Site icon Vistara News

Viral Video: ಎಸ್​ಎಸ್​ಎಲ್​​ಸಿಯಲ್ಲಿ ಶೇ. 35 ಅಂಕ ಪಡೆದ ಮಗ; ಭರ್ಜರಿ ಖುಷಿಯಿಂದ ಸಂಭ್ರಮಿಸಿದ ಅಪ್ಪ-ಅಮ್ಮ

Family celebrates After Son Scores 35 % in SSLC

#image_title

ಈಗ ನಮ್ಮ ಶಿಕ್ಷಣ ವ್ಯವಸ್ಥೆ ಹೇಗಿದೆ ಅಂದರೆ, ಇಲ್ಲಿ ಯಶಸ್ಸನ್ನು ಅಂಕದ ಆಧಾರದ ಮೇಲೇ ಅಳೆಯಲಾಗುತ್ತದೆ. ಹೆಚ್ಚು ಅಂಕ ತೆಗೆದುಕೊಂಡವರು ಬುದ್ಧಿವಂತರು, ಕಡಿಮೆ ಅಂಕ ತೆಗೆದುಕೊಂಡವರು ದಡ್ಡರು ಎಂಬ ಸಾಮಾನ್ಯ ವಿಭಜನೆ ಪ್ರಚಲಿತದಲ್ಲಿದೆ. ಹೀಗಾಗಿ ಹೆಚ್ಚಿನ ಪಾಲಕರು ತಮ್ಮ ಮಕ್ಕಳನ್ನು ಹೇಗಾದರೂ ಸರಿ, ಚೆನ್ನಾಗಿ ಓದಿಸಬೇಕು ಎಂದು ಹಠಕ್ಕೆ ಬಿದ್ದು, ಪರೀಕ್ಷೆಗಳು ಬಂದರೆ ಸಾಕು ಇನ್ನಿಲ್ಲದಂತೆ ಮಕ್ಕಳ ಮೇಲೆ ಒತ್ತಡ ಹೇರುತ್ತಾರೆ. ಪರೀಕ್ಷೆಯಲ್ಲಿ ಚೆನ್ನಾಗಿ ಅಂಕ ತೆಗೆದರೆ ಮಕ್ಕಳನ್ನು ಹೊಗಳಿ, ಶ್ಲಾಘಿಸಿ, ಭರ್ಜರಿ ಪಾರ್ಟಿ ಮಾಡುವ ಪಾಲಕರ ಜತೆಗೆ ಈ ಸಮಾಜದಲ್ಲಿ, ಮಕ್ಕಳಿಗೆ ಕಡಿಮೆ ಅಂಕ ಬಂದರೆ ಬೈದು, ವ್ಯಂಗ್ಯ ಮಾಡುವ ಅಪ್ಪ-ಅಮ್ಮನೂ ಇದ್ದಾರೆ.

ಆದರೆ ಮುಂಬಯಿಯ ಈ ಅಪ್ಪ-ಅಮ್ಮ ತದ್ವಿರುದ್ಧ. ಕಡಿಮೆ ಅಂಕ ತೆಗೆದರೆ ಬೈಯ್ಯಲೇಬೇಕಿಲ್ಲ, ಮಕ್ಕಳನ್ನು ಹೀಗಳೆಯಬೇಕು, ಅವರ ಉತ್ಸಾಹ-ಆತ್ಮವಿಶ್ವಾಸವನ್ನು ಕುಂದಿಸಬೇಕು ಎಂದೇನೂ ಇಲ್ಲ. ಮಕ್ಕಳು ಕಡಿಮೆ ಅಂಕ ತೆಗೆದಾಗಲೂ ನಾವು ಸಂಭ್ರಮಿಸಬಹುದು. ಈ ಮೂಲಕವೂ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಬಹುದು. ಓದಲು ಹುಮ್ಮಸ್ಸು ತುಂಬಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಮಗ ಕಡಿಮೆ ಅಂಕ ತೆಗೆದರೂ ಪಾಲಕರು ಭರ್ಜರಿಯಾಗಿ ಸಂಭ್ರಮಿಸಿದ ವಿಡಿಯೊವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್​ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: SSLC Result: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ; ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

ವಿಶಾಲ್ ಕರದ್ ಎಂಬ ಹುಡುಗ 10ನೇ ತರಗತಿ ಬೋರ್ಡ್​ ಪರೀಕ್ಷೆಯಲ್ಲಿ ಎಲ್ಲ ವಿಷಯಗಳಲ್ಲೂ ಕನಿಷ್ಠ 35 ಅಂಕಗಳನ್ನು ಪಡೆದು ಪಾಸಾಗಿದ್ದಾನೆ. ಇದನ್ನು ನೋಡಿದ ಅವನ ಅಪ್ಪ-ಅಮ್ಮ ಸಿಕ್ಕಾಪಟೆ ಖುಷಿ ಪಟ್ಟಿದ್ದಾರೆ. ಅಪ್ಪ ಆಟೋ ಚಾಲಕ, ಅಮ್ಮ ಇನ್ನೊಬ್ಬರ ಮನೆ ಕೆಲಸಕ್ಕೆ ಹೋಗುವವರು. ಮನೆಯಲ್ಲಿ ಆರ್ಥಿಕ ಸಮಸ್ಯೆಯ ಕರಿ ನೆರಳು. ಈ ಹುಡುಗನ 10ನೇ ತರಗತಿ ಪರೀಕ್ಷೆ ಒಂದೆರಡು ದಿನವಿದ್ದಾಗ ಇವರು ಮನೆಯನ್ನು ಕೂಡ ಬದಲು ಮಾಡುವ ಪರಿಸ್ಥಿತಿ ಬಂದಿತ್ತು. ಹಲವು ಗೊಂದಲ-ಸಮಸ್ಯೆಗಳ ಮಧ್ಯೆಯೇ ವಿಶಾಲ್​ ಪರೀಕ್ಷೆ ಬರೆದಿದ್ದ. ತಾನು ಉತ್ತೀರ್ಣನಾಗುವ ನಿರೀಕ್ಷೆ ಸ್ವತಃ ಅವನಿಗೇ ಇರಲಿಲ್ಲ. ಆದರೆ ಅಂಕ ಬಂದಾಗ ಎಲ್ಲ ವಿಷಯಗಳಲ್ಲೂ ಕನಿಷ್ಠ 35 ಅಂಕ ಪಡೆದು ಪಾಸಾಗಿದ್ದ.

ತಾವು ಮತ್ತು ತಮ್ಮ ಮಗ ಕಷ್ಟಪಡುತ್ತಿರುವುದು ಗೊತ್ತಿದ್ದ ಪಾಲಕರಿಗೆ ಮಗನ ಸಾಧನೆ ಸಿಕ್ಕಾಪಟೆ ಖುಷಿಕೊಟ್ಟಿದೆ. ಮೂವರೂ ಒಟ್ಟಿಗೇ ಸೇರಿ ಸಂಭ್ರಮಿಸಿದ್ದಾರೆ. ಇದರಿಂದ ವಿಶಾಲ್​ ಉತ್ಸಾಹ ಹೆಚ್ಚಿದ್ದು. ಮುಂದಿನ ತರಗತಿಗಳನ್ನು ಚೆನ್ನಾಗಿ ಓದಿ, ಒಳ್ಳೆಯ ಕೆಲಸ ಹಿಡಿಯುತ್ತೇನೆ. ನನಗೊಂದು ಉತ್ತಮ ಬದುಕು ಬೇಕು. ಅಪ್ಪ-ಅಮ್ಮನನ್ನೂ ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಆಸೆ ನನ್ನದು ಎಂದು ವಿಶಾಲ್ ಹೇಳಿದ್ದಾನೆ.

Exit mobile version