ದೊಡ್ಡದೇಹ ಹೊಂದಿರುವ ಆನೆಗಳು ಅಷ್ಟೇ ಮುದ್ಮುದ್ದು. ಮಾರುದ್ದ ಸೊಂಡಿಲಿನಲ್ಲೇ ಕಿತಾಪತಿ ಮಾಡುತ್ತ, ಪುಟ್ಟನೆಯ ಬಾಲ ಅಲ್ಲಾಡಿಸುತ್ತ, ದೊಡ್ಡ ಹೊಟ್ಟೆಯನ್ನು ಕುಣಿಸುತ್ತ ಅವು ನಡೆದಾಡುವುದು, ಮನುಷ್ಯರೊಂದಿಗೆ ಅವು ಬೆರೆಯುವ ಪರಿಯೆಲ್ಲ ನಯನಾಕರ್ಷಕ. ರೊಚ್ಚಿದ್ದರೆ, ಸಿಟ್ಟಾದರೆ ಅವುಗಳನ್ನು ನಿಯಂತ್ರಿಸುವುದೂ ಅಷ್ಟೇ ಕಷ್ಟ. ಭಾರತ ಸೇರಿ, ವಿಶ್ವದ ಇನ್ನಿತರ ದೇಶಗಳಲ್ಲೂ ಆನೆ ಮತ್ತು ಮನುಷ್ಯರ ನಡುವಿನ ಸ್ನೇಹ ಇದ್ದೇ ಇದೆ. ಇವು ಪೂರ್ಣವಾಗಿ ಕಾಡುಪ್ರಾಣಿಗಳೂ ಅಲ್ಲ, ಸಂಪೂರ್ಣವಾಗಿ ಸಾಕು ಪ್ರಾಣಿಗಳೂ ಆಗಿರುವುದಿಲ್ಲ.
ಇದೀಗ ಆನೆಯೊಂದರ ತುಂಟಾಟದ ವಿಡಿಯೊ ವೈರಲ್ ಆಗಿದೆ. ಆನೆ ತನ್ನ ಒಡೆಯನ ಕೈಯಲ್ಲಿದ್ದ ಕಲ್ಲಂಗಡಿ ಹಣ್ಣನ್ನು ಕಿತ್ತುಕೊಂಡು ತಿನ್ನುವ ವಿಡಿಯೊ ಬಾರಿ ಮಜವಾಗಿದೆ. ಹಳದಿ ಶರ್ಟ್ ತೊಟ್ಟ ಯುವಕನೊಬ್ಬ ಕುರ್ಚಿಯ ಮೇಲೆ ಕುಳಿತು, ಮಡಿಲಲ್ಲಿ ಕಲ್ಲಂಗಡಿ ಹಣ್ಣನ್ನು ಇಟ್ಟುಕೊಂಡು ತಿನ್ನುತ್ತಿರುತ್ತಾನೆ. ಬಿರು ಬೇಸಿಗೆಯಾಗಿದ್ದರಿಂದ ಆತ ತಂಪಾದ ಹಣ್ಣನ್ನು ಸವಿಯುತ್ತ ಕುಳಿತಿದ್ದರೆ, ಅಲ್ಲಿಗೆ ಬಂದ ಆನೆ ತನ್ನ ಸೊಂಡಿಲಿನಲ್ಲಿ ಆ ಕಲ್ಲಂಗಡಿ ಹಣ್ಣನ್ನು ಎತ್ತಿಕೊಂಡು ಬಾಯಿಗೆ ಹಾಕಿಕೊಂಡಿದೆ. ಪೂರ್ತಿಯಾಗಿ ಗುಳುಂ ಮಾಡಿದೆ. ಪ್ರಾರಂಭದಲ್ಲಿ ತಡೆಯಲು ಪ್ರಯತ್ನಿಸಿದಂತೆ ನಟಿಸುವ ಯುವಕ, ಬಳಿಕ ನಗುತ್ತಾನೆ. ಅಷ್ಟರಲ್ಲಿ ಆನೆ ತನ್ನ ಸೊಂಡಿಲಿನ ತುದಿಯನ್ನು ಅವನ ಕೆನ್ನೆಗೆ ಒತ್ತಿ ಹಿಡಿಯುತ್ತದೆ. ’ಇಷ್ಟು ಬಿಸಿಲು-ಸೆಖೆ ಇರುವಾಗ ಅದು ಹೇಗೆ ನೀನೋಬ್ಬನೇ ಕಲ್ಲಂಗಡಿ ಹಣ್ಣು ತಿನ್ನುತ್ತೀಯಾ’ ಎಂದು ಆನೆ ಕೇಳಿದಂತೆ ಇದೆ. ವಿಡಿಯೊವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
ಸ್ವಲ್ಪ ದಿನಗಳ ಹಿಂದೆ ಆನೆಯೊಂದು, ಕಬ್ಬು ಒಯ್ಯುತ್ತಿದ್ದ ಟ್ರಕ್ವೊಂದನ್ನು ನಿಲ್ಲಿಸಿ ತನಗೆ ಬೇಕಾದಷ್ಟು ಕಬ್ಬನ್ನು ಎತ್ತಿಕೊಂಡು ತಿಂದ ವಿಡಿಯೊವೊಂದು ವೈರಲ್ ಆಗಿತ್ತು. ಟ್ರಕ್ ಹೋಗುತ್ತಿದ್ದರೆ, ಆನೆ ಅದಕ್ಕೆ ಅಡ್ಡಬಂದಿತ್ತು. ಡ್ರೈವರ್ ವಾಹನವನ್ನು ನಿಲ್ಲಿಸುತ್ತಿದ್ದಂತೆ ಒಂದಷ್ಟು ಕಬ್ಬನ್ನು ತೆಗೆದುಕೊಂಡು, ಬಳಿಕ ದಾರಿಬಿಟ್ಟಿತ್ತು. ಈ ವಿಡಿಯೊ ಕೂಡ ಸಖತ್ ಕ್ಯೂಟ್ ಆಗಿದ್ದು, ವೈರಲ್ ಆಗಿತ್ತು.