೧೬ನೇ ಶತಮಾನದ ಇಟಲಿಯ ಪ್ರಖ್ಯಾತ ಖಗೋಳಶಾಸ್ತ್ರಜ್ಞ/ ಭೌತಶಾಸ್ತ್ರ/ ಗಣಿತಜ್ಞ ಹಾಗೂ ತತ್ವಜ್ಞಾನಿ ಗೆಲಿಲಿಯೋ ಗೆಲಿಲಿ ಅವರದೆನ್ನಲಾದ ಕೈಬರಹವೀಗ ನಕಲಿ ಎಂದು ಸಾಬೀತಾಗಿದೆ. ಮಿಚಿಗನ್ ವಿಶ್ವವಿದ್ಯಾನಿಲಯ ಗೆಲಿಲಿಯೋ ಅವರದೆನ್ನಲಾದ ಕೈಬರಹದ ಪರೀಕ್ಷೆ ನಡೆಸಿದ್ದು, ಅದು ೨೦ನೇ ಶತಮಾನದಲ್ಲಿ ಮಾಡಿದ ಫೋರ್ಜರಿ (Fake letter) ಎಂದು ಬಹಿರಂಗಪಡಿಸಿದೆ.
೧೬ನೇ ಶತಮಾನದಲ್ಲಿ ಗೆಲಿಲಿಯೋ ಅವರೇ ಬರೆದ ಹಾಳೆಯೆಂದು ವಿವರಿಸಲಾದ ಕಾಗದಪತ್ರವೊಂದು ಈವರೆಗೆ ಮಿಚಿಗನ್ ವಿಶ್ವವಿದ್ಯಾನಿಲಯದ ಸಂಗ್ರಹದಲ್ಲಿತ್ತು. ವಿಶ್ವವಿದ್ಯಾನಿಲಯದ ಗ್ರಂಥಾಲಯದಲ್ಲಿ ಇಡಲಾಗಿದ್ದ ಈ ಪತ್ರ, ಅದರ ಹೆಮ್ಮೆಯ ಸಂಗ್ರಹಗಳಲ್ಲಿ ಒಂದಾಗಿತ್ತು. ಈಗ ಅದೇ ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕರು ಈ ಕಾಗದದ ಪರೀಕ್ಷೆ ನಡೆಸಿದ್ದು ಇದೊಂದು ನಕಲಿ ಪತ್ರ ಎಂದು ಬಹಿರಂಗಪಡಿಸಿದ್ದಾರೆ. ಈ ಕಾಗದದಲ್ಲಿ ಇರುವ ವಾಟರ್‌ಮಾರ್ಕ್ ೧೮ನೇ ಶತಮಾನಕ್ಕಿಂತ ಹೆಚ್ಚು ಹಳೆಯದಲ್ಲ. ಗೆಲಿಲಿಯೋ ಮರಣಾ ನಂತರದ ನೂರು ವರ್ಷಗಳ ನಂತರದ ಕಾಗದವಿದು ಎಂದು ಹೇಳಿದ್ದಾರೆ.
ಇದೀಗ ಮಿಚಿಗನ್ ಗ್ರಂಥಾಲಯದ ಪ್ರಮುಖ ಆಕರ್ಷಣೆಯಾಗಿದ್ದ ಪತ್ರ ನಕಲಿ ಎಂದು ತಿಳಿದಾದ ಮೇಲೆ, ಗ್ರಂಥಾಲಯದ ಮಧ್ಯಂತರ ಡೀನ್, ಡೊನ್ನಾ ಎಲ್ ಹೇವರ್ಡ್, ಈ ಗೆಲಿಲಿಯೋ ಆ ಗೆಲಿಲಿಯೋ ಅಲ್ಲ ಎಂದು ತಿಳಿದು ಬಹಳ ಬೇಸರವಾಯಿತು. ಎಂದು ನ್ಯೂಯಾರ್ಕ್ ಟೈಮ್ಸ್ ಜೊತೆ ಮಾತನಾಡುತ್ತಾ ಹೇಳಿದ್ದಾರೆ.
ವಿಶ್ವವಿದ್ಯಾನಿಲಯದಲ್ಲಿ ೧೯೩೮ರ ನಂತರದ ಹಲವು ಪ್ರಸಿದ್ಧ ವ್ಯಕ್ತಿಗಳ ಕಾಗದ ಪತ್ರಗಳಿವೆ. ವಿಶ್ವವಿದ್ಯಾನಿಲಯದ ಟ್ರಸ್ಟಿಗಳಲ್ಲಿ ಒಬ್ಬರಾಗಿದ್ದ ಡೆಟ್ರಾಯ್ಟ್ ಬ್ಯುಸಿನೆಸ್‌ಮೆನ್ ಟ್ರೇಸಿ ಮೆಕ್‌ಗ್ರೆಗರ್ ೧೯೩೪ರಲ್ಲಿ ತಾವು ಹರಾಜಿನಲ್ಲಿ ಪಡೆದ ಅಮೂಲ್ಯ ದಾಖಲೆಗಳನ್ನು ನೀಡುವ ಸಂದರ್ಭ ಈ ದಾಖಲೆಯೂ ಅದರಲ್ಲಿ ಬಹುಮುಖ್ಯವಾಗಿತ್ತು. ಅವರ ಪ್ರಕಾರ ಇದು ಪಿಸಾದ ಬಿಷಪ್ ಒಬ್ಬರ ಸಂಗ್ರಹದಲ್ಲಿ ೧೮೫೮-೧೯೩೧ರವರೆಗೆ ಇದ್ದಿತ್ತೆಂದು ಹೇಳಲಾದ ಕಾಗದಪತ್ರಗಳಾಗಿವೆ.
ಇದನ್ನೂ ಓದಿ | Viral photo | ಅಜ್ಜಿಯ ಶವಪೆಟ್ಟಿಗೆಯೊಂದಿಗೆ ನಗುತ್ತಾ ಕುಳಿತ ಕುಟುಂಬಸ್ಥರು!
ಗೆಲಿಲಿಯೋ ಅವರದ್ದೇ ಎಂದು ನಂಬಲಾಗಿ ಈವರೆಗೆ ವೀಕ್ಷಣೆಗೆ ಇಟ್ಟಿದ್ದ ಈ ಪತ್ರದಲ್ಲಿ ೧೬೦೯ರಲ್ಲಿ ಅವರು ಬರೆದಿದ್ದು ಎನ್ನಲಾದ ದೂರದರ್ಶಕದ ಬಗೆಗಿನ ವಿವರಗಳಿವೆ. ಗೆಲಿಲಿಯೋ ಅವರು ಇಂತಹ ವಿವರಗಳನ್ನು ನಿಜಕ್ಕೂ ಬರೆದಿದ್ದು, ಇದರ ಮುಂದುವರಿದ ಭಾಗ ಇಟಲಿಯ ಫ್ಲಾರೆನ್ಸ್ ಕೇಂದ್ರ ಗ್ರಂಥಾಲಯದಲ್ಲಿ ಪ್ರದರ್ಶನಕ್ಕೆ ಲಭ್ಯವಿದೆ. ಜಾರ್ಜಿಯಾ ವಿಶ್ವವಿದ್ಯಾನಿಲಯದ ಇತಿಹಾಸ ತಜ್ಞ ನಿಕ್ ವೈಲ್ಡಿಂಗ್ ಎನ್ನುವವರು ಇತ್ತೀಚೆಗೆ ಈ ಪತ್ರದ ಬಗ್ಗೆ ಮೊದಲು ಸಂದೇಹ ವ್ಯಕ್ತಪಡಿಸಿದ್ದು, ʻ೧೭ನೇ ಶತಮಾನದ ಡಾಕ್ಯುಮೆಂಟ್ ಇವು ಎಂದು ಹೇಳಲು ಕಷ್ಟವೆನಿಸುತ್ತದೆ. ಇದರಲ್ಲಿ ಬಳಸಲಾದ ಕಾಗದ, ಶಾಯಿ, ಹಾಗೂ ಬರಹದ ಶೈಲಿ ಎಲ್ಲವೂ ಅಷ್ಟು ಹಳೆಯದ್ದೆನ್ನುವುದಕ್ಕೆ ಪುಷ್ಟಿ ನೀಡುತ್ತಿಲ್ಲʼ ಎಂದಿದ್ದರು. ವೈಲ್ಡಿಂಗ್ ಅವರು ತಮ್ಮ ಸಂದೇಹದ ಬಗ್ಗೆ ವಿವರವಾಗಿ ಮಿಚಿಗನ್ ವಿಶ್ವವಿದ್ಯಾನಿಲಯಕ್ಕೆ ಇಮೇಲ್ ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಮಿಚಿಗನ್ ಮಿಶ್ವವಿದ್ಯಾನಿಲ, ಇದರ ಪರೀಕ್ಷೆಗೆ ಮುಂದಾಯಿತು. ಮೂರು ತಿಂಗಳ ನಂತರ ಹಲವು ಪರೀಕ್ಷೆಗಳಿಂದ ವೈಲ್ಡಿಂಗ್ ಅವರ ಸಂದೇಹ ನಿಜವಾಗಿದ್ದು, ಖಂಡಿತವಾಗಿಯೂ ಗೆಲಿಲಿಯೋ ಅವರೇ ಬರೆದ ಕಾಗದಪತ್ರವಲ್ಲ. ಬಹುಶಃ ೧೯೨೦-೩೦ರ ಅಂದಾಜಿನಲ್ಲಿ ಅಂದಿನ ಖ್ಯಾತ ಫೋರ್ಜರ್ ಟೋಬಿಯಾ ನಿಕೋತ್ರ ಅವರ ಬಳಿ ಫೋರ್ಜರಿ ಮಾಡಿಸಿದ್ದಿರಬಹುದು ಎಂದು ಬಹಿರಂಗಪಡಿಸಿದೆ.
ಜೊತೆಗೆ ವಿಶ್ವವಿದ್ಯಾನಿಲಯಕ್ಕೆ ೧೯೩೦ಕ್ಕೂ ಮೊದಲು ಗೆಲಿಲಿಯೋ ಅವರದ್ದು ಎಂದು ಹೇಳಲಾಗುವ ಈ ಪತ್ರದ ಬಗೆಗೆ ಖಚಿತವಾದ ಆಧಾರಗಳಿಲ್ಲ. ಜೊತೆಗೆ, ಈ ಕಾಗದವನ್ನು ನಿಕೋತ್ರ ಅವರು ಮಾಡಿದ್ದರೆನ್ನಲಾದ ಇತರ ಫೋರ್ಜರಿಗೆ ಹೋಲಿಕೆ ಮಾಡಿದರೆ, ಇದಕ್ಕೆ ಹೆಚ್ಚು ಪುಷ್ಟಿ ದೊರೆಯುತ್ತಿದೆ. ಹೀಗಾಗಿ, ಇಂಥದ್ದೊಂದು ನಿರ್ಧಾರಕ್ಕೆ ಬರಲಾಗಿದೆ ಎಂದು ವಿಶ್ವವಿದ್ಯಾನಿಲಯ ಹೇಳಿದೆ. ಇನ್ನು ಮುಂದೆ ಗೆಲಿಲಿಯೋ ಅವರದ್ದು ಎಂದು ಹೇಳಿ ಈ ಪತ್ರ ಪ್ರದರ್ಶಿಸುವಂತಿಲ್ಲ. ಆದರೆ, ಬಹುಶಃ ನಕಲಿ/ ಫೋರ್ಜರಿ ಪತ್ರಗಳ ಅಧ್ಯಯನಕ್ಕೆ ಬಹುಶಃ ಇದೊಂದು ಉತ್ತಮ ವಸ್ತುವಾಗಬಲ್ಲದು ಎಂದೂ ಹೇಳಿದೆ.
ಇದನ್ನೂ ಓದಿ: ʼಬೈ ಬೈ ಸರ್ʼ-ಮೂರೇ ಶಬ್ದದ ರಾಜೀನಾಮೆ ಪತ್ರ ನಮಗೆಲ್ಲ ಮಾದರಿಯೆಂದ ನೆಟ್ಟಿಗರು