ಕೆಲಸ ಮಾಡುವ ಕಚೇರಿಗೆ, ಕಂಪನಿಗೆ 5-10 ನಿಮಿಷ, ಅಪರೂಪಕ್ಕೊಮ್ಮೆ 20 ನಿಮಿಷ ತಡವಾಗಿ ಹೋಗುವುದೆಲ್ಲ ತೀರ ಸಾಮಾನ್ಯ. ಇದು ಎಲ್ಲರಿಗೂ ಅನ್ವಯ ಎಂದು ಹೇಳಲಾಗದು. ಅನೇಕರು ಸಮಯಕ್ಕೆ ಸರಿಯಾಗಿ ಅಥವಾ ಅವಧಿಗೂ ಮುನ್ನವೇ ಆಫೀಸ್ನಲ್ಲಿ ಇರುತ್ತಾರೆ. ಇಷ್ಟೆಲ್ಲ ಪೀಠಿಕೆ ಯಾಕೆಂದರೆ, ಇಲ್ಲೊಬ್ಬ ಉದ್ಯೋಗಿ ಕಚೇರಿಗೆ 20 ನಿಮಿಷ ತಡವಾಗಿ ಹೋಗಿದ್ದಕ್ಕೆ ಕೆಲಸವನ್ನೇ ಕಳೆದುಕೊಂಡಿದ್ದಾರೆ. ಹೀಗೊಂದು ಘಟನೆ ಎಲ್ಲಿ ನಡೆದಿದ್ದು ಎಂಬುದು ಗೊತ್ತಾಗಿಲ್ಲ. ಆದರೆ ತಡವಾಗಿ ಹೋದವನ ಸಹೋದ್ಯೋಗಿ ರೆಡ್ಡಿಟ್ನಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ. ‘ಕಳೆದ ಏಳು ವರ್ಷಗಳಿಂದ ಇದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಸ್ನೇಹಿತ, ಇಷ್ಟು ವರ್ಷದಲ್ಲಿ ಮೊಟ್ಟ ಮೊದಲಿಗೆ ಒಂದು ದಿನ 20 ನಿಮಿಷ ತಡವಾಗಿ ಬಂದ. ಅದೇ ಕಾರಣಕ್ಕೆ ಅವನನ್ನು ಕೆಲಸದಿಂದ ವಜಾಗೊಳಿಸಲಾಯಿತು’ ಎಂದು ಬರೆದುಕೊಂಡಿದ್ದಾರೆ.
ಆ ವ್ಯಕ್ತಿ ಏಳುವರ್ಷಗಳಲ್ಲಿ ಒಮ್ಮೆಯೂ ತಡವಾಗಿ ಬಂದಿರಲಿಲ್ಲ. ಆತನನ್ನು ಕೆಲಸದಿಂದ ತೆಗೆದಿದ್ದನ್ನು ನಾವೆಲ್ಲ ಬಲವಾಗಿ ವಿರೋಧಿಸಿದ್ದೇವೆ. ನನ್ನ ಸಹೋದ್ಯೋಗಿಗೆ ಒಂದು ನೋಟಿಸ್ ಕೂಡ ನೀಡದೆ, ಏಕಾಏಕಿ ಕೆಲಸದಿಂದ ವಜಾಗೊಳಿಸಲಾಗಿದೆ. ಆತನನ್ನು ವಾಪಸ್ ಪಡೆಯುವವರೆಗೂ ನಾವೆಲ್ಲ ಆಫೀಸ್ಗೆ ತಡವಾಗಿಯೇ ಹೋಗಬೇಕು ಎಂದು ನಿರ್ಧರಿಸಿದ್ದೇವೆ. ನಮ್ಮ ಮ್ಯಾನೇಜರ್ ತೆಗೆದುಕೊಂಡ ಕ್ರಮ ಇಷ್ಟವಾಗಲಿಲ್ಲ. ನಾವು ಬರುವ ದಾರಿಯಲ್ಲಿ ಟ್ರಾಫಿಕ್ ಇರುತ್ತದೆ ಅಥವಾ ಇನ್ಯಾವುದೋ ಕಾರಣಕ್ಕೆ ತಡವಾಗುತ್ತದೆ. ಅಷ್ಟು ಸಣ್ಣ ವಿಷಯಕ್ಕೆಲ್ಲ ಕೆಲಸದಿಂದಲೇ ತೆಗೆದುಹಾಕುವುದು ಎಷ್ಟು ಸರಿ ಎಂದೂ ರೆಡ್ಡಿಟ್ನಲ್ಲಿ ಅವರು ಬರೆದುಕೊಂಡಿದ್ದಾರೆ. ಅಂದಹಾಗೇ, ಈ ಘಟನೆ ನಡೆದು 10 ದಿನ ಕಳೆದೇ ಹೋಗಿದೆ. ಮತ್ತೆ ಆ ವ್ಯಕ್ತಿಯನ್ನು ವಾಪಸ್ ಕೆಲಸಕ್ಕೆ ನೇಮಕ ಮಾಡಿಕೊಳ್ಳಲಾಯಿತೋ, ಇಲ್ಲವೋ ಸ್ಪಷ್ಟವಾಗಿಲ್ಲ.
ರೆಡ್ಡಿಟ್ನಲ್ಲಿ ಈ ಪೋಸ್ಟ್ ನೋಡಿದ ಬಹುತೇಕರೆಲ್ಲ ಕಂಪನಿಯ ಈ ಕ್ರಮವನ್ನು ವಿರೋಧಿಸಿದ್ದಾರೆ. 20 ನಿಮಿಷ ತಡವಾಗಿದ್ದಕ್ಕೆ ಆ ಉದ್ಯೋಗಿ ಆರ್ಥಿಕವಾಗಿ ಸಂಕಷ್ಟಕ್ಕೀಡಾಗಬೇಕಾದ ಪರಿಸ್ಥಿತಿ ಉಂಟಾಗುತ್ತಿದೆ ಎಂದೂ ಹಲವರು ಕಮೆಂಟ್ ಮಾಡಿದ್ದಾರೆ. ಹಾಗೇ, ಕಡಿಮೆ ವೇತನಕ್ಕೆ ಇನ್ಯಾರೋ ಸಿಕ್ಕಿರಬೇಕು. ಹಾಗಾಗಿಯೇ ಈ ವ್ಯಕ್ತಿಯನ್ನು ಕೆಲಸದಿಂದ ತೆಗೆಯಲಾಗಿದೆ ಎಂದು ಒಂದಷ್ಟು ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Viral news | 33ನೇ ವಯಸ್ಸಿಗೇ ಅಜ್ಜಿಯಾದ ಇಂಗ್ಲೆಂಡ್ ಸುಂದರಿಯ ಕಥೆ!