ಸಾಧನೆಗೆ-ಪ್ರೀತಿಗೆ ವಯಸ್ಸಿನ ಮಿತಿಯೇ ಇಲ್ಲ. ಅದನ್ನು ಹಲವರು-ಹಲವು ಬಾರಿ ಸಾಕ್ಷೀಕರಿಸಿದ್ದಾರೆ. 50 ವಯಸ್ಸು ದಾಟಿದ ಮೇಲೆ ಯಾವುದೋ ಒಂದು ಸಾಧನೆ-ಸಾಹಸದ ಮೂಲಕ ಪ್ರಸಿದ್ಧಿಯಾದವರು ಅದೆಷ್ಟು ಜನರು ಇಲ್ಲ ಹೇಳಿ? ಆ ಸಾಲಿಗೆ ಈಗ ಇಲ್ಲೊಬ್ಬರು 67ವರ್ಷದ ಮಹಿಳೆ ಸೇರಿದ್ದಾರೆ. ಅದೆಷ್ಟೋ ಜನರು ತಮ್ಮ 67ನೇ ವಯಸ್ಸು ಎಂದರೆ, ಬದುಕು ಇನ್ನೇನಿದೆ ಎಂಬ ಭಾವದಲ್ಲಿಯೇ ಇರುತ್ತಾರೆ. ಆದರೆ ಈ ಮಹಿಳೆ ಹಾಗಲ್ಲ, ಸೀರೆಯುಟ್ಟು, ಹಗ್ಗದ ಮೇಲೆ ಸೈಕ್ಲಿಂಗ್ ಮಾಡಿ, ನೋಡುಗರ ಹುಬ್ಬೇರುವಂತೆ ಮಾಡಿದ್ದಾರೆ. ವಿಡಿಯೊ ಎಲ್ಲೆಡೆ ವೈರಲ್ ಆಗುತ್ತಿದೆ.
Shy Nu ಎಂಬ ಇನ್ಸ್ಟಾಗ್ರಾಂ ಅಕೌಂಟ್ನಲ್ಲಿ ಈ ವಿಡಿಯೊ ಪೋಸ್ಟ್ ಆಗಿದೆ. ಹಳದಿ ಸೀರೆಯುಟ್ಟ ಮಹಿಳೆಯ ತಲೆಕೂದಲು ಬೆಳ್ಳಗಾಗಿದೆ. ಬಾಯಲ್ಲಿ ಏನೋ ಅಗೆಯುತ್ತ, ಬಿಳಿ ಬಣ್ಣದ ಹೆಲ್ಮೆಟ್ ಧರಿಸಿ, ಸ್ಟೈಲೀಶ್ ಆಗಿ ಹಗ್ಗದ ಮೇಲೆ ಸೈಕಲ್ ಹೊಡೆದಿದ್ದಾರೆ. ಈ ಮೂಲಕ ತಮ್ಮ ಬಹುದಿನಗಳ ಆಸೆಯನ್ನು ಪೂರೈಸಿಕೊಂಡಿದ್ದಾರೆ. ಈ ವಿಡಿಯೊ ಎರಡು ದಿನಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗಿದ್ದು, 200ಕ್ಕೂ ಹೆಚ್ಚು ಮಂದಿ ಲೈಕ್ಸ್ ಕೊಟ್ಟಿದ್ದಾರೆ. ಅನೇಕರು ಶೇರ್ ಮಾಡಿಕೊಂಡಿದ್ದಾರೆ. ಮಹಿಳೆಯ ಜೀವನೋತ್ಸಾಹವನ್ನು ನೆಟ್ಟಿಗರು ಫುಲ್ ಹೊಗಳುತ್ತಿದ್ದಾರೆ.