ಡೆಹ್ರಾಡೂನ್: ಋತುಸ್ರಾವ ಎಂದಾಕ್ಷಣ ನಮ್ಮಲ್ಲಿ ಮೈಲಿಗೆ ಎನ್ನುವ ನಂಬಿಕೆಯೊಂದಿದೆ. ಹೆಣ್ಣು ಮಕ್ಕಳು ಮೊದಲನೇ ಬಾರಿಗೆ ಋತುಸ್ರಾವವಾದಾಗ ಅವರನ್ನು ಬೇರೆ ಇರಿಸುವಂತಹ ಸಂಪ್ರದಾಯವನ್ನೂ ಕೆಲವರು ಆಚರಿಸುತ್ತಾರೆ. ಆದರೆ ಉತ್ತರಾಖಂಡದ ಈ ವ್ಯಕ್ತಿ ಮಾತ್ರ ತಮ್ಮ ಮಗಳ ಋತುಸ್ರಾವವನ್ನು ವಿಜೃಂಭಣೆಯಿಂದ ಪಾರ್ಟಿ ಮಾಡಿ ಆಚರಿಸಿದ್ದಾರೆ. ಇದು ಮೈಲಿಗೆಯ ವಿಚಾರವಲ್ಲ, ಮುಚ್ಚಿಡುವ ವಿಚಾರವೂ ಅಲ್ಲ ಎಂಬ ಸಂದೇಶ ಸಾರಿದ್ದಾರೆ.
ಉತ್ತರಾಖಂಡದ ಉಧಮ್ ಸಿಂಗ್ ನಗರದಲ್ಲಿ ಸಂಗೀತ ಶಿಕ್ಷಕರಾಗಿರುವ ಜೀತೇಂದ್ರ ಭಟ್ ಅವರು ತಮ್ಮ 13ನೇ ವಯಸ್ಸಿನ ಮಗಳು ರಾಗಿಣಿಯ ಋತುಸ್ರಾವವನ್ನು ಪಾರ್ಟಿ ಮಾಡಿ ಸಂಭ್ರಮಿಸಿದ್ದಾರೆ. ಆ ಕಾರ್ಯಕ್ರಮಕ್ಕೆ ತಮ್ಮ ಸಂಗೀತ ಶಾಲೆಯ ಮಕ್ಕಳು, ರಾಗಿಣಿಯ ಸ್ನೇಹಿತರು ಮತ್ತು ಸಂಬಂಧಿಗಳನ್ನು ಆಹ್ವಾನಿಸಿದ್ದರು. ರೆಡ್ ವೆಲ್ವೆಟ್ ಕೇಕ್ ಅನ್ನು ರಾಗಿಣಿ ಕೈನಿಂದ ಕತ್ತರಿಸಲಾಗಿದೆ. ಹಾಗೆಯೇ ಪಾರ್ಟಿಗೆ ಬಂದಿದ್ದ ಹದಿಹರೆಯದ ಹೆಣ್ಣು ಮಕ್ಕಳು ರಾಗಿಣಿಗೆ ಸ್ಯಾನಿಟರಿ ಪ್ಯಾಡ್, ಚಾಕೋಲೇಟ್ ಅನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ.
ಇದನ್ನೂ ಓದಿ: Viral Video: ಇದು ಕೆನ್ನೆಗೆ ಮುತ್ತನ್ನಿಟ್ಟು ಮುದ್ದಾಡುವ ಬೆಕ್ಕು; ವೈರಲ್ ಆಗ್ತಿದೆ ಈ ವಿಡಿಯೊ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೀತೇಂದ್ರ ಅವರು “ಋತುಸ್ರಾವದಲ್ಲಿ ಮುಚ್ಚಿಡುವ ವಿಚಾರ ಏನಿದೆ? ಮುಂದೆ ಮಕ್ಕಳಿಗೆ ಜನ್ಮ ನೀಡಲು ಬೇಕಾಗುವ ಫರ್ಟಿಲಿಟಿ ಹುಟ್ಟುವ ನೈಸರ್ಗಿಕ ಕ್ರಿಯೆಯಿದು” ಎಂದು ಹೇಳಿದ್ದಾರೆ. ಹಾಗೆಯೇ ಜೀತೇಂದ್ರ ಅವರು ಮಗಳ ಮೊದಲ ಋತುಸ್ರಾವಕ್ಕಾಗಿ ಪಾರ್ಟಿ ಮಾಡಿದ್ದ ಫೋಟೋಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡಿದ್ದು, “ಹ್ಯಾಪಿ ಪೀರಿಯಡ್ಸ್ ರಾಗಿಣಿ” ಎಂದು ಬರೆದುಕೊಂಡಿದ್ದಾರೆ.
ಈ ಬಗ್ಗೆ ಮಗಳು ರಾಗಿಣಿ ಕೂಡ ಸಂತಸ ಹೊರಹಾಕಿದ್ದಾರೆ. “ಎಲ್ಲ ತಂದೆ ತಾಯಿಯರಂತೆ ಋತುಸ್ರಾವವನ್ನು ಮೈಲಿಗೆಯಂತೆ ಕಾಣದೆ ಈ ರೀತಿ ಪಾರ್ಟಿ ಮಾಡಿ ಎಲ್ಲರಿಗೂ ಸಂದೇಶ ನೀಡಿರುವ ಬಗ್ಗೆ ಖುಷಿಯಿದೆ. ಈ ಬಗ್ಗೆ ನನ್ನ ತಂದೆ ತಾಯಿಯ ಬಗ್ಗೆ ಹೆಮ್ಮೆಯಿದೆ” ಎಂದು ಆಕೆ ಹೇಳಿಕೊಂಡಿದ್ದಾರೆ. ಹಾಗೆಯೇ ಪಾರ್ಟಿಯಲ್ಲಿ ಭಾಗಿಯಾಗಿದ್ದ ರಾಗಿಣಿಯ ಸ್ನೇಹಿತೆಯರೂ ಕೂಡ ಈ ಕಾರ್ಯಕ್ರಮದ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ.