ಇತ್ತೀಚಿನ ವರ್ಷಗಳಲ್ಲಿ ಮದುವೆ ಪೂರ್ವ ಫೋಟೋಶೂಟ್ ಎನ್ನುವುದು ಒಂದು ಟ್ರೆಂಡ್ ಸೃಷ್ಟಿಸಿದೆ. ಇತ್ತೀಚೆಗೆ ಬಹುತೇಕ ಮದುಮಕ್ಕಳು ಈ ಪ್ರೀ ವೆಡ್ಡಿಂಗ್ ಫೋಟೋಶೂಟ್ ನಡೆಸುತ್ತಾರೆ. ಒಬ್ಬರಿಗಿಂತ ಒಬ್ಬರು ವಿಭಿನ್ನವಾಗಿ ಫೋಟೊ ತೆಗೆಸಿಕೊಂಡು ಅದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಹಾಗೇ ಸದಾ ನೆನಪಾಗಿ ಆ ಫೋಟೋ-ವಿಡಿಯೊಗಳನ್ನು ಇಟ್ಟುಕೊಳ್ಳುತ್ತಾರೆ. ಈ ಮಧ್ಯೆ ಕೆಲವು ಪ್ರೀ ವೆಡ್ಡಿಂಗ್ ಫೋಟೋ ಶೂಟ್ನಲ್ಲಿ ಅವಘಡ ಉಂಟಾಗಿದ್ದೂ ವರದಿಯಾಗಿದೆ.
ಕೇರಳದಲ್ಲಿ ಜೋಡಿಯೊಂದು ದೇವಸ್ಥಾನದಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ನಡೆಸಿತ್ತು. ಅಲ್ಲೊಂದು ಆನೆಯೂ ಇತ್ತು. ಆ ಆನೆ ಮೊದಲು ಶಾಂತವಾಗಿಯೇ ಇತ್ತು. ವಧು-ವರ ಇಬ್ಬರೂ ಆನೆಯ ಎದುರು ನಿಂತು ಕೂಡ ಪೋಸ್ ಕೊಟ್ಟಿದ್ದರು. ಅದುವರೆಗೆ ಆನೆ ಸುಮ್ಮನೆ ಇತ್ತು. ಆದರೆ ನೋಡನೋಡುತ್ತಿದ್ದಂತೆ ಕೆರಳಿ ಅವಘಡ ಸೃಷ್ಟಿಸಿದೆ. ಮುಂದಕ್ಕೆ ಹೆಜ್ಜೆ ಹಾಕುತ್ತಿದ್ದ ಆನೆ, ಒಮ್ಮೆಲೇ ಹಿಂದಿರುಗಿದೆ. ಅಲ್ಲಿಯೇ ಪಕ್ಕದಲ್ಲಿ ನಿಂತಿದ್ದ ಇನ್ನೊಬ್ಬ ಮಾವುತನನ್ನು ಸೊಂಡಿಲಲ್ಲಿ ಎತ್ತಿ, ಕೆಡವಿದೆ. ಆತನ ಬಟ್ಟೆಯನ್ನೂ ಕಳಚಿದೆ. ಇತ್ತ ಬಂದಿದ್ದ ವಧು-ವರರು ಕೂದಲೆಳೆ ಅಂತರದಲ್ಲಿ ಆನೆ ದಾಳಿಯಿಂದ ಪಾರಾಗಿದ್ದರು.
@weddingmojito ಎಂಬ ಇನ್ಸ್ಟಾಗ್ರಾಂ ಅಕೌಂಟ್ನಲ್ಲಿ ಈ ವಿಡಿಯೊ ಶೇರ್ ಆಗಿದೆ. ಅಲ್ಲಿ ಅನೇಕರು ಆನೆ ಕೆರಳಿದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರೆ, ಇನ್ನೂ ಹಲವರು, ಈ ಜೋಡಿ ದೇವಸ್ಥಾನದಲ್ಲಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ನಡೆಸಬಾರದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಾಸ್ತವದಲ್ಲಿ ಆನೆಗಳು ಇರಬೇಕಾದದ್ದು ಅರಣ್ಯದಲ್ಲಿ. ಆದರೆ ಬುದ್ಧಿಯಿಲ್ಲದ ಮನುಷ್ಯರು, ಅದನ್ನು ಬಂಧಿಸಿ ಸೆರೆಯಲ್ಲಿಡುತ್ತಾರೆ. ಸಾಲದ್ದಕ್ಕೆ ಆ ಪ್ರಾಣಿಯನ್ನು ಸರಪಳಿ ಹಾಕಿ, ಬಂಧಿಸಿ ಥಳಿಸುತ್ತಾರೆ. ಅದಕ್ಕಾಗಿಯೇ ಆನೆಗಳು ಕೆರಳುತ್ತವೆ ಎಂದು ಒಬ್ಬರು ಹೇಳಿದ್ದಾರೆ.
ಇದನ್ನೂ ಓದಿ: Viral Video| ವೈರ್ ಆ ಕಡೆ ಬಂತಾ?- ಪರಿಶೀಲನೆ ಮಾಡಿದ ಎಲೆಕ್ಟ್ರಿಷಿಯನ್ ಬೆಕ್ಕು ಇದು!