Site icon Vistara News

Viral Video | ಕೊಳಕ್ಕೆ ಬಿದ್ದ ಮರಿಯಾನೆ ರಕ್ಷಿಸಿದ ಆನೆಗಳು; ಬೇಲಿಯಾಚೆಗಿದ್ದ ಆನೆಗೆ ಇನ್ನಿಲ್ಲದ ತಳಮಳ !

Elephants

ಸೋಷಿಯಲ್​ ಮೀಡಿಯಾಗಳಲ್ಲಿ ಆನೆಗಳಿಗೆ ಸಂಬಂಧಿಸಿದ ಅನೇಕ ವಿಡಿಯೋಗಳನ್ನು ಈಗಾಗಲೇ ನೋಡಿರುತ್ತೀರಿ. ಹಾಗೇ ಈಗ ಮತ್ತೊಂದು ವಿಡಿಯೋ ಸಿಕ್ಕಾಪಟೆ ವೈರಲ್​ ಆಗುತ್ತಿದೆ. ಒಂದು ಪುಟ್ಟ ಆನೆಮರಿ ಕೊಳಕ್ಕೆ ಬಿದ್ದಾಗ ಎರಡು ಆನೆಗಳು ಅದನ್ನು ರಕ್ಷಣೆ ಮಾಡುವ ಪರಿ ನೆಟ್ಟಿಗರ ಮನಮುಟ್ಟಿದೆ. Gabriele Corno ಎಂಬ ಟ್ವಿಟರ್​ ಬಳಕೆದಾರರು ವಿಡಿಯೋ ಶೇರ್ ಮಾಡಿಕೊಂಡು ‘ಸಿಯೋಲ್​ (ದಕ್ಷಿಣ ಕೊರಿಯಾ) ನಲ್ಲಿರುವ ಒಂದು ಅಭಯಾರಣ್ಯದಲ್ಲಿ ಕಂಡು ಬಂದ ಸನ್ನಿವೇಶ’ ಎಂದು ಹೇಳಿದ್ದಾರೆ.

‘ಆನೆಯೊಂದು ತನ್ನ ಮರಿಯನ್ನು ಪಕ್ಕದಲ್ಲೇ ನಿಲ್ಲಿಸಿಕೊಂಡು ಕೊಳದಲ್ಲಿ (ಅದೊಂದು ಮಾನವ ನಿರ್ಮಿತ ಕೊಳ) ನೀರು ಕುಡಿಯುತ್ತಿತ್ತು. ಮರಿಯಾನೆಯೂ ತನ್ನ ಗಿಡ್ಡದಾದ ಸೊಂಡಲಿನಿಂದ ನೀರು ಹೀರಿಕೊಳ್ಳುತ್ತಿತ್ತು. ಆದರೆ ಅದು ತೀರ ಸಣ್ಣಗಿದ್ದ ಕಾರಣ, ಆಯ ತಪ್ಪಿ ಅಕಸ್ಮಾತ್​ ಆಗಿ ನೀರಿನಲ್ಲಿ ಬಿದ್ದುಹೋಯಿತು. ಮರಿಯಾನೆ ಬಿದ್ದ ತಕ್ಷಣ, ಮೇಲೆ ಇದ್ದ ಆನೆ ಒಮ್ಮೆಲೇ ಅಲರ್ಟ್ ಆಯಿತು. ಅಷ್ಟೇ ಅಲ್ಲ, ಅಲ್ಲೇ ಸ್ವಲ್ಪ ದೂರದಲ್ಲಿ ಇದ್ದ ಆನೆಯೊಂದು ಲಘುಬಗೆಯಿಂದ ಓಡೋಡಿ ಬಂತು. ಇನ್ನೊಂದು ಆನೆ ಬರಲು ಪ್ರಯತ್ನಿಸಿತಾದರೂ ಗೇಟ್ ಹಾಕಿದ್ದರಿಂದ ಕೊಳದ ಬಳಿ ಬರಲಾಗದೆ ಪರಿತಪಸಿತು. ಗೇಟ್​ ಬುಡದಲ್ಲಿ ನಿಂತು ಅತ್ತಿಂದತ್ತ ಓಡಾಡಿ ತನ್ನ ತಳಮಳವನ್ನು ಹೊರಹಾಕುತ್ತಿತ್ತು. ಕೊಳದಲ್ಲಿ ಬಿದ್ದಿದ್ದ ಆನೆ ಮರಿ ಮುಳುಗುವಷ್ಟು ನೀರು ಅಲ್ಲಿತ್ತು. ಹೀಗಾಗಿ ಅದು ಏನು ಮಾಡಲು ತೋಚದೆ, ಸೊಂಡಿಲನ್ನು ಸ್ವಲ್ಪವೇ ಮೇಲೆತ್ತುತ್ತಿತ್ತು. ಈ ಎರಡು ದೊಡ್ಡ ಆನೆಗಳು ತಾವೂ ಕೊಳಕ್ಕೆ ಇಳಿದು, ಅದನ್ನು ಕರೆದುಕೊಂಡು ಬಂದಿದ್ದನ್ನು ವಿಡಿಯೋದಲ್ಲಿ ನೋಡಬಹುದು.

ಆನೆಗಳು ಮರಿಯಾನೆಯನ್ನು ರಕ್ಷಿಸಿದ ರೀತಿ ಮತ್ತು ಅದು ನೀರಿಗೆ ಬೀಳುತ್ತಿದ್ದಂತೆ ಇವು ತೋರಿದ ಸಮಯಪ್ರಜ್ಞೆಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ‘ಆನೆಗಳು ಮರಿಯನ್ನು ರಕ್ಷಿಸುವ ಹಲವು ವಿಡಿಯೋಗಳನ್ನು ನೋಡಿದ್ದೇನೆ. ಎಲ್ಲವೂ ಖುಷಿಕೊಡುತ್ತವೆ’ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ‘ಆ ಮರಿ ಬಿದ್ದ ತಕ್ಷಣ ಆನೆಗಳು ಅದರ ರಕ್ಷಣೆಗೆ ಆನೆಗಳು ತೋರಿಸಿದ ಅವಸರ ನೋಡಿ ಆಶ್ಚರ್ಯವಾಯಿತು’ ಎಂದು ಮತ್ತೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Viral Video | ಸ್ವಾತಂತ್ರ್ಯ ಹಬ್ಬಕ್ಕಾಗಿ ಸಿಎಂ ಮಮತಾ ಬ್ಯಾನರ್ಜಿ ಭರ್ಜರಿ ಡ್ಯಾನ್ಸ್​

Exit mobile version