ರಿಯೋ ಡಿ ಜನೈರೋ: ಅತ್ಯಂತ ಪ್ರೀತಿಯಿಂದ ಸಾಕಿದ ನಾಯಿಯೊಂದು ಇದ್ದಕ್ಕಿದ್ದಂತೆ ಕಾಣೆಯಾದರೆ ಎಷ್ಟೊಂದು ಬೇಸರವಾಗುತ್ತದೆ ಅಲ್ವಾ? ನಾಯಿ ಅಂತಲ್ಲ, ಕೆಲವರ ಮನೆಯಲ್ಲಿ ಬೆಕ್ಕು ಅತ್ಯಂತ ಪೆಟ್ ಅನಿಮಲ್ ಆಗಿರ್ತದೆ. ದನಗಳು ಕಾಣೆಯಾದಾಗ ಮನೆ ಮಂದಿ ಗೋಳಾಡುವುದನ್ನು ನಾವು ನೋಡೇ ಇದ್ದೇವೆ. ಈ ನಡುವೆ, ಇಷ್ಟೇ ಪ್ರೀತಿಯಿಂದ ಮನೆಯವರ ಜತೆ ಬೆರೆಯುತ್ತಿದ್ದ ಮುದ್ದಿನ ಆಮೆ ಒಂದು ಇದ್ದಕ್ಕಿದ್ದಂತೆ ಕಣ್ಮರೆಯಾಗಿ ಬಿಟ್ಟಿತು. ಈಗಲ್ಲ, 1982ರಲ್ಲಿ… ಮುಂದೇನಾಯಿತು ಈ ಸ್ಟೋರಿ ಓದಿ.
ಬ್ರೆಜಿಲ್ ದೇಶದ ರಾಜಧಾನಿ ರಿಯೋ ಡಿ ಜನೈರೊ ನಗರದಲ್ಲಿ ಕುಟುಂಬವೊಂದು ಆಮೆಯನ್ನು ಸಾಕಿತ್ತು. ಲೆನಿತಾ ಅಲ್ಮಡ ಎನ್ನುವವರಿಗೆ ಬಾಲ್ಯದ ಸಂಗಾತಿಯಾಗಿ ಆಮೆಯೊಂದನ್ನು ತಂದುಕೊಟ್ಟಿದ್ದರು. 1982ರಲ್ಲಿ ಮ್ಯಾನುಯೆಲಾ ಹೆಸರಿನ ಆ ಆಮೆ ಕಾಣೆಯಾಗಿತ್ತು. ಎಂಟು ವರ್ಷದ ಆ ಬಾಲೆಯ ದುಃಖ ನೋಡಲಾರದೆ ಮನೆಮಂದಿಯೆಲ್ಲಾ ಆಮೆಯನ್ನು ಹುಡುಕಾಡಿ ಹೈರಾಣಾಗಿದ್ದರು. ಮನೆಯ ಮುಂಬಾಗಿಲು ತೆರೆದಿದ್ದ ಹೊತ್ತಿನಲ್ಲಿ ಮ್ಯಾನುಯೆಲಾ ಹೊರಗೆ ಹೋಗಿದೆ; ಅದಿನ್ನು ನಮಗೆ ಎಂದೆಂದಿಗೂ ಮರಳಿ ಸಿಗುವುದಿಲ್ಲ ಎಂದು ಗೋಳಾಡಿದ್ದರು. ಲೆನಿತಾ ಎನ್ನುವ ಆ ಮಗು ದೊಡ್ಡವಳಾಗಿ, ಅವಳಿಗೊಂದು ಮಗಳೂ ಹುಟ್ಟಿದಳು. ತನ್ನ ಮಗಳನ್ನು ಸೊಂಟಕ್ಕೇರಿಸಿಕೊಂಡು ತುತ್ತು ಉಣಿಸುತ್ತಾ, ಕಳೆದುಹೋದ ತನ್ನ ಪ್ರೀತಿಯ ಆಮೆಯ ಕಥೆಗಳನ್ನು ಲೆನಿತಾ ಹೇಳುತ್ತಿದ್ದಳು. ಕಳೆದವರೆಲ್ಲ ಎಲ್ಲಿ ಹೋಗುತ್ತಾರೆ ಎಂಬಂಥ ಮಗಳ ಪ್ರಶ್ನೆಗಳಿಗೆ ಚಂದಮಾಮನನ್ನು ತೋರಿಸುತ್ತಾ ಮಗುವಿನೊಂದಿಗೆ ತನ್ನನ್ನೂ ಸಮಾಧಾನ ಮಾಡಿಕೊಳ್ಳುತ್ತಿದ್ದಳು.
ಹೀಗೆ ಆಮೆಯ ನೆನಪು-ಮರೆವಿನೊಂದಿಗೆ 30 ವರ್ಷಗಳೇ ಕಳೆದುಹೋದವು. 2013ರಲ್ಲಿ ಲೆನಿತಾ ಅವರ ತಂದೆ ಲಿಯೋನೆಲ್ ತೀರಿಕೊಂಡರು. ಆಗ ತವರು ಮನೆಗೆ ಹೋಗಿದ್ದ ಲೆನಿತಾ ಮನೆ ಸ್ವಚ್ಛ ಮಾಡುವ ಕೆಲಸ ಮಾಡುತ್ತಿದ್ದರು. ಅಟ್ಟದ ಮೇಲೆ ಚೆಲ್ಲಾಡಿದ್ದ ವಸ್ತುಗಳನ್ನೆಲ್ಲಾ ಪೇರಿಸಿ ಶುಚಿಗೊಳಿಸುತ್ತಿದ್ದಾಗ ಪೆಟ್ಟಿಗೆಯೊಂದರಲ್ಲಿ ಏನೋ ಓಡಾಡಿದಂತೆ ಭಾಸವಾಯ್ತು. ನೋಡಿದರೆ… ಆಮೆ!
ಲೆನಿತಾಳ ಪ್ರೀತಿಯ ಮ್ಯಾನುಯೆಲಾ! ಮೂವತ್ತು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಪ್ರೀತಿಯ ಆಮೆ, ಇದಿಷ್ಟೂ ವರ್ಷಗಳ ಕಾಲ ಇವರ ಮನೆಯ ಅಟ್ಟದಲ್ಲೇ ಸುರಕ್ಷಿತವಾಗಿತ್ತು. ಖುಷಿಯಿಂದ ಕೂಗಿ, ಕಣ್ಣೀರುಗರೆಯುತ್ತಿದ್ದ ಲೆನಿತಾಗೆ ಇದನ್ನು ನಂಬಲೂ ಕಷ್ಟವಾಗಿತ್ತು. ಆದರೆ ಮೂರು ದಶಕಗಳ ಕಾಲ ಆಮೆ ಯಾವ ಆಹಾರವೂ ಇರದೆ ಬದುಕಿತ್ತೇ? ಹಾಗೇನಿಲ್ಲ, ಅಟ್ಟದ ಮೇಲಿದ್ದ ಗೆದ್ದಲು ಮತ್ತಿತರ ಕೀಟಗಳನ್ನು ತಿಂದುಕೊಂಡಿದ್ದ ಆಮೆ ಆರೋಗ್ಯವಾಗಿಯೇ ಇತ್ತು.
ಅಂದ ಹಾಗೆ, ಈ ಅಮೆ ಮರಳಿ ಸಿಕ್ಕಿ ಹತ್ತು ವರ್ಷಗಳೇ ಕಳೆದಿವೆ. ಆಮೆಯನ್ನು ಲೆನಿತಾ ತಮ್ಮ ಮನೆಯಲ್ಲಿ ತಂದು ಸಾಕುತ್ತಿದ್ದಾರೆ. ಮನೆ ತುಂಬ ಖುಷಿಯಿಂದ ಓಡಾಡಿಕೊಂಡಿರುವ ಆಮೆಯನ್ನು ಇತ್ತೀಚೆಗೆ ಪಶು ವೈದ್ಯರ ಬಳಿಕ ಆರೋಗ್ಯ ಪರೀಕ್ಷೆಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಲೆನಿತಾಗೆ ಇನ್ನೊಂದು ಅಚ್ಚರಿ. ಇದುವರೆಗೂ ಹೆಣ್ಣೆಂದು ಬೆಳೆಸಿದ್ದ ಆಮೆ ಹೆಣ್ಣಲ್ಲ ಗಂಡು ಎಂದು ಗೊತ್ತಾಯಿತಂತೆ! ಹಾಗಾಗಿ ಮ್ಯಾನುಯೆಲಾ ಎಂಬ ಹೆಸರನ್ನು ಬದಲಿಸಿ ಮ್ಯಾನುಯೆಲ್ ಎಂದು ಇಡಲಾಗಿದೆ. ಹೆಸರು ಬದಲಾದರೂ ಮನುಷ್ಯರನ್ನು ಪ್ರೀರಿಸುವ ಅದರ ಗುಣ ಸ್ವಲ್ಪವೂ ಬದಲಾಗದು ಅಲ್ವೇ?
ಇದನ್ನೂ ಓದಿ| 777 Charlie : ವೇಸ್ಟ್ ಬಾಡಿ ಚಾರ್ಲಿ ಸೂಪರ್ ಹೀರೊ ಆಗಿದ್ದು ಹೀಗೆ