ನವ ದೆಹಲಿ: ಮಾನವ ಮತ್ತು ಆನೆಗಳ (Elephant) ಮಧ್ಯೆ ನೂರಾರು ವರ್ಷಗಳಿಂದ ಉತ್ತಮ ಬಾಂಧವ್ಯವಿದೆ. ಬುದ್ಧಿವಂತ ಪ್ರಾಣಿ ಎನಿಸಿಕೊಂಡಿರುವ ಆನೆ ಕೆಲವೊಮ್ಮೆ ಮನುಷ್ಯರ ಭಾವನೆಗಳಿಗೆ ಸ್ಪಂದಿಸುತ್ತವೆ. ಮಾವುತರ ಜತೆ ಅವು ಉತ್ತಮ ಸಂಬಂಧವನ್ನು ಬೆಳೆಸಿಕೊಳ್ಳುತ್ತವೆ. ಅದಕ್ಕೆ ಸಾಕ್ಷಿಯಾಗಿದೆ ಈ ವಿಡಿಯೊ. ಮಾವುತ ಹೋಗದಂತೆ ಆನೆಯೊಂದು ಆತನನ್ನು ತಡೆಯುವ ಈ ದೃಶ್ಯ ಅನೇಕರ ಗಮನ ಸೆಳೆದಿದೆ. ಮಾವುತ ಹೋಗದಂತೆ ತನ್ನ ಸೊಂಡಿಲು ಬಳಸಿ ತಡೆಯುವ ದೃಶ್ಯ (Viral Video) ನೋಡಿದರೆ ಖಂಡಿತಾ ನಿಮ್ಮ ಹೃದಯ ತುಂಬಿ ಬರಲಿದೆ.
ತಮ್ಮ ಎಕ್ಸ್ ಖಾತೆಯಲ್ಲಿ ಈ ಹೃದಯಸ್ಪರ್ಶಿ ವಿಡಿಯೊವನ್ನು ಹಂಚಿಕೊಂಡಿರುವ ಇಂಡಿಯನ್ ರೈಲ್ವೆ ಅಕೌಂಟ್ಸ್ ಸರ್ವೀಸ್ (IRAS) ಅಧಿಕಾರಿ ಅನಂತ್ ರೂಪನಗುಡಿ, ʼಆನೆ ಮತ್ತು ಮಾವುತನ ಸಂಬಂಧ, ಆನೆ ಆತನನ್ನು ಹೋಗಲು ಬಿಡುತ್ತಿಲ್ಲ ʼಎಂದು ಬರೆದುಕೊಂಡಿದ್ದಾರೆ.
The bonding between the elephant and it's caretaker – it won't just let him go! ❤️ #elephants #bonding @Gannuuprem pic.twitter.com/AOkTmi7ceJ
— Ananth Rupanagudi (@Ananth_IRAS) September 27, 2023
ವಿಡಿಯೊದಲ್ಲೇನಿದೆ?
ರಸ್ತೆಯೊಂದರಲ್ಲಿ ಆನೆ ಮಾವುತ ತನ್ನ ಸ್ನೇಹಿತನೊಂದಿಗೆ ಹೋಗದಂತೆ ತಡೆಯುವ ದೃಶ್ಯದ ಮೂಲಕ ಈ ವಿಡಿಯೊ ಆರಂಭವಾಗುತ್ತದೆ. ಆತ ತನ್ನ ಸ್ನೇಹಿತನ ದ್ವಿಚಕ್ರ ವಾಹನದಲ್ಲಿ ಕುಳಿತುಕೊಳ್ಳಲು ಮುಂದಾಗುತ್ತಾನೆ. ಆದರೆ ಆತನನ್ನೇ ಹಿಂಬಾಲಿಸುವ ಆನೆ ತನ್ನ ಸೊಂಡಿಲು ಬಳಸಿ ಸೀಟ್‌ನಿಂದ ಕೆಳಗೆ ಇಳಿಸುತ್ತದೆ. ಆತನನ್ನು ಕರೆದುಕೊಂಡು ಹೋಗಲು ತನ್ನ ಬಾಲದ ಸಹಾಯವನ್ನೂ ಆನೆ ಪಡೆದುಕೊಳ್ಳುತ್ತದೆ. ಆತನಿಗೆ ನೋವಾಗದಂತೆ ಆನೆ ಸೊಂಡಿಲಿನಿಂದ ಎಳೆದುಕೊಂಡು ಹೋಗುವ ದೃಶ್ಯ ನೋಡುಗರನ್ನು ಮೋಡಿ ಮಾಡುತ್ತದೆ. ಕೊನೆಗೆ ಆತ ನಿರ್ವಾಹವಿಲ್ಲದೆ ಆನೆ ಜತೆ ಹೆಜ್ಜೆ ಹಾಕುತ್ತಾನೆ. ಸೆಪ್ಟಂಬರ್ 27ರಂದು ಪೋಸ್ಟ್ ಮಾಡಲಾದ ಈ ವಿಡಿಯೊವನ್ನು ಈಗಾಗಲೇ 36 ಸಾವಿರಕ್ಕಿಂತಲೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅನೇಕರು ಕಮೆಂಟ್ ಮೂಲಕ ತಮ್ಮ ಮೆಚ್ಚುಗೆ ಸೂಚಿಸಿದ್ದಾರೆ.
ಇದನ್ನೂ ಓದಿ: Viral video: ಲೈವ್ ಟಿವಿ ಚರ್ಚೆಯಲ್ಲಿ ಹೊಡೆದಾಡಿಕೊಂಡ ಪಾಕಿಸ್ತಾನಿ ನಾಯಕರು!
ನೆಟ್ಟಿಗರು ಏನಂದ್ರು?
ʼʼವಾವ್. ಈ ಆನೆ ನಮ್ಮ ಮನೆಯಲ್ಲಿರಬೇಕು ಎನ್ನುವ ಬಯಕೆ ಈಗಾ ಕಾಡುತ್ತಿದೆʼʼ ಎಂದು ಒಬ್ಬರು ಹೇಳಿದ್ದಾರೆ. ʼʼಅದ್ಬುತʼʼ ಎಂದು ಇನ್ನೊಬ್ಬರು ಉದ್ಘರಿಸಿದ್ದಾರೆ. ಮತ್ತೊಬ್ಬರು ʼʼಈ ವಿಡಿಯೊ ಇಷ್ಟವಾಯಿತುʼʼ ಎಂದಿದ್ದಾರೆ. ʼʼಆನೆ ತನ್ನ ಮಾವುತನನ್ನು ನಾಜೂಕಾಗಿ ಹಿಡಿದುಕೊಂಡಿದೆ. ಅದಕ್ಕೆ ಗಿತ್ತು ತಾನೆಷ್ಟು ಶಕ್ತಿಶಾಲಿ ಎಂದು. ಅದಕ್ಕೆ ಮಾವುತನ ಜತೆ ಸೌಮ್ಯವಾಗಿ ನಡೆದುಕೊಂಡಿದೆʼʼ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ʼʼನಿಜವಾದ ಪ್ರೀತಿ ಎಂದರೆ ಇದುʼʼ ಎಂದಿದ್ದಾರೆ ಮಗದೊಬ್ಬರು. ʼʼಸೌಂದರ್ಯ, ಮುಗ್ಧ, ಪರಿಶುದ್ಧ, ನಿರುಪದ್ರವಿ, ನಿಸ್ವಾರ್ಥ ಪ್ರೀತಿ ಮತ್ತು ಬಂಧ. ಇದನ್ನು ಮನುಷ್ಯರಲ್ಲಿ ನೋಡಲು ಕಷ್ಟʼʼ ಎಂಬ ಅಭಿಪ್ರಾಯ ಮತ್ತೊಬ್ಬ ನೋಡುಗರದ್ದು.
ಆನೆಯೊಂದಿಗಿನ ಮನುಷ್ಯನ ಬಾಂಧವ್ಯ ತಿಳಿಸಿದ ʼದಿ ಎಲಿಫೆಂಟ್ ವಿಸ್ಪರ್ಸ್ʼ
ಆಸ್ಕರ್ ವಿಜೇತ ಭಾರತದ ಡಾಕ್ಯಮೆಂಟರಿ ʼದಿ ಎಲಿಫೆಂಟ್ ವಿಸ್ಪರ್ಸ್ʼ ಕೂಡ ಮಾನವ ಮತ್ತು ಆನೆಯ ಬಾಂಧವ್ಯದ ಮೇಲೆ ಬೆಳಕು ಚೆಲ್ಲುತ್ತದೆ. ತಮಿಳುನಾಡಿನಲ್ಲಿ ನಡೆದ ಸತ್ಯ ಘಟನೆ ಆಧರಿಸಿ ಈ ಡಾಕ್ಯುಮೆಂಟ್ ತಯಾರಿಸಲಾಗಿದೆ. ಕರ್ನಾಟಕ ಮತ್ತು ತಮಿಳುನಾಡಿನ ಗಡಿ ಭಾಗದಲ್ಲಿನ ಬೊಮ್ಮನ್ ಮತ್ತು ಬೆಳ್ಳಿ ದಂಪತಿ ಮತ್ತು ಅನಾಥ ಆನೆಮರಿ ರಘು ನಡುವೆ ಹೇಗೆ ಉತ್ತಮ ಬಾಂಧವ್ಯವೊಂದು ಚಿಗುರೊಡೆಯಿತು ಎನ್ನುವುದನ್ನು ಇದು ಮಾರ್ಮಿಕವಾಗಿ ತೆರೆ ಮೇಲೆ ಮೂಡಿಸಿದೆ.