Site icon Vistara News

Viral News | ಗೋಡಂಬಿ ಉದ್ಯಾನದಲ್ಲಿ ಮದ್ಯ ಕುಡಿದ 24 ಆನೆಗಳು ಮಾಡಿದ್ದೇನು? ಸ್ಥಳೀಯರು ಡ್ರಮ್​ ಬಡಿಯಬೇಕಾಯ್ತು !

Elephants Drunk Local Liquor In Odisha

ವಿಶ್ವದಲ್ಲಿ ಮದ್ಯಪ್ರಿಯರ ಸಂಖ್ಯೆ ದೊಡ್ಡದಿದೆ. ಖುಷಿಗೆ ಕುಡಿಯುವವರು, ದುಃಖಕ್ಕೆ ಕುಡಿಯುವವರು, ರುಚಿಗಾಗಿ, ಅಮಲಿಗಾಗಿ..ಸ್ನೇಹಿತರು ಸಿಕ್ಕರೆಂದು, ಪ್ರೀತಿಸಿದವರು ದೂರವಾದವರೆಂದು..ಹೀಗೆ ನಾನಾ ಕಾರಣಗಳಿಗೆ ಮದ್ಯ ಸೇವಿಸುವವರು ಒಂದೆಡೆಯಾದರೆ, ಯಾವುದೇ ಕಾರಣ ಇಲ್ಲದೆ ಇದ್ದರೂ ಅದನ್ನು ಕುಡಿಯುವವರ ಸಂಖ್ಯೆಯೂ ಕಡಿಮೆಯಿಲ್ಲ. ಹೀಗೆ ಮನುಷ್ಯರ ಪಾಲಿಗೆ ‘ಅಗತ್ಯ’ಗಳಲ್ಲಿ ಒಂದಾಗುತ್ತಿರುವ ಮದ್ಯವನ್ನು ಪ್ರಾಣಿಗಳು, ಅದರಲ್ಲೂ ಆನೆಗಳು ಸೇವಿಸಿದರೆ ಏನಾಗುತ್ತದೆ?

ಹಲವು ವಿಧದ ಬ್ರ್ಯಾಂಡ್​ಗಳ ಅಲ್ಕೋಹಾಲ್​ಗಳು ಲಭ್ಯವಿದ್ದರೂ, ದೇಶದಲ್ಲಿ ಅನೇಕ ಕಡೆ ದೇಶೀಯವಾಗಿ ಮದ್ಯ ತಯಾರಿಸುವವರು ಇದ್ದಾರೆ. ಅವೆಲ್ಲ ಅನುಮೋದಿತವಲ್ಲದ ಮದ್ಯಗಳ ಸಾಲಿಗೆ ಸೇರುತ್ತವೆ. ಕಳ್ಳಬಟ್ಟಿ ಎಂದೇ ಕರೆಯಲಾಗುತ್ತಿದೆ. ಇಂಥ ಅಕ್ರಮ ಮದ್ಯದ ತಯಾರಕರು ಪೊಲೀಸರ ಕಣ್ಣಿಂದ ತಪ್ಪಿಸಿಕೊಳ್ಳುವ ಸಲುವಾಗಿ, ಅರಣ್ಯ ಪ್ರದೇಶಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.

ಹಾಗೇ, ಒಡಿಶಾದ ಕಿಯೋನ್​ಜರ್​​ ಜಿಲ್ಲೆಯ ಹಳ್ಳಿಯೊಂದರ ಬುಡಕಟ್ಟು ಜನಾಂಗದ ಜನರು, ಸಮೀಪದ ಶಿಲಿಪಾದಾ ಗೋಡಂಬಿ ಉದ್ಯಾನದಲ್ಲಿ ಮದ್ಯ ತಯಾರು ಮಾಡಲು ಎಲ್ಲ ಸಿದ್ಧತೆ ಮಾಡಿಟ್ಟಿದ್ದರು. ಅಲ್ಲೇ ಕೊಳದ ಬಳಿ ದೊಡ್ಡ ಹಂಡೆಯಲ್ಲಿ ‘ಮಹುವಾ’ ಹೂವನ್ನು ನೆನೆಸಿಟ್ಟಿದ್ದರು. ಈ ಮಹುವಾ ಹೂವನ್ನು ನೀರಿನಲ್ಲಿ ಸರಿಯಾಗಿ ನೆನೆಹಾಕಿ, ಅದು ಹುದುಗು ಬಂದ ನೀರಿನಿಂದಲೇ ಇವರು ಲಿಕ್ಕರ್​ ತಯಾರು ಮಾಡುತ್ತಾರೆ. ಅದೇ ಪ್ರಕ್ರಿಯೆಗಾಗಿ ಅಲ್ಲಿ ಮಹುವಾ ಹೂವು ಮಿಶ್ರಿತ ನೀರು ಇಡಲಾಗಿತ್ತು. ಹಳ್ಳಿಯ ಜನರು ಆ ನೀರನ್ನು ಅಲ್ಲಿಟ್ಟು ಮನೆಗೆ ಬಂದಿದ್ದರೆ, ಅತ್ತ ಬಾಯಾರಿಕೆ ನೀಗಿಸಿಕೊಳ್ಳಲು ಕೊಳದ ಬಳಿ ಬಂದಿದ್ದ ಸುಮಾರು 24 ಆನೆಗಳು ಆ ಮಹುವಾ ಮಿಶ್ರಣದ ನೀರನ್ನು ಕುಡಿದಿದ್ದವು.

ಹೀಗೆ ಲಿಕ್ಕರ್​ ಕುಡಿದು ಅಮಲೇರಿಸಿಕೊಂಡ ಆ 24 ಆನೆಗಳು ಅದೇ ಸ್ಥಳದಲ್ಲಿಯೇ ಮಲಗಿ ನಿದ್ದೆಹೋಗಿವೆ. 10-12 ತಾಸು ಅವು ನಿದ್ದೆ ಮಾಡಿವೆ. ಮುಂಜಾನೆ 6ಗಂಟೆಗೆ ಹಳ್ಳಿಯ ಜನರು ಮತ್ತದೇ ಗೋಡಂಬಿ ಉದ್ಯಾನಕ್ಕೆ ಹೋಗುವಷ್ಟರಲ್ಲಿ ಅಲ್ಲೆಲ್ಲ ಧ್ವಂಸವಾಗಿತ್ತು. ಮಹುವಾ ಮಿಶ್ರಿತ ನೀರು ಸಂಪೂರ್ಣ ಖಾಲಿಯಾಗಿತ್ತು. ಅಷ್ಟೇ ಅಲ್ಲದೆ, ಸುತ್ತಮುತ್ತ ಎಲ್ಲ ಆನೆಗಳೇ ತುಂಬಿಹೋಗಿದ್ದವು. ಅವು ಗಾಢ ನಿದ್ದೆಯಲ್ಲಿ ಇದ್ದವು. ‘ಸ್ಥಳದಲ್ಲಿ 9 ಸಲಗಗಳು, ಆರು ಹೆಣ್ಣಾನೆಗಳು ಮತ್ತು 9 ಆನೆಮರಿಗಳು ಇದ್ದವು’ ಎಂದು ಗ್ರಾಮಸ್ಥ ನಾರಿಯಾ ಸಾಥಿ ತಿಳಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಕರೆಸಲಾಗಿದೆ. ಆನೆಗಳನ್ನು ಎಬ್ಬಿಸಲು ಡ್ರಮ್​ಗಳನ್ನು ಬಾರಿಸಲಾಗಿದೆ. ಆದರೂ ಆನೆಗಳು ಎದ್ದಿದ್ದು ಸುಮಾರು 10ಗಂಟೆ ಹೊತ್ತಿಗೆ. ನಂತರ ಅಲ್ಲಿಂದ ನಿಧಾನಕ್ಕೆ ಅವು ದಟ್ಟಾರಣ್ಯದೊಳಕ್ಕೆ ಸರಿದುಹೋಗಿವೆ ಎಂದು ಸಾಥಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Viral news | ಈ ರೆಸ್ಟೋರೆಂಟಿನಲ್ಲಿ ಮೀನೂ ಹಿಡಿಯಬಹುದು! ಅದೇ ಮೀನಿನ ಊಟವನ್ನೂ ಮಾಡಿ!

Exit mobile version