ಮನುಷ್ಯರು ನಾವು, ನಮ್ಮಷ್ಟು ಸ್ಮಾರ್ಟ್, ತಿಳಿವಳಿಕೆ ಇರುವವರು ಇನ್ನೊಬ್ಬರು ಇಲ್ಲ ಎಂದು ಭಾವಿಸುತ್ತೇವೆ. ಆದರೆ ವಾಸ್ತವ ಹಾಗಿಲ್ಲ. ಪ್ರಾಣಿಗಳು ಏನೂ ಕಡಿಮೆಯಿಲ್ಲ. ಆನೆ, ನಾಯಿಗಳಂಥ ಪ್ರಾಣಿಗಳು ಅದೆಷ್ಟು ಸಖತ್ ಸ್ಮಾರ್ಟ್ ಎಂಬುದನ್ನು ನಾವು ಈಗಾಗಲೇ ಹಲವು ಬಾರಿ ನೋಡಿದ್ದೇವೆ. ಅವಕ್ಕೂ ಸಂವೇದನೆ ಇದೆ, ಸೂಕ್ಷ್ಮತೆ ಅರ್ಥವಾಗುತ್ತದೆ ಎಂಬುದನ್ನು ಪ್ರಮಾಣೀಕರಿಸುವ ವಿಡಿಯೊಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿರುತ್ತವೆ.
ಈಗ ಭಾರತೀಯ ಅರಣ್ಯ ಸೇವಾಧಿಕಾರಿ (ಐಎಫ್ಎಸ್) ಪರ್ವೀನ್ ಕಾಸ್ವಾನ್ ಅವರು ಟ್ವಿಟರ್ನಲ್ಲಿ ವಿಡಿಯೊವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಆನೆಯೊಂದು ವಿದ್ಯುತ್ ತಂತಿ ಬೇಲಿಯನ್ನು ಅದೆಷ್ಟು ಹುಷಾರಾಗಿ ಮುರಿದು, ದಾಟುತ್ತದೆ ಎಂಬುದನ್ನು ವಿಡಿಯೊದಲ್ಲಿ ನೋಡಬಹುದು. ‘ಅದೊಂದು ವಿದ್ಯುತ್ ತಂತಿ, ತಾನದನ್ನು ಬೇಕಾಬಿಟ್ಟಿ ಸ್ಪರ್ಶಿಸಿದರೆ ಶಾಕ್ ಹೊಡೆಯುವ ಸಾಧ್ಯತೆ ಇದೆ ಎಂದು ಅರಿತ ಆನೆಯೊಂದು ಮೊದಲು ಒಂದು ಕಾಲಿನಿಂದ ತಂತಿಯನ್ನು ನಿಧಾನಕ್ಕೆ ಮುಟ್ಟಿ, ಅದರಲ್ಲಿ ವಿದ್ಯುತ್ ಪ್ರವಹಿಸುತ್ತಿದೆಯಾ ಎಂಬುದನ್ನು ಪರಿಶೀಲನೆ ಮಾಡಿ ನೋಡಿಕೊಳ್ಳುತ್ತದೆ. ಅಲ್ಲಿ ವಿದ್ಯುತ್ ಪ್ರವಹಿಸುತ್ತಿಲ್ಲ ಎಂಬುದು ಗೊತ್ತಾಗುತ್ತಿದ್ದಂತೆ, ಆ ಬೇಲಿಯ ಮರದ ಕಂಬವನ್ನು ಮುರಿದು, ಅಲ್ಲಿಂದ ರಸ್ತೆ ದಾಟಿ ಹೋಗುತ್ತದೆ.’
ಇದೊಂದು ಹಳೇ ವಿಡಿಯೊ. ಮೊಟ್ಟಮೊದಲು ವೈರಲ್ ಆಗಿದ್ದು 2019ರಲ್ಲಿ. ಈಗ ಮತ್ತೆ ಪರ್ವೀನ್ ಕಾಸ್ವಾನ್ ಶೇರ್ ಮಾಡಿಕೊಳ್ಳುವ ಮೂಲಕ ವಿಡಿಯೊವನ್ನು ವೈರಲ್ ಮಾಡಿದ್ದಾರೆ. ನೆಟ್ಟಿಗರಂತೂ ಆನೆಯ ಸ್ಮಾರ್ಟ್ನೆಸ್ಗೆ ಫಿದಾ ಆಗಿದ್ದಾರೆ. ಬುದ್ಧಿವಂತ ಆನೆ ಎಂದು ಒಬ್ಬರು ಕಮೆಂಟ್ ಮಾಡಿದ್ದರೆ, ಇನ್ನೊಬ್ಬರು, ‘ನಾವು ಆನೆಗಳನ್ನು ಎಂದಿಗೂ ಹಗುರವಾಗಿ ಭಾವಿಸಬಾರದು, ದೇಹದಲ್ಲೂ-ಬುದ್ಧಿಯಲ್ಲೂ ಅವುಗಳ ತೂಕ ದೊಡ್ಡದು’ ಎಂದು ಇನ್ನೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: Viral video | ಮದುವೆ ಚಿತ್ರೀಕರಣದಲ್ಲಿ ಕೆರಳಿ ಮಾವುತನ ಮೇಲೆರಗಿದ ಗುರುವಾಯೂರು ಆನೆ!