Site icon Vistara News

Fact Check: ʼಅಲ್ಲಾಡ್ಸು ಅಲ್ಲಾಡ್ಸು..ʼ ಪದ್ಯಕ್ಕೆ ಡ್ಯಾನ್ಸ್‌ ಮಾಡಿದವರು ಸಿದ್ದರಾಮಯ್ಯ ಅವರಾ?

siddaramaih fact check

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (siddaramaiah) ಅವರ ಡ್ಯಾನ್ಸಿಂಗ್‌ ಕೌಶಲ ಎಲ್ಲರಿಗೂ ತಿಳಿದಿರುವಂಥದ್ದೇ. ಪ್ರತಿವರ್ಷ ಅವರು ವರುಣಾ ಕ್ಷೇತ್ರದಲ್ಲಿರುವ ತಮ್ಮ ಊರು ಸಿದ್ದರಾಮನಹುಂಡಿಯ ಜಾತ್ರೆಗೆ ತೆರಳುವುದು, ಅಲ್ಲಿ ತಮ್ಮ ಆತ್ಮೀಯರ ಜತೆಗೆ ಜನಪದ ನೃತ್ಯಕ್ಕೆ ಹೆಜ್ಜೆ ಜೋಡಿಸುವುದೂ ಮಾಡುತ್ತಾರೆ. ಅವರು ನೃತ್ಯ ಮಾಡುವ ವಿಡಿಯೋಗಳು ಲಭ್ಯವಿವೆ.

ಆದರೆ ಮೊನ್ನೆ ಅವರು ಎರಡನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಒಂದು ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral video) ಆಗಿದ್ದು, ಅದರಲ್ಲಿ ಸಿದ್ದರಾಮಯ್ಯನವರಂತೆಯೇ ಕಾಣುವ ಒಬ್ಬರು ʼʼಜೀವನ ಟಾನಿಕ್‌ ಬಾಟ್ಲಿ ಕುಡಿಯೋ ಮುಂಚೆ ಅಲ್ಲಾಡ್ಸು..ʼʼ ಎಂದು ಜನಪ್ರಿಯ ಚಿತ್ರಗೀತೆಗೆ ಕುಣಿಯುತ್ತಿದ್ದಾರೆ. ಸುತ್ತಮುತ್ತ ಕುಳಿತವರು ಇದಕ್ಕೆ ಶಿಳ್ಳೆ, ಚಪ್ಪಾಳೆಗಳೊಂದಿಗೆ ಸ್ಪಂದಿಸುತ್ತಿದ್ದಾರೆ. ಇದನ್ನು ಸಿದ್ದರಾಮಯ್ಯನವರ ವಿಡಿಯೋ ಎಂದು ಶೇರ್‌ ಮಾಡಲಾಗುತ್ತಿದೆ.

ಆದರೆ ಇದರಲ್ಲಿ ಇರುವವರು ಸಿದ್ದರಾಮಯ್ಯ ಅಲ್ಲ ಎಂದು ಗೊತ್ತಾಗಿದೆ. ಅವರು ಮೈಸೂರಿನ ಚನ್ನಮಾಯಿಗೌಡ ಎಂದು ತಿಳಿದುಬಂದಿದೆ. 2018ರಲ್ಲೇ ಈ ವಿಡಿಯೋ ಸುತ್ತಾಟ ನಡೆಸುತ್ತಿದ್ದು, ವಿಡಿಯೋದಲ್ಲಿ ಇರುವುದು ತಾನೇ ಎಂದು ಚನ್ನಮಾಯಿಗೌಡ ಖಚಿತಪಡಿಸಿದ್ದಾರೆ.

ಚನ್ನಮಾಯಿಗೌಡ ಅವರು 2013ರಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಬಳಿಕ ಅವರು ಕಾಂಗ್ರೆಸ್‌ ಪಕ್ಷವನ್ನು ಸೇರಿದರು. ಮೈಸೂರಿನ ಕಗ್ಗಲಿಪುರದಲ್ಲಿ ನಡೆದ ಕೃಷಿ ಕಾರ್ಯಾಗಾರದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಾಡಿಗೆ ತಾನು ಈ ಡ್ಯಾನ್ಸ್‌ ಮಾಡಿದ್ದಾಗಿ ಅವರು ಹೇಳಿದ್ದಾರೆ.

ಇತರ ಹಲವು ಮಾಧ್ಯಮಗಳಲ್ಲೂ ಇವರನ್ನು ʼಸಿದ್ದರಾಮಯ್ಯ ಅವರಂತೆ ಕಾಣುವ ವ್ಯಕ್ತಿʼ ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ ಈ ವಿಡಿಯೋದಲ್ಲಿ ಇರುವವರು ಸಿದ್ದರಾಮಯ್ಯ ಅವರಲ್ಲ, ಚನ್ನಮಾಯಿಗೌಡ ಎಂಬುದು ಸ್ಪಷ್ಟವಾಗಿದೆ.

ಇದನ್ನೂ ಓದಿ: Siddaramaiah: ಹಾರ-ತುರಾಯಿ ಸನ್ಮಾನ ಬೇಡ, ಪುಸ್ತಕ ನೀಡಿ ಎಂದ ಸಿದ್ದರಾಮಯ್ಯ; ಸಿಎಂ ಸರಳತೆಗೆ ಎಲ್ಲೆಡೆ ಮೆಚ್ಚುಗೆ

Exit mobile version