಾಗಿ ರಸ್ತೆ ದಾಟುತ್ತಿದ್ದರು. ಆಗ ಅಲ್ಲಿಗೆ ವಾಹನವೊಂದು ಬಂದಿದೆ. ಅಲ್ಲಿ ಪಾದಚಾರಿಗಳು ನಡೆಯಲು ಸಿಗ್ನಲ್ ಹಾಕಿರಲಿಲ್ಲ. ಹಾಗಿದ್ದಾಗ್ಯೂ ಆ ವ್ಯಕ್ತಿ ರಸ್ತೆ ದಾಟುತ್ತಿದ್ದ. ಅವರಿಗಾಗಿ ವಾಹನದ ಚಾಲಕ ತನ್ನ ವಾಹನ ನಿಲ್ಲಿಸಿ, ಅನುವು ಮಾಡಿಕೊಟ್ಟಿದ್ದಾನೆ. ಆದರೂ, ಹಿರಿಯ ನಾಗರಿಕ ಆ ವಾಹನ ಚಾಲಕನೆಡೆಗೆ ಅಸಭ್ಯವಾಗಿ ಕೈ ತೋರಿಸುತ್ತ, ಅವನಿಗೆ ಏನೋ ನಿಂದನಾತ್ಮಕವಾಗಿ ಹೇಳುತ್ತ ರಸ್ತೆ ದಾಟಿದ್ದಾರೆ. ಚಾಲಕನತ್ತ ಮುಖಮಾಡಿಕೊಂಡು, ಕೆಟ್ಟದಾಗಿ ವರ್ತಿಸುತ್ತ ಹೋದ ಅವರು ರಸ್ತೆಯ ಇನ್ನೊಂದು ಪಕ್ಕದಲ್ಲಿದ್ದ ಸಿಗ್ನಲ್ ಕಂಬಕ್ಕೆ ತಲೆ ಹೊಡೆದುಕೊಂಡಿದ್ದಾರೆ. ಆಗ ವಾಹನದಲ್ಲಿ ಕುಳಿತಿದ್ದವರು ದೊಡ್ಡದಾಗಿ ನಗುತ್ತಾರೆ. ಇದರಿಂದ ಮುಜುಗರಕ್ಕೀಡಾದ ಆ ವ್ಯಕ್ತಿ ಇನ್ನಷ್ಟು-ಮತ್ತಷ್ಟು ನಿಂದಿಸಿ, ಅಲ್ಲಿಂದ ಹೋಗಿದ್ದಾರೆ. ವಿಡಿಯೊ ನೋಡಿದ ಜನರು ಹಿರಿಯ ನಾಗರಿಕನಿಗೇ ಬೈದಿದ್ದಾರೆ. ಇದೇ ನೋಡಿ ‘ಕರ್ಮ ಫಲ’ ಎಂದಿದ್ದಾರೆ.